ಹೊಸದಿಲ್ಲಿ: ಬಿಜೆಪಿ ನಾಯಕ ವರುಣ್ ಗಾಂಧಿ ಶೀಘ್ರದಲ್ಲೇ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಭೇಟಿಯಾಗಲಿದ್ದು, ತೃಣಮೂಲ ಕಾಂಗ್ರೆಸ್ ಸೇರುವ ಬಲವಾದ ಸೂಚನೆಗಳಿವೆ.
ಸುಶ್ಮಿತಾ ದೇವ್, ಬಾಬುಲ್ ಸುಪ್ರಿಯೊ, ಲುಯಿಜಿನ್ಹೊ ಫಲೈರೊ ಮತ್ತು ಲಿಯಾಂಡರ್ ಪೇಸ್ ನಂತರ ಬಿಜೆಪಿ ಸಂಸದ ವರುಣ್ ಗಾಂಧಿ ಅವರು ತೃಣಮೂಲ ಕಾಂಗ್ರೆಸ್ ಸೇರುವ ಸೂಚನೆಗಳಿದ್ದು, ಮುಂದಿನ ವಾರ ರಾಷ್ಟ್ರ ರಾಜಧಾನಿಗೆ ಭೇಟಿ ನೀಡಲಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ವರುಣ್ ಗಾಂಧಿ ಭೇಟಿಯಾಗಲಿದ್ದಾರೆ ಎಂದು ವರದಿಯಾಗಿದೆ.
ಪಶ್ಚಿಮ ಬಂಗಾಳ ಮುಖ್ಯಮಂತ್ರಿಯವರ ದೆಹಲಿ ಭೇಟಿಯು ಬಹಳ ಮಹತ್ವದ್ದಾಗಿದೆ.ಆದಾಗ್ಯೂ, ವರುಣ್ ಗಾಂಧಿ ಮಮತಾ ಬ್ಯಾನರ್ಜಿ ಅವರ ದೆಹಲಿ ಭೇಟಿಯ ಸಮಯದಲ್ಲಿ ತೃಣಮೂಲಕ್ಕೆ ಸೇರುತ್ತಾರೆಯೇ ಅಥವಾ ನಂತರ ಸೇರುತ್ತಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಪಕ್ಷದ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ.
ಇತ್ತೀಚೆಗೆ ಬಿಜೆಪಿಯು ಪಕ್ಷದ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯಿಂದ ವರುಣ್ ಗಾಂಧಿ ಮತ್ತು ಅವರ ತಾಯಿ ಮೇನಕಾ ಗಾಂಧಿ ಅವರನ್ನು ಕೈಬಿಟ್ಟಿತ್ತು. ಗಾಂಧಿ ಕುಟುಂಬದ ಇವರಿಬ್ಬರು ಬೇರೆ ರಾಜಕೀಯ ವೇದಿಕೆಯನ್ನು ಹುಡುಕುತ್ತಿದ್ದಾರೆ ಎಂದು ವರದಿಯಾಗಿದೆ.