ಬೆಂಗಳೂರು: ರಾಯಚೂರು ಜಿಲ್ಲೆ ತೆಲಂಗಾಣ ರಾಜ್ಯಕ್ಕೆ ಸೇರಬೇಕೆಂಬ ತೆಲಂಗಾಣ ರಾಜ್ಯ ಮುಖ್ಯಮಂತ್ರಿ ಅವರ ಹೇಳಿಕೆಗೆ ಯಾವುದೇ ಪ್ರಾಮುಖ್ಯತೆ ನೀಡುವ ಅವಶ್ಯಕತೆ ಇಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ
ಸುದ್ದಿಗಾರರೊಂದಿಗೆ ಇಂದು ಮಾತನಾಡಿದ ಸಚಿವರು, ರಾಜ್ಯದ ನೆಲ, ಜಲ, ಜನ, ಸಂಸ್ಕೃತಿ ಹಾಗೂ ಭಾಷೆಯ ರಕ್ಷಣೆಗೆ ನಮ್ಮ ಸರಕಾರ ಕಟಿಬದ್ಧವಾಗಿದೆ ಎಂದು ತಿಳಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಕೊಡಗು ಜಿಲ್ಲೆಯಲ್ಲಿ ನಡೆದ ಪ್ರತಿಭಟನೆ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಮಾಜಿ ಮುಖ್ಯಮಂತ್ರಿಗಳೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರಿಗೆ ಹೆಚ್ಚಿನ ಹಾಗೂ ಸಮರ್ಪಕ ಭದ್ರತೆ ಒದಗಿಸಲು ಸರಕಾರ ಬದ್ಧವಾಗಿದ್ದು, ಕಾನೂನನ್ನು ಕೈಗೆ ತೆಗೆದುಕೊಳ್ಳುವವರ ಬಗ್ಗೆ ಪೊಲೀಸರು ಕ್ರಮ ವಹಿಸುತ್ತಾರೆ. ನಿನ್ನೆ ದಿನ, ವಿರೋಧ ಪಕ್ಷದ ನಾಯಕರು, ಕೊಡಗು ಜಿಲ್ಲಾ ಪ್ರವಾಸದಲ್ಲಿದ್ದಾಗ ನಡೆದ ಅಹಿತಕರ ಘಟನೆ ದುರದೃಷ್ಟಕರವಾಗಿದ್ದು, ಪೊಲೀಸರು ಕೆಲವರನ್ನು ಬಂಧಿಸಿದ್ದು, ಕಾನೂನು ಕ್ರಮ ಜಾರಿಯಲ್ಲಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಂತಿಯುತ ಪ್ರತಿಭಟನೆ ನಡೆಸಲು ಎಲ್ಲರಿಗೂ ಹಕ್ಕಿದೆ, ಆದರೆ ಯಾರೇ ಆದರೂ ಕಾನೂನನ್ನು ಕೈಗೆ ತೆಗೆದುಕೊಳ್ಳುವ ಪ್ರಯತ್ನ ನಡೆಸಿದ್ದಾರೆ, ಸಹಿಸಲಾಗುವುದಿಲ್ಲ. ಸ್ವಾತಂತ್ರ್ಯ ವೀರ ಸಾವರ್ಕರ್ ಭಾವಚಿತ್ರವನ್ನು ಹಾಕಲಾದ ಬಗ್ಗೆ ಇತ್ತೀಚೆಗೆ, ಕಾಂಗ್ರೆಸ್ ಕಾರ್ಯಕರ್ತನೊಬ್ಬ ಆಕ್ಷೇಪಾರ್ಹವಾಗಿ ಮಾತನಾಡಿದ್ದಾನೆ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ವೀರ ಸಾವರ್ಕರ್ ಅವರ ಭಾವಚಿತ್ರವಿರುವ ಫ್ಲೆಕ್ಸ್ ಅನ್ನು ಒಂದು ಪ್ರದೇಶದಲ್ಲಿ ಯಾಕೆ ಹಾಕಲಾಗಿತ್ತು ಎಂದೂ ಪ್ರಶ್ನೆ ಮಾಡಿದ್ದರು. ಸಿದ್ದರಾಮಯ್ಯ ನವರು ಹೇಳಿಕೆ ನೀಡುವಾಗ, ಅತ್ಯಂತ ಸಂಯಮ ತೋರಬೇಕು. ಇನ್ನೊಬ್ಬರ ಭಾವನೆಗಳನ್ನು ಘಾಸಿಗೊಳಿಸುವ ಹಾಗೂ ಕೆರಳಿಸುವ ಮಾತುಗಳು ಅನಪೇಕ್ಷನೀಯ ಎಂದು ಹೇಳಿದ್ದಾರೆ.