ಬೆಂಗಳೂರು: ವಿಮೆನ್ ಇಂಡಿಯಾ ಮೂವ್ಮೆಂಟ್ ಕರ್ನಾಟಕ ರಾಜ್ಯ ಸಮಿತಿ ಸಭೆಯು ರಾಜ್ಯಾಧ್ಯಕ್ಷೆ ಫಾತಿಮಾ ನಸೀಮಾರವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ನಡೆಯಿತು. ಸಭೆಯಲ್ಲಿ ರಾಜ್ಯದ ಮಹಿಳೆಯರ ಸ್ಥಿತಿಗತಿಗಳ ಬಗ್ಗೆ ಚರ್ಚಿಸಿ, ಈ ಕೆಳಗಿನ ನಿರ್ಣಯಗಳನ್ನು ಕೈಗೊಳ್ಳಲಾಯಿತು.
1)ಹುಕ್ಕಾಬಾರ್ ನಿಷೇಧದೊಂದಿಗೆ ಮಧ್ಯಪಾನವೂ ನಿಷೇಧವಾಗಲಿ
ಆರೋಗ್ಯಕ್ಕೆ ಹಾನಿಕರವಾಗಿರುವ ಹುಕ್ಕಾಬಾರನ್ನು ನಿಷೇಧಿಸಿ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆದೇಶ ಹೊರಡಿಸಿರುವುದು ಸ್ವಾಗತಾರ್ಹ. ಆದರೆ ಮಧ್ಯಪಾನವೂ ಕೂಡ ಒಂದು ಸಾಮಾಜಿಕ ಪಿಡುಗಾಗಿದ್ದು ಇದು ದೈಹಿಕ- ಮಾನಸಿಕ -ಬೌದ್ಧಿಕವಾಗಿ ದುಷ್ಪರಿಣಾಮ ಬೀರುತ್ತಿದೆ. ಸಾಮಾಜಿಕವಾಗಿ ಹಲವು ಅಪರಾಧಗಳಿಗೂ ವಿಶೇಷತಃ ಮಹಿಳೆಯರ ವಿರುದ್ಧ ನಡೆಯುವ ಅಪರಾಧ ಕೃತ್ಯಗಳಲ್ಲಿ ಮಧ್ಯಪಾನ ನೇರ ಪಾತ್ರ ವಹಿಸುತ್ತದೆ. ಮಧ್ಯಪಾನಿಗಳ ಕೌಟುಂಬಿಕ ಜೀವನ ಮಾನಸಿಕ ಸ್ಥಿತಿ ಅಸ್ವಸ್ಥತೆಯಿಂದ ಕೂಡಿರುತ್ತದೆ. ಆದ್ದರಿಂದ ಮಧ್ಯಪಾನವನ್ನು ಕೂಡಲೇ ರಾಜ್ಯ ಸರ್ಕಾರ ನಿಷೇಧಿಸಬೇಕೆಂದು ಸಭೆಯು ಒತ್ತಾಯಿಸಿದೆ.
2)ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗಾಗಿ ಹೊರಡಿಸಿರುವ ಆದೇಶವನ್ನು ಕಟ್ಟುನಿಟ್ಟಾಗ ಜಾರಿಗೊಳಿಸಲಿ
ಶಾಲೆಗಳಲ್ಲಿ ವಿದ್ಯಾರ್ಥಿಗಳಿಂದ ಶೌಚಾಲಯ ಶುಚಿಗೊಳಿಸುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಲೈಂಗಿಕ ದೌರ್ಜನ್ಯಗಳು, ಮಕ್ಕಳ ದುರ್ಬಳಕೆ ಕೂಡ ಏರಿಕೆಯಾಗುತ್ತಿದ್ದು, ಇದನ್ನು ತಡೆಯುವ ಉದ್ದೇಶದಿಂದ ರಾಜ್ಯದ ಎಲ್ಲಾ ಸರ್ಕಾರೀ ಅನುದಾನಿತ ,ಅನುದಾನ ರಹಿತ ಶಾಲೆಗಳ ಮಕ್ಕಳ ಜಾಗೃತಿಗಾಗಿ ಸರಕಾರ ಹೊರಡಿಸಿದ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಭೆಯು ಒತ್ತಾಯಿಸುತ್ತದೆ.
3) ಮೌಢ್ಯ ನಿರ್ಮೂಲನೆಗೆ ಸರ್ಕಾರ ಜಾಗೃತಿ ಮೂಡಿಸಲಿ
ಮಹಿಳೆಯರ ಮೇಲೆ ನಿರಂತರ ದೌರ್ಜನ್ಯಗಳು ವರದಿಯಾಗುತ್ತಿವೆ. ಬಾಣಂತಿ- ಋತುಮತಿಯರನ್ನು ಊರಾಚೆ-ಬಯಲಲ್ಲಿ ಇರಿಸುವ ಪ್ರಕರಣಗಳು ವರದಿಯಾಗುತ್ತಿವೆ. ಸರಕಾರವು ಇಂತಹ ಮೌಢ್ಯತೆ ವಿರುದ್ಧ ಜಾಗೃತಿ ಮೂಡಿಸಿ ಮಹಿಳೆಯರ ನೈಸರ್ಗಿಕ ಆರೋಗ್ಯ ಮತ್ತು ಅಭಿಮಾನವನ್ನು ಉಳಿಸುವಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಭೆಯು ಒತ್ತಾಯಿಸುತ್ತದೆ.
ಸಭೆಯಲ್ಲಿ ಉಪಾಧ್ಯಕ್ಷೆ ಶಾಝಿಯ ಬೆಂಗಳೂರು, ಕೋಶಾಧಿಕಾರಿ ರೆಹನಾ ಗುಲ್ಬರ್ಗ ಹಾಗೂ ರಾಜ್ಯ ಸಮಿತಿ ಸದಸ್ಯರು ಹಾಜರಿದ್ದರು.. ರಾಜ್ಯ ಪ್ರಧಾನ ಕಾರ್ಯದರ್ಶಿ ನಸ್ರಿಯಾ ಬೆಳ್ಳಾರೆ ಸ್ವಾಗತಿಸಿ ವರದಿಯನ್ನು ವಾಚಿಸಿದರು. ಕಾರ್ಯದರ್ಶಿ ಸೈದಾ ಬೇಗಂ ಧನ್ಯವಾದಗೈದರು ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿ ನಸ್ರಿಯ ಬೆಳ್ಳಾರೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.