ಈ ಬಾರಿ ಗೋಹತ್ಯೆ ನಿಷೇಧ ಕಾನೂನಿನ ಸಮರ್ಪಕ ಅನುಷ್ಠಾನಕ್ಕೆ ಒತ್ತು: ಸಚಿವ ಪ್ರಭು ಚವ್ಹಾಣ್

Prasthutha|

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಂಪುಟದಲ್ಲಿ ಪಶುಸಂಗೋಪನೆ ಖಾತೆಯ ನಿರೀಕ್ಷೆಯಲ್ಲಿದ್ದ ನನಗೆ ಪುನಃ ಅದೇ ಖಾತೆ ನೀಡಿ ಗೋವುಗಳ ಸಂರಕ್ಷಣೆಗೆ ಅವಕಾಶ ಕಲ್ಪಿಸಿದ್ದಕ್ಕೆ ಮುಖ್ಯಮಂತ್ರಿಗಳಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದು ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್ ತಿಳಿಸಿದ್ದಾರೆ. ರೈತರು ಹಾಗೂ ಜಾನುವಾರು ಸಾಕಣೆದಾರರು ಮತ್ತು ಪಶುಪಾಲಕರ ಅಭಿವೃದ್ಧಿಗೆ ಹೆಚ್ಚಿನ ಗಮನಹರಿಸಿ ಪಶುಸಂಗೋಪನೆ ಇಲಾಖೆಯ ಬಲವರ್ಧನೆ ಮಾಡಲು ಕ್ರಮವಹಿಸುತ್ತೇನೆ ಎಂದು ಸಚಿವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದರೆ.

- Advertisement -

ಕಳೆದ ಬಾರಿ ಇಲಾಖೆಯ ಜವಾಬ್ದಾರಿ ವಹಿಸಿಕೊಂಡ ಸಂದರ್ಭದಲ್ಲಿ ಅನೇಕ ಜನಪ್ರಿಯ ಯೋಜನೆಗಳನ್ನು ಕರ್ನಾಟಕಕ್ಕೆ ನೀಡಿದ್ದು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ರೈತರು ಹಾಗೂ ಪಶುಪಾಲಕರ ಅಭಿವೃದ್ಧಿಗೆ ಯೋಜನೆ ರೂಪಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ. ಈ ಬಾರಿ ನನ್ನ ಮೊದಲ ಆದ್ಯತೆಯಾಗಿ ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾನೂನಿನ ಸಮರ್ಪಕ ಅನುಷ್ಠಾನಕ್ಕೆ ಹೆಚ್ಚು ಒತ್ತು ನೀಡುತ್ತೇನೆ ಎಂದು ತಿಳಿಸಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಅನಧಿಕೃತವಾಗಿ ನಡೆಯುತ್ತಿರುವ ಕಾಸಯಿಖಾನೆ ವಿರುದ್ದ ಕಟ್ಟುನಿಟ್ಟಿನ ಕ್ರಮಕೈಗೊಂಡು ಅವುಗಳನ್ನು ಮುಚ್ಚಿಸಲು ಕ್ರಮವಹಿಸಲಾಗುವುದು ಎಂದು ತಿಳಿಸಿದ್ದಾರೆ.

ಬಜೆಟ್ ನಲ್ಲಿ ಜಿಲ್ಲೆಗೊಂದು ಗೋಶಾಲೆ ಸ್ಥಾಪನೆಗೆ ಘೋಷಣೆ ಮಾಡಲಾಗಿದ್ದು ಈ ಕುರಿತಂತೆ ಈಗಾಗಲೇ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಗೋಶಾಲೆಗೆ ಸ್ಥಳ ಗುರುತಿಸುವ ಕಾರ್ಯ ಪ್ರಗತಿಯಲ್ಲಿದೆ. ಜಿಲ್ಲೆಗೊಂದು ಗೋಶಾಲೆಗೆ ನಿರ್ವಾಹಕ ಸಮಿತಿ ರಚನೆ ಮಾಡಿ ಅಕ್ಟೋಬರ್ 2ರ ಗಾಂಧಿ ಜಯಂತಿಯ ಸಂದರ್ಭದಲ್ಲಿ ಬಹುತೇಕ ಜಿಲ್ಲೆಗಳಲ್ಲಿ ಗೋಶಾಲೆಗಳನ್ನು ಉದ್ಘಾಟನೆ ಮಾಡಲು ಪ್ರಯತ್ನಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ.

- Advertisement -

ಪಶುಕಲ್ಯಾಣ ಸಹಾಯವಾಣಿ ಯಶಸ್ವಿಯಾಗಿ ಅನುಷ್ಠಾನಕ್ಕೆ ಇನ್ನೂ ಹೆಚ್ಚು ಒತ್ತು ನೀಡಲಾಗುವುದು ಹಾಗೂ ಗೋಶಾಲೆಗಳ ಟ್ರಸ್ಟ್ ಸ್ಥಾಪನೆ ಮಾಡಿ ಸರ್ಕಾರೇತರ ಸಂಸ್ಥೆಗಳ ನೆರವುಪಡೆದು ಗೋಶಾಲೆಗಳನ್ನು ಸ್ವಾವಲಂಬಿಯಾಗಿ ಕಾರ್ಯ ನಿರ್ವಹಣೆಗೆ ಕ್ರಮವಹಿಸಲಾಗುವುದು ಹೇಳಿದ್ದಾರೆ.

ಮುಂದಿನ ಯೋಜನೆಗಳು

ಸರ್ಕಾರ ಹಾಗೂ ಗೋರಕ್ಷಕರ ಸಹಯೋಗದಲ್ಲಿ ವಿಶ್ವ ಗೋ ಸಮ್ಮೇಳನ ಆಯೋಜನೆ. ರೈತ ಸಂಪರ್ಕ ಕೇಂದ್ರ ಅಥವಾ ಗ್ರಾಮ ಪಂಚಾಯತಿ ಸಹಯೋಗದೊಂದಿಗೆ ಗ್ರಾಮಕ್ಕೊಂದು ಗೋಬರ್ ಬ್ಯಾಂಕ್ ಸ್ಥಾಪನೆ. ದೇಶಿ ತಳಿಗಳ ಸಂವರ್ಧನೆ ಮತ್ತು ಉನ್ನತೀಕರಣಕ್ಕೆ ಯೋಜನೆ. ರಾಷ್ಟ್ರೀಯ ಜಾನುವಾರು ಮಿಷನ್ ಅಡಿ ಕೇಂದ್ರ ಸರ್ಕಾರದ ಸಹಯೋಗದಲ್ಲಿ ಜಾನುವಾರು ಸಾಕಾಣಿಕೆ ಮೂಲಕ ಯುವಕರಿಗೆ ಉದ್ಯೋಗ ಸೃಷ್ಟಿಗೆ ಯೋಜನೆ. ಬೆಂಗಳೂರಿನಲ್ಲಿ ವಿಶ್ವದರ್ಜೆಯ ಪಶುಲೋಕ ಸ್ಥಾಪನೆಗೆ ತುರ್ತು ಕ್ರಮ. ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಕ್ರಮ. ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ವಿಶೇಷ ಯೋಜನೆ ರೂಪಿಸಲು ಕ್ರಮವಹಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

Join Whatsapp