ಕರ್ನಾಟಕದ ವಿಧಾನಸಭಾ ಚುನಾವಣೆಯಲ್ಲಿ ಮತದಾರರ ತೀರ್ಪನ್ನು ಗೌರವಿಸಿ ಫಲಿತಾಂಶವನ್ನು ಸಕಾರಾತ್ಮಕವಾಗಿ ಸ್ವೀಕರಿಸುವೆವು:ಎಸ್‌ಡಿಪಿಐ

Prasthutha|

►ಪಕ್ಷದ ಕಾರ್ಯಕರ್ತರು ಸಾಮಾಜಿಕ ಜಾಲತಾಣದ ಅನವಶ್ಯಕ ಚರ್ಚೆಗಳಿಂದ ದೂರ ಇದ್ದು ಪಕ್ಷ ಸಂಘಟಿಸಲು ಕರೆ

- Advertisement -

ಮಂಗಳೂರು: ಈ ಬಾರಿಯ ಸಾರ್ವತ್ರಿಕ ಚುನಾವಣೆಯಲ್ಲಿ ಮತದಾರರು ನೀಡಿದ ತೀರ್ಪುನ್ನು ಗೌರವಿಸಿ ಫಲಿತಾಂಶವನ್ನು ಸಕಾರಾತ್ಮಕವಾಗಿ ಸ್ವೀಕರಿಸಿ ಮುಂದಿನ ದಿನಗಳಲ್ಲಿ ಪಕ್ಷ ಸಂಘಟಿಸಲು ಹೆಚ್ಚಿನ ಆದ್ಯತೆ ಕೊಡಲಾಗುವುದು ಎಂದು ಎಸ್‌ಡಿಪಿಐ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದ ಅನ್ವರ್ ಸಾದತ್ ಬಜತ್ತೂರು  ತಿಳಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಕೋಮುವಾದಿ ಪಕ್ಷ ಬಿಜೆಪಿ ತನ್ನ ಕೆಟ್ಟ ಆಡಳಿತದ ಕಾರಣದಿಂದಾಗಿ ಇಂದು ಮಕಾಡೆ ಮಲಗಿದೆ. ಕಾಂಗ್ರೆಸ್ ಪಕ್ಷ ಬಹುಮತದಿಂದ ಅಧಿಕಾರಕ್ಕೆ ಬಂದಿದೆ. ಕರ್ನಾಟಕ ಜನತೆಯ ಮತ್ತು ಜಾತ್ಯಾತೀತ ಮನಸ್ಸುಗಳ ದೃಷ್ಟಿಕೋನವೂ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವುದಾಗಿತ್ತು. ಆ ಹಿನ್ನೆಲೆಯಿಂದ ಎಸ್‌ಡಿಪಿಐ ಪಕ್ಷವೂ ಮೊದಲು ನೂರು ಸ್ಥಾನದಲ್ಲಿ ಸ್ಫರ್ದಿಸುವ ತೀರ್ಮಾನ ಮಾಡಿತ್ತಾದರೂ ಕೊನೆಗೆ ಬಿಜೆಪಿಗೆ ಯಾವುದೇ ರೀತಿಯಲ್ಲಿ ಲಾಭ ಆಗಬಾರದೆಂಬ ದೃಷ್ಟಿಯಿಂದ ಕೇವಲ 16 ಸ್ಥಾನದಲ್ಲಿ ಮಾತ್ರ ಸ್ಪರ್ಧಿಸಿತು. ಈ ಸ್ಪರ್ಧೆಯಿಂದ ಕಳೆದ ಬಾರಿ ಪಡೆದ ಮತಗಳಿಗಿಂತ ಕೆಲವು ಕಡೆ ಹೆಚ್ಚಿನ ಮತಗಳು ಸಿಕ್ಕರೆ, ಇನ್ನು ಕೆಲವು ಕಡೆ ಕಡಿಮೆ ಮತಗಳು ದೊರಕಿದೆ. ಚುನಾವಣೆಯಲ್ಲಿ ಏಳು ಬೀಳುಗಳು, ಆರೋಪಗಳು ಪ್ರತ್ಯಾರೋಪಗಳು, ತಂತ್ರಗಳು ಪ್ರತಿತಂತ್ರಗಳು  ಸಹಜವಾಗಿದೆ ಎಂದು ಹೇಳಿದರು.

- Advertisement -

ಕೋಮುವಾದಿ, ಸರ್ವಾಧಿಕಾರಿ, ಹಾಗೂ ದುರಹಂಕಾರದ  ಬಿಜೆಪಿಯನ್ನು ತೊಲಗಿಸಿದ ಕರ್ನಾಟಕದ ಜನತೆಗೆ ಹೊಸ ಸರ್ಕಾರದಿಂದ ಹಲವಾರು ನಿರೀಕ್ಷೆಗಳು ಇವೆ. ಹಿಂದಿನ ಸರ್ಕಾರಗಳು ಕೋಮು ಆಧಾರಿತವಾಗಿ ತೆಗೆದುಕೊಂಡ ಹಲವಾರು ಕಾನೂನುಗಳು ಹಿಂಪಡೆಯುವುದು ಸೇರಿದಂತೆ ಜನರ ಹಿತದೃಷ್ಟಿಯಿಂದ ಹೊಸ ಹೊಸ ಅಭಿವೃದ್ಧಿ ಕಾರ್ಯಗಳು, ಅಲ್ಪಸಂಖ್ಯಾತರ, ದಲಿತರ ಭದ್ರತೆಯಂತಹ ಹಲವು ಕಾರ್ಯಕ್ರಮಗಳನ್ನು ಕೈಗೊಳ್ಳಬಹುದು ಎಂಬ ನಿರೀಕ್ಷೆ ಇದೆ ಎಂದು ಅನ್ವರ್ ಸಾದಾತ್ ಹೇಳಿದ್ದಾರೆ.

ಚುನಾವಣೆಯಲ್ಲಿ ಏಳುಬೀಳು ಸಹಜವಾಗಿರುವುದರಿಂದ ಚುನಾವಣೆ ಕಳೆದ ನಂತರವೂ ಅನಾವಶ್ಯಕವಾಗಿ ನಮ್ಮ ಕಾರ್ಯಕರ್ತರನ್ನು ಸಾಮಾಜಿಕ ಜಾಲತಾಣದಲ್ಲಿ  ನಿಂದಿಸುತ್ತಾ, ಕಾಳೆಲೆಯುತ್ತಿರುವ, ಪ್ರತಿಪಕ್ಷ ಕಾರ್ಯಕರ್ತರ ಉದ್ರೇಕ ವರ್ತನೆಗಳಿಗೆ SDPI ಕಾರ್ಯಕರ್ತರು ಸಂಯಮ ಕಳೆದುಕೊಳ್ಳದೆ ಶಾಂತವಾಗಿ ಹಾಗೂ ಆರೋಗ್ಯಕರವಾಗಿ ವರ್ತಿಸಬೇಕು. ಚುನಾವಣೆ ಇದೇ ಅಂತಿಮವಲ್ಲ ಇನ್ನು ಮುಂದೆಯೂ ಚುನಾವಣೆಗಳು ಇದೆ. ಇತರ ಪಕ್ಷದ ಕಾರ್ಯಕರ್ತರು ಹಾಗೂ ಐಟಿ ಸೆಲ್ ಕಡೆಯಿಂದ ನಮ್ಮ ಮೇಲೆ ನಡೆಯುತ್ತಿರುವ ಸುಳ್ಳು ಅಪಾದನೆಗಳಿಗೆ ಯಾವುದೇ ರೀತಿಯಲ್ಲಿ ತಲೆಕೆಡಿಸಿ ಕೊಳ್ಳದೆ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಮತದಾರರ ಪ್ರೀತಿ ಗಳಿಸಲು ಪ್ರಯತ್ನಿಸಿ ಎಂದು ಅವರು ಕಾರ್ಯಕರ್ತರಿಗೆ ಕಿವಿಮಾತು ಹೇಳಿದ್ದಾರೆ.  

ನಮ್ಮ ರಾಜಕೀಯವು ಕೇವಲ ಚುನಾವಣೆಗೆ ಸೀಮಿತವಾಗಿರದೆ ಹೋರಾಟದ ರಾಜಕೀಯದಲ್ಲಿ ವಿಶ್ವಾಸ ಇರಿಸಿದ ಒಂದು ರಾಜಕೀಯ ಚಳುವಳಿ ಆಗಿದೆ. ಅದು ಎಂದಿನಂತೆ ಮುಂದುವರಿಯುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಸ್‌ಡಿಪಿಐ ಮಾತ್ರ ಸೋತದ್ದಲ್ಲ ಬದಲಾಗಿ ಒಟ್ಟು 8 ಕ್ಷೇತ್ರದಲ್ಲಿ  ಕಾಂಗ್ರೆಸ್ ನ ಆರು ಘಟಾನುಘಟಿ ನಾಯಕರು, ಮಾಜಿ ಸಚಿವರಾಗಿದ್ದವರು ಸೋಲನುಭವಿಸಿದ್ದಾರೆ. ಅಧಿಕಾರ ವಿರೋಧಿ ಅಲೆ ಪ್ರಬಲವಾಗಿ ಇದ್ದರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ  ಆರು ಕಡೆಗಳಲ್ಲಿ ಬಿಜೆಪಿ ಜಯಗಳಿಸಿದೆ ಹಾಗೂ ಪುತ್ತೂರಿನಲ್ಲಿ ಬಿಜೆಪಿಯ ಬಂಡಾಯ ಅಭ್ಯರ್ಥಿ ಕಣದಲ್ಲಿ ಇದ್ದರೂ ಅಲ್ಲಿ ಬಹಳ ಕಷ್ಟಪಟ್ಟು ಕಾಂಗ್ರೆಸ್ ಜಯಗಳಿಸಿದೆ ಅಂದರೆ ಕರಾವಳಿ ಜಿಲ್ಲೆಯಲ್ಲಿ ಫ್ಯಾಷಿಸಂ ಇನ್ನೂ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದೆ . ಇದರ ವಿರುದ್ಧ ಎಲ್ಲಾ ಪಕ್ಷಗಳು ಸ್ವಾರ್ಥ ಮರೆತು‌ ಹೋರಾಟ ಮಾಡಬೇಕು ಮತ್ತು ಬಿಜೆಪಿ ಯನ್ನು ರಾಜಕೀಯವಾಗಿ ಪರಾಜಿತಗೊಳಿಸಲು ಸಂಘಟಿತ ಪ್ರಯತ್ನ ಮಾಡಬೇಕು ಅದುಬಿಟ್ಟು ಇಲ್ಲಿ ಎಸ್‌ಡಿಪಿಐಯ ಸೋಲನ್ನು ಮಾತ್ರ ಟ್ರೋಲ್ ಮಾಡುತ್ತಾ ವೈಯುಕ್ತಿಕ ನಿಂದನೆ ಮಾಡುತ್ತಾ ಕಾಲ ಕಳೆಯುತ್ತಿರುವುದು ಹಾಸ್ಯಾಸ್ಪದವಾಗಿದೆ. ಇದು ಕಾರ್ಯಕರ್ತರನ್ನು ನಿರುತ್ಸಾಹಗೊಳಿಸುವ ಹುನ್ನಾರವಾಗಿದೆ. ಇದ್ಯಾವುದಕ್ಕೂ ನಮ್ಮ ಕಾರ್ಯಕರ್ತರು ತಲೆಗೆಡಿಸಿಕೊಳ್ಳದೆ ಸಾಮಾಜಿಕ ಜಾಲತಾಣದ ಅನಾವಶ್ಯಕ ಚರ್ಚೆಗಳಿಂದ ದೂರ ಸರಿದು ಪಕ್ಷದ ಬಲವರ್ಧನೆಗೆ ಬೂತ್ ಮಟ್ಟದಿಂದಲೇ  ಕಾರ್ಯಪ್ರವೃತರಾಗಬೇಕೆಂದು ಅನ್ವರ್ ಸಾದತ್ ಕರೆ ನೀಡಿದ್ದಾರೆ



Join Whatsapp