ಪೊಲೀಸ್ ಇಲಾಖೆಯನ್ನು ಮತ್ತಷ್ಟು ಬಲಪಡಿಸುವಲ್ಲಿ ಗೃಹ ಇಲಾಖೆ ಬದ್ಧ: ಅರಗ ಜ್ಞಾನೇಂದ್ರ

Prasthutha|

ಮಂಡ್ಯ; ಜನರ ರಕ್ಷಣೆ ಮಾನಪ್ರಾಣ ಕಾಪಾಡುವಲ್ಲಿ ಪೊಲೀಸ್ ಇಲಾಖೆ ಸದಾ ಕೆಲಸ ನಿರ್ವಹಿಸುತ್ತಿದ್ದು, ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯನ್ನು ಮತ್ತಷ್ಟು ಬಲಪಡಿಸುವಲ್ಲಿ ಗೃಹ ಇಲಾಖೆ ಬದ್ಧವಾಗಿದೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದರು. ನಗರದ ಬನ್ನೂರು ರಸ್ತೆಯ ಡಿ.ಎ.ಆರ್ ಆವರಣದಲ್ಲಿ ನಡೆದ ಮೊದಲನೇ ಹಂತದ 36 ಪೊಲೀಸ್ ವಸತಿ ಗೃಹಗಳ ನಿರ್ಮಾಣದ ಶಂಕುಸ್ಥಾಪನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

- Advertisement -

ಮಂಡ್ಯದಲ್ಲಿ 36 ಪೊಲೀಸ್ ವಸತಿಗೃಹಕ್ಕೆ ರೂ.10 ಕೋಟಿ, ಆಡಳಿತ ಕಚೇರಿಗೆ ರೂ.2.10 ಕೋಟಿ, ಶ್ವಾನದಳದ ಕಟ್ಟಡ ಮತ್ತು ಮಂಡ್ಯ ಸೆಂಟ್ರಲ್ ಪೊಲೀಸ್ ಠಾಣೆಗೆ ರೂ. 2.10 ಕೋಟಿ ,ಹಾಗೂ ಮಳವಳ್ಳಿ ಪೊಲೀಸ್ ಠಾಣೆಗೆ ರೂ. 2.25 ಕೋಟಿ ಅನುದಾನವನ್ನು ಮಂಜೂರು ಮಾಡಿ ಇಂದು ಶಂಕುಸ್ಥಾಪನೆ ಮಾಡಲಾಗಿದೆ ಎಂದು ಹೇಳಿದರು.

ಈ ಒಂದೇ ವರ್ಷದಲ್ಲೇ 200 ಕೋಟಿಗಳನ್ನು ಮಂಜೂರು ಮಾಡಿ ಇಡೀ ರಾಜ್ಯಾದ್ಯಂತ 100 ಪೊಲೀಸ್ ಠಾಣೆಗಳನ್ನು ಕಟ್ಟಲಾಗುತ್ತಿದೆ ಎಂದರು. ರಾಜ್ಯದಲ್ಲಿ ಪೊಲೀಸ್ ವಸತಿಗೃಹಕ್ಕೆ ಸಂಬಂಧಿಸಿದಂತೆ ದೊಡ್ಡ ಸಮಸ್ಯೆಯಾಗಿತ್ತು, ಈ ಸಂಬಂಧ ಈಗಾಗಲೇ 11 ಸಾವಿರ ವಸತಿಗೃಹಗಳನ್ನು ಪೂರ್ಣಗೊಳಿಸಲಾಗಿದೆ ಎಂದರು.

- Advertisement -

ಪೊಲೀಸರು ಅತ್ಯುತ್ತಮವಾದ ಕಟ್ಟಡದಲ್ಲಿ ನೆಮ್ಮದಿಯಿಂದ ಕಾರ್ಯ ನಿರ್ವಹಿಸುವಂತಾಗಬೇಕು ಮತ್ತು ಅವರ ಕೌಟುಂಬಿಕ ಜೀವನ ಸುಗಮವಾಗಿರಲೆಂದು ಗೃಹ 2020-25 ರ ಯೋಜನೆಯಲ್ಲಿ 10 ಸಾವಿರ ಪೊಲೀಸ್ ಗೃಹಗಳಿಗೆ ಬಜೆಟ್ ಮಂಜೂರು ಮಾಡಿ ಈಗಾಗಲೇ ಟೆಂಡರ್ ಕರೆಯಲಾಗುತ್ತಿದೆ ಎಂದರು. ಯಡಿಯೂರಪ್ಪ ಮತ್ತು ಬೊಮ್ಮಾಯಿ ಸರ್ಕಾರ ಕಳೆದ 2 ವರ್ಷದಿಂದ ಪೊಲೀಸ್ ಇಲಾಖೆಗೆ ನೀಡಿದ್ದಷ್ಟು ಅನುದಾನವನ್ನು ಸ್ವಾತಂತ್ರ್ಯ ದೊರೆತ ಇಲ್ಲಿಯವರೆಗೂ ಎರಡು ವರ್ಷಕ್ಕೆ ಇಷ್ಟು ಅನುದಾನವನ್ನು ಕೊಟ್ಟಿರಲಿಲ್ಲ ಪ್ರಸ್ತುತ ನಮ್ಮ ಸರ್ಕಾರ ಪೊಲೀಸ್ ಇಲಾಖೆಗೆ ವಿಶೇಷ ಅನುದಾನ ನೀಡಿದೆ ಎಂದು ತಿಳಿಸಿದರು.

ಈ ಬಾರಿ 140 ಠಾಣೆಗಳನ್ನು ಪಿಎಸ್ ಐ ದಿಂದ ಸಿಪಿಐ ಠಾಣಾಗಳಾಗಿ ಪರಿವರ್ತನೆ ಮಾಡಿದ್ದೇವೆ ಮತ್ತು ಸೈಬರ್ ವಿಭಾಗವನ್ನು ಅತ್ಯಂತ ಶಕ್ತಿಯುತವಾಗಿ ಮಾಡಲಾಗಿದೆ ಮತ್ತು ಜಿಲ್ಲಾ ಮಟ್ಟದಲ್ಲಿ ಸೈಬರ್ ವಿಭಾಗ ಉತ್ತಮವಾಗಿ ಕಾರ್ಯ ನಿರ್ವಹಿಸುವಂತೆ ಮಾಡಲಾಗಿದೆ ಎಂದರು. ವಿಶೇಷವಾಗಿ ಕೊಲೆ-ಅತ್ಯಾಚಾರ ದಂತಹ ಪ್ರಕರಣಗಳು ನಡೆದಾಗ, ಅಲ್ಲಿರುವಂತಹ ಸಬ್ ಇನ್ಸ್ಪೆಕ್ಟರ್ ಗಳಿಗೆ ಸಾಕ್ಷಾಧಾರಗಳನ್ನು ಸಂಗ್ರಹಿಸುವುದರ ಕುರಿತು ತರಬೇತಿ ನೀಡಲು ಯೋಚಿಸಲಾಗಿದೆ ಎಂದರು.

ಜನರ ಮಾನ, ಪ್ರಾಣ ಮತ್ತು ಸ್ವತ್ತನ್ನು ಕಾಪಾಡುವಲ್ಲಿ ಹಾಗೂ ಶಾಂತಿಯುತವಾದ ಮತ್ತು ಆರೋಗ್ಯಯುತವಾದ ಸಮಾಜವನ್ನು ನಿರ್ಮಿಸಲು ಪೊಲೀಸ್ ಇಲಾಖೆಯನ್ನು ಮತ್ತಷ್ಟು ಭದ್ರಗೊಳಿಸಲಾಗುತ್ತಿದೆ. ರಾಜ್ಯದಲ್ಲಿ ಪೊಲೀಸ್ ಇಲಾಖೆಯಲ್ಲಿ ಈಗಾಗಲೇ 16 ಸಾವಿರ ಉದ್ಯೋಗಗಳು ಖಾಲಿಯಿದ್ದು, ಪ್ರತಿವರ್ಷ 4 ಸಾವಿರದಂತೆ ಉದ್ಯೋಗಗಳನ್ನು ಭರ್ತಿ ಮಾಡಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸಿ ನಾರಾಯಣಗೌಡ, ಶಾಸಕರಾದ ಎಂ ಶ್ರೀನಿವಾಸ್, ವಿಧಾನಪರಿಷತ್ ಸದಸ್ಯರಾದ ಕೆ.ಟಿ ಶ್ರೀಕಂಠೇಗೌಡ, ಎನ್ .ಅಪ್ಪಾಜೀಗೌಡ, ನಗರಸಭಾ ಅಧ್ಯಕ್ಷ ಎಚ್ .ಎಸ್ ಮಂಜು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅಶ್ವಿನಿ, ಅಪರ ಪೊಲೀಸ್ ವರಿಷ್ಠಾಧಿಕಾರಿ ಧನಂಜಯ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Join Whatsapp