‘ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ರಾಜಕೀಯದಲ್ಲಿ ಇನ್ನು ಎಳಸು’
ಹುಬ್ಬಳ್ಳಿ: ಹಿಂದೂಳಿದ, ದಲಿತ ಸೇರಿದಂತೆ ಎಲ್ಲ ಸಮಾಜದವರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಧ್ವನಿಯಾಗಲು ಸಾಧು ಸಂತರ ನೇತೃತ್ವದಲ್ಲಿ ರಾಯಣ್ಣ, ಚೆನ್ನಮ್ಮ ಬ್ರಿಗೇಡ್ (RCB) ಸಂಘಟನೆಯನ್ನು ಹುಟ್ಟುಹಾಕಲು ಚಿಂತಿಸಲಾಗಿದೆ. ಅ.20 ರಂದು ಬಾಗಲಕೋಟೆಯಲ್ಲಿ ನಡೆಯುವ ಸಭೆಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾಜದಲ್ಲಿ ಎಲ್ಲರಿಗೂ ಅನ್ಯಾಯ ಆಗುತ್ತಿದೆ. ಅನ್ಯಾಯದ ವಿರುದ್ಧ ಹೋರಾಟ ಮಾಡಲು ಸಂಘಟನೆ ಕಟ್ಟುತ್ತಿದ್ದೇವೆ. ರಾಣಿ ಚೆನ್ನಮ್ಮ ಬ್ರಿಗೇಡ್ ಮಾಡಲು ಸಲಹೆ ಬಂದಿದೆ. ನಮ್ಮ ಸಂಘಟನೆ ಅಲ್ಪ ಸಂಖ್ಯಾತರ ವಿರುದ್ಧ ಅಲ್ಲ. ಆದರೆ, ದೇಶದ್ರೋಹಿ ಮುಸ್ಲಿಮರ ವಿರುದ್ಧವಾಗಿರುತ್ತದೆ ಎಂದು ಹೇಳಿದರು.
ಸಂಘಟನೆ ರಚನೆಯ ಅಂತಿಮ ನಿರ್ಣಯವನ್ನು ಬಾಗಲಕೋಟೆಯಲ್ಲಿ ಕೈಗೊಳ್ಳುತ್ತೇವೆ. ಹುಬ್ಬಳ್ಳಿಯಲ್ಲಿ ಎಲ್ಲ ಜಾತಿಯವರನ್ನು ಸೇರಿಸಿ ಮೊದಲ ಸಭೆ ಮಾಡಿದ್ದೇವೆ. ಎಲ್ಲ ರಾಜಕೀಯ ಪಕ್ಷದವರು ಸಭೆಯಲ್ಲಿ ಭಾಗಿಯಾಗಿದ್ದರು. ಸಭೆಯಲ್ಲಿ ಅನೇಕ ಸಲಹೆ ಬಂದಿವೆ ಎಂದರು.
ಬಡವರಿಗೆ ಹಿಂದೂಳಿದ ವರ್ಗದ ಜನರಿಗೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಹೊಸ ಸಂಘಟನೆ ಹುಟ್ಟುಹಾಕಲಾಗಿದೆ. ಈ ಸಭೆಯಲ್ಲಿ 25 ಕ್ಕೂ ಹೆಚ್ಚು ಸಾಧು-ಸಂತರು, ಸಾವಿರಕ್ಕೂ ಅಧಿಕ ವಿವಿಧ ಸಮಾಜದ ಮುಖಂಡರು ಪಾಲ್ಗೊಳ್ಳಲಿದ್ದಾರೆ ಎಂದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ ವಿಜಯೇಂದ್ರ ರಾಜಕೀಯದಲ್ಲಿ ಇನ್ನು ಎಳಸು. ನಾವೆಲ್ಲರೂ ಪಕ್ಷವನ್ನು ಕಟ್ಟುವ ಸಂದರ್ಭದಲ್ಲಿ ವಿಜಯೇಂದ್ರ ಕಣ್ಣು ಬಿಟ್ಟಿದ್ದಿಲ್ಲ. ಬಿಜೆಪಿಯನ್ನು ಅನೇಕರು ಶ್ರಮವಹಿಸಿ ಕಟ್ಟಿದ ಮೇಲೆ ಮೋದಿ, ಅಮಿತ್ ಶಾ ಕೃಪಕಟಾಕ್ಷದಿಂದ, ಹೈಕಮಾಂಡ್ ಗೆ ಮಂಕುಬೂದಿ ಎರಚಿ ರಾಜ್ಯಾಧ್ಯಕ್ಷರಾಗಿದ್ದಾರೆ. ವಿಜಯೇಂದ್ರ ಕೈಯಲ್ಲಿ ಪಕ್ಷ ಸಿಕ್ಕು ಹಾಳಾಗುತ್ತಿದೆ ಎಂದು ಕಿಡಿಕಾರಿದರು.