ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣ | ನೈಜ ಆರೋಪಿಯನ್ನು ಬಂಧಿಸದಿರುವುದು ದುರಂತ: WIM

Prasthutha|

ಮಂಗಳೂರು: ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣದಲ್ಲಿ ನೈಜ ಆರೋಪಿಯನ್ನು ಬಂಧಿಸದೆ ಸುದೀರ್ಘ 11 ವರ್ಷದಲ್ಲಿ ಸೂಕ್ತ ವಿಚಾರಣೆ ನಡೆಸದೆ ಇದೀಗ ಪ್ರಕರಣವನ್ನು ಖುಲಾಸೆಗೊಳಿಸಿರುವುದು ದುರಂತ ಎಂದು ಆಕ್ರೋಶ ವ್ಯಕ್ತಪಡಿಸಿರುವ ವಿಮೆನ್ ಇಂಡಿಯಾ ಮೂವ್ಮೆಂಟ್(WIM) ಈ ಕ್ರಮವನ್ನು ತೀವ್ರವಾಗಿ ಖಂಡಿಸಿದೆ.

- Advertisement -

ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಜಿಲ್ಲಾಧ್ಯಕ್ಷೆ  ನೌರೀನ್ ಆಲಂಪಾಡಿ, ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣದಲ್ಲಿ ಡಮ್ಮಿ ಆರೋಪಿಯನ್ನು ಬಂಧಿಸಿ ಸುದೀರ್ಘ 11 ವರ್ಷಗಳ ವಿಚಾರಣೆಯ ಬಳಿಕ ಈಗ ಸಿಬಿಐ ವಿಶೇಷ ನ್ಯಾಯಾಲಯವು ಸಾಕ್ಷಾಧಾರಗಳ ಕೊರತೆಯ ಕಾರಣದಿಂದ ಬಂಧಿತ ಆರೋಪಿಯನ್ನು ನಿರ್ದೋಷಿ ಎಂದು ತೀರ್ಪಿತ್ತಿರುವುದರಲ್ಲಿ ಅತಿಶಯೋಕ್ತಿ ಇಲ್ಲ. ಸಂತೋಷ್ ರಾವ್ ನನ್ನು ಬಂಧಿಸಿದಾಗಲೇ ನೈಜ ಆರೋಪಿಗಳನ್ನು ರಕ್ಷಿಸಲಿಕ್ಕಾಗಿ ಮಾನಸಿಕ ಅಸ್ವಸ್ಥರನ್ನು ಬಲಿ ಕೊಡಲಾಗುತ್ತಿದೆ ಎಂಬ ಕೂಗು ಜಿಲ್ಲೆಯಲ್ಲಿ, ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿತ್ತು. ಈ ಪ್ರಕರಣದಲ್ಲಿ ಸರಿಯಾದ ತನಿಖೆ ನಡೆಸದೆ ಗಂಭೀರ ಲೋಪವೆಸಗಿದೆ ಎಂದು ಹೈಕೋರ್ಟು  ಛೀಮಾರಿ ಹಾಕಿರುವುದು ಕೂಡ ಸ್ಮರಣಾರ್ಹ. ಸಿಐಡಿ, ಸಿಬಿಐ ತನಿಖೆ ನಡೆಸಿಯೂ ಕೂಡ ಸೌಜನ್ಯಾಳಿಗೆ  ನ್ಯಾಯ ದೊರಕಿಸಲು ನ್ಯಾಯ ವ್ಯವಸ್ಥೆ ವಿಫಲವಾಗಿರುವುದು ವಿಪರ್ಯಾಸ. ಇಲ್ಲಿ ನ್ಯಾಯಾಲಯ ಖುಲಾಸೆಗೊಳಿಸಿರುವುದು ಆರೋಪಿಯನ್ನಲ್ಲ ಬದಲಾಗಿ ಹೆಣ್ಮಕ್ಕಳ ನ್ಯಾಯದ ಧ್ವನಿಯನ್ನಾಗಿದೆ ಎಂಬುದು ಗಮನಾರ್ಹ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

       ಈ ಪ್ರಕರಣದಲ್ಲಿ ಉನ್ನತ ಮಟ್ಟದ ಮರು ತನಿಖೆಯನ್ನು ನಡೆಸಿ ಕೃತ್ಯವೆಸಗಿದವರು ಎಷ್ಟೇ ಪ್ರಭಾವಿಗಳಾಗಿದ್ದರೂ ಕಾನೂನಿನಿಂದ ನುಣುಚಿಕೊಳ್ಳದಂತೆ ಕಠಿಣ ಶಿಕ್ಷೆ ಜಾರಿಗೊಳಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.  

Join Whatsapp