ನವದೆಹಲಿ: ದಿಲ್ಲಿ ಅಬಕಾರಿ ನೀತಿಯನ್ನು ಎಎಪಿ ಅಧಿಕಾರದಲ್ಲಿರುವ ಪಂಜಾಬಿನಲ್ಲಿ ಜಾರಿಗೆ ತಂದಿದ್ದು ಅದ್ಭುತವಾಗಿ ಕೆಲಸ ಮಾಡುತ್ತಿದೆ. ಆದರೆ ದಿಲ್ಲಿ ನೀತಿಯ ಮೇಲೆ ಕೇಂದ್ರ ಸರಕಾರ ಕೆಂಗಣ್ಣು ಹಾಕಿದೆ ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಟೀಕಿಸಿದ್ದಾರೆ.
ಕೇಂದ್ರವು ಇದನ್ನು ಅನಗತ್ಯ ವಿವಾದ ಮಾಡಿರುವುದರಿಂದ ಸಿಬಿಐ- ಕೇಂದ್ರೀಯ ತನಿಖಾ ಪಡೆ ಮತ್ತು ಇಡಿ- ಜಾರಿ ನಿರ್ದೇಶನಾಲಯದ ಅಧಿಕಾರಿಗಳ ವಿರುದ್ಧ ಸುಳ್ಳು ಹೇಳಿಕೆ ಮತ್ತು ನಕಲಿ ಸಾಕ್ಷಿಗಾಗಿ ಆಮ್ ಆದ್ಮಿ ಪಕ್ಷವು ಮೊಕದ್ದಮೆ ಹೂಡಲಿದೆ ಎಂದು ಕೇಜ್ರಿವಾಲ್ ಹೇಳಿದರು.
ಸಿಬಿಐ ಈ ಮೊಕದ್ದಮೆಯಲ್ಲಿ ಕೇಜ್ರಿವಾಲ್’ರಿಗೆ ಸಮನ್ಸ್ ನೀಡಿದಾಗ “ನಾನು ಭ್ರಷ್ಟನಾದಲ್ಲಿ ಈ ಜಗತ್ತಿನಲ್ಲಿ ಭ್ರಷ್ಟನಲ್ಲದವನು ಒಬ್ಬನೂ ಇರಲು ಸಾಧ್ಯವಿಲ್ಲ” ಎಂದು ಹೇಳಿಕೆ ನೀಡಿದರು. ನಾನು ಸಿಬಿಐ ಎದುರು ಹಾಜರಾಗುವೆ ಎಂದೂ ಕೇಜ್ರಿವಾಲ್ ಹೇಳಿದರು.
ಎಎಪಿ ದೇಶದ ಹೊಸ ಆಶಾ ಕಿರಣವಾಗಿ ಮೂಡಿ ಬಂದಿದೆ. ಆದ್ದರಿಂದ ಅದನ್ನು ಹೊಸಕಲು ಪ್ರಯತ್ನ ನಡೆದಿದೆ. ಕಳೆದ 75 ವರ್ಷಗಳಲ್ಲಿ ಭಾರತದಲ್ಲಿ ಬೇರೆ ಯಾವ ಪಕ್ಷದ ಮೇಲೂ ಇಷ್ಟೊಂದ ದಾಳಿಗಳು ಆಗಿಲ್ಲ ಎಂದು ಕೇಜ್ರಿವಾಲರು ಏಪ್ರಿಲ್ 15ರ ಶನಿವಾರ ದಿಲ್ಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಹೇಳಿದರು.
“ನನ್ನನ್ನು ನಾಳೆ ಸಿಬಿಐನವರು ಕರೆದಿದ್ದಾರೆ. ನಾನು ಖಂಡಿತವಾಗಿಯೂ ಹೋಗುತ್ತೇನೆ. ನಾನು ಪ್ರಧಾನಿ ಮೋದಿಯವರಿಗೆ ಹೇಳ ಬಯಸುತ್ತೇನೆ, ಅರವಿಂದ ಕೇಜ್ರಿವಾಲ್ ಭ್ರಷ್ಟನಾದರೆ ಈ ಜಗತ್ತಿನಲ್ಲಿ ಭ್ರಷ್ಟರಲ್ಲದವರು ಯಾರೂ ಇರಲು ಸಾಧ್ಯವಿಲ್ಲ. ಬಿಜೆಪಿಯವರು ಪತ್ರಿಕಾಗೋಷ್ಠಿಗಳನ್ನು ನಡೆಸುತ್ತ ಮುಖ್ಯಮಂತ್ರಿ ಕೇಜ್ರಿವಾಲರನ್ನು ಆರೆಸ್ಟ್ ಮಾಡಿಸುತ್ತೇವೆ ಎನ್ನುತ್ತಿದ್ದಾರೆ. ಬಿಜೆಪಿಯು ಸಿಬಿಐಗೆ ನನ್ನನ್ನು ಆರೆಸ್ಟ್ ಮಾಡುವಂತೆ ಹೇಳಿದ್ದರೆ, ಸಿಬಿಐ ಅವರ ಆಜ್ಞೆ ಪಾಲಿಸುತ್ತದೆ ಎಂದಾಯಿತು” ಎಂದು ಕೇಜ್ರಿವಾಲ್ ಹೇಳಿದರು.
ಕೇಂದ್ರ ಬೆದರಿಸುತ್ತಿರುವ ಎಎಪಿ ಅಬಕಾರಿ ನೀತಿಯು ಪಂಜಾಬಿನಲ್ಲಿ ಉತ್ತಮವಾಗಿ ಜಾರಿಗೆ ಬಂದಿದೆ. ಸಿಬಿಐ, ಇಡಿ ಸುಳ್ಳನ್ನು ಸತ್ಯ ಮಾಡುತ್ತಾರೆಯೇ? ಮನೀಶ್ ಸಿಸೋಡಿಯಾ 14 ಫೋನುಗಳನ್ನು ಒಡೆದು ಹಾಕಿದ್ದಾರೆ ಎನ್ನುತ್ತಾರೆ. ಮಿತಿ ಬೇಡವೆ?” ಎಂದು ಕೇಜ್ರೀವಾಲ್ ಕಿಡಿಕಾರಿದರು.
100 ಕೋಟಿ ಲಂಚ ಪಡೆದಿದ್ದಾರೆ ಎನ್ನುತ್ತಾರೆ, ಹಾಗಾದರೆ ಆ ಹಣ ಎಲ್ಲಿದೆ ಅವರು ಕೇಳಿದರು. “400ಕ್ಕೂ ಹೆಚ್ಚು ದಾಳಿಗಳನ್ನು ನಡೆಸಿದ್ದಾರೆ. ಎಲ್ಲಿದೆ ಹಣ? ಗೋವಾ ಚುನಾವಣೆಯಲ್ಲಿ ಹಣ ವ್ಯಯಿಸಿದ್ದಾಗಿ ಕೆಲವರು ಹೇಳುತ್ತಾರೆ. ನಮ್ಮ ಗೋವಾದ ಪ್ರಚಾರಕರು ಪ್ರತಿಯಬ್ಬರನ್ನು ಈ ತನಿಖಾ ದಳದವರು ವಿಚಾರಿಸಿದ್ದಾರೆ; ಆದರೆ ಏನೂ ಸಿಕ್ಕಿಲ್ಲ. ಆದ್ದರಿಂದ ಅಬಕಾರಿ ನೀತಿ ಭ್ರಷ್ಟಾಚಾರ ಇಲ್ಲಿ ಸಮಸ್ಯೆಯಲ್ಲ, ಕೇಂದ್ರ ಸರಕಾರದ್ದೇ ಸಮಸ್ಯೆ” ಎಂದರು ಕೇಜ್ರೀವಾಲ್.
ಕಳೆದ ತಿಂಗಳು ವಿಧಾನ ಸಭೆಯಲ್ಲಿ ಭ್ರಷ್ಟಾಚಾರದ ಬಗೆಗೆ ಮಾತನಾಡುವಾಗ ಅರವಿಂದ ಕೇಜ್ರೀವಾಲರು ಮುಂದಿನ ಪಾಳಿ ನನ್ನ ಮೇಲೆ ಇದೆ ಎಂದು ಹೇಳಿದ್ದರು.