ಚಳಿಗಾಲದ ಅಧಿವೇಶನ: ಸುವರ್ಣ ಸೌಧದಲ್ಲಿ ಸಾವರ್ಕರ್ ಫೋಟೋ ಅನಾವರಣ; ವ್ಯಾಪಕ ಆಕ್ರೋಶ

Prasthutha|

ಬೆಳಗಾವಿ: ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಇಂದಿನಿಂದ ಆರಂಭವಾಗಲಿದ್ದು, ಅಧಿವೇಶನದ ಮೊದಲ ದಿನ ಮಹನೀಯರ ಭಾವಚಿತ್ರಗಳೊಂದಿಗೆ ಸಾವರ್ಕರ್ ಫೋಟೋವನ್ನು ಅನಾವರಣ ಮಾಡಲಾಗಿದ್ದು, ವಿಪಕ್ಷ ಕಾಂಗ್ರೆಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿತು.

- Advertisement -

ಮಹಾತ್ಮ ಗಾಂಧಿ, ಡಾ.ಬಿ.ಆರ್.ಅಂಬೇಡ್ಕರ್ ಸೇರಿ ಒಟ್ಟು ಏಳು ಮಹನೀಯರ ಭಾವಚಿತ್ರಗಳನ್ನು ಅಧಿವೇಶನದ ಮೊದಲ ದಿನ ಸೋಮವಾರ ಬೆಳಿಗ್ಗೆ 10.30ಕ್ಕೆ ಸ್ಪೀಕರ್ ಅವರಿಂದ ಅನಾವರಣ  ಮಾಡಲಾಯಿತು. ಈ ಬಗ್ಗೆ ಕಾಂಗ್ರೆಸ್  ನಾಯಕರು  ಸದನದ ಹೊರಗೆ ಪ್ರತಿಭಟನೆ ನಡೆಸಿದರು.

ವಿಧಾನಸಭೆಯಲ್ಲಿ ಮಹರ್ಷಿ ವಾಲ್ಮೀಕಿ, ಬಸವಣ್ಣ, ಸಂತ ಶಿಶುನಾಳ ಶರೀಫ, ಕನಕದಾಸ, ನಾರಾಯಣಗುರು, ಅಂಬೇಡ್ಕರ್, ನೆಹರೂ, ಜಗಜೀವನ ರಾಮ್, ಸರದಾರ ವಲ್ಲಭಬಾಯ್ ಪಟೇಲ್, ಕುವೆಂಪು ಮತ್ತಿತರ ಮಹನೀಯರ ಭಾವಚಿತ್ರ ಹಾಕಬೇಕೆಂದು  ಕಾಂಗ್ರೆಸ್ ನಾಯಕರು ಒತ್ತಾಯಿಸಿ ಧರಣಿ ನಡೆಸಿದರು.

- Advertisement -

  ಈ ಮಹನೀಯರ ಭಿತ್ತಿಚಿತ್ರಗಳನ್ನು ಹಿಡಿದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಮ್ ಅಹ್ಮದ್, ಸತೀಶ್ ಜಾರಕಿಹೊಳಿ, ಹಿರಿಯ ಮುಖಂಡರಾದ ಎಚ್ ಕೆ ಪಾಟೀಲ್, ಕೆ ಜೆ ಜಾರ್ಜ್, ಆರ್ ವಿ ದೇಶಪಾಂಡೆ, ಲಕ್ಷ್ಮೀ ಹೆಬ್ಬಾಳ್ಕರ್ ಮತ್ತಿತರ ಮುಖಂಡರು ಬೆಳಗಾವಿ ಸುವರ್ಣಸೌಧದ ಪ್ರವೇಶ ದ್ವಾರದಲ್ಲಿ ಸೋಮವಾರ ಬೆಳಗ್ಗೆ ಪ್ರದರ್ಶನ ನಡೆಸಿದರು.

ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, “ಇದು ಬಿಜೆಪಿ ‘ಹಿಡನ್ ಅಜೆಂಡಾ’. ಮಹಾತ್ಮ ಗಾಂಧಿ ಹತ್ಯೆಯಲ್ಲಿ ಸಾವರ್ಕರ್ ಕೈವಾಡವಿದೆ ಎಂಬ ಆರೋಪ ಮೊದಲಿನಿಂದಲೂ ಇದೆ. ಇಂಥ ವಿವಾದಾತ್ಮಕ ವ್ಯಕ್ತಿಯ ಚಿತ್ರ ಸದನದಲ್ಲಿ ಹಾಕಿದರೆ, ಅವರ ಆತ್ಮಕ್ಕೂ ಶಾಂತಿ ಸಿಗುವುದಿಲ್ಲ’’ ಎಂದು ಕಿಡಿಕಾರಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ಮಾತನಾಡಿ, ಈ ರೀತಿ ಆಗಬಹುದು ಎಂದು ನಿರೀಕ್ಷಿಸಿರಲಿಲ್ಲ. ಈ ಬಗ್ಗೆ ಕಾಂಗ್ರೆಸ್ ಪ್ರಚಾರ ಸಮಿತಿ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ತಿಳಿಸಿದ್ದಾರೆ.

Join Whatsapp