ಶ್ರೀನಗರ: 14 ತಿಂಗಳುಗಳ ಬಳಿಕ ಜೈಲಿನಿಂದ ಬಿಡುಗಡೆಗೊಂಡಿರುವ ಜಮ್ಮು-ಕಾಶ್ಚೀರದ ಮಾಜಿ ಮುಖ್ಯಮಂತ್ರಿ ಹಾಗೂ ಪಿಡಿಪಿ ಪಕ್ಷದ ಅಧ್ಯಕ್ಷೆ ಮೆಹ್ಬೂಬ ಮುಫ್ತಿ, 370ನೆ ವಿಧಿ ಮತ್ತು ಕಾಶ್ಮೀರ ಸಮಸ್ಯೆಗಳ ಪರಿಹಾರಕ್ಕಾಗಿ ತಾನು ಹೋರಾಟವನ್ನು ಮುಂದುವರೆಸಲಿದ್ದೇನೆ ಎಂದಿದ್ದಾರೆ.
ಆ.5ರ ಕೇಂದ್ರದ ನಿರ್ಣಯವು ಹಗಲು ದರೋಡೆ ಎಂಬುದಾಗಿ ಅವರು ಕರೆದಿದ್ದಾರೆ.
“ಕಳೆದ ವರ್ಷದ ಆ.5ರಂದು ಯಾವುದನ್ನು ಕಾನೂನು ಬಾಹಿರವಾಗಿ, ಅಪ್ರಜಾಸತ್ತಾತ್ಮಕವಾಗಿ ಮತ್ತು ಅಸಂವಿಧಾನಿಕವಾಗಿ ಕಸಿಯಲಾಗಿತ್ತೋ ಅದನ್ನು ಮರಳಿ ಪಡೆಯುವುದಕ್ಕಾಗಿ ನಾವು ಪ್ರತಿಜ್ನೆ ಕೈಗೊಳ್ಳಬೇಕಾಗಿದೆ. ಕಾಶ್ಮೀರ ಸಮಸ್ಯೆಯನ್ನು ಪರಿಹರಿಸುವುದಕ್ಕಾಗಿ ನಾವೆಲ್ಲರೂ ಕೆಲಸ ಮಾಡಬೇಕಾಗಿದೆ. ಸಾವಿರಾರು ಮಂದಿ ಈ ಉದ್ದೇಶಕ್ಕಾಗಿ ತಮ್ಮ ಜೀವವನ್ನು ಕಳೆದುಕೊಂಡಿದ್ದರು” ಎಂದು ಮೆಹ್ಬೂಬ ಟ್ವಿಟ್ಟರ್ ನಲ್ಲಿ ನೀಡಿದ 83 ಸೆಕೆಂಡುಗಳ ಆಡಿಯೊ ಸಂದೇಶದಲ್ಲಿ ಹೇಳಿದ್ದಾರೆ. “ಇದು ಸುಲಭದ ಕೆಲಸವಲ್ಲ. ಈ ಹಾದಿಯಲ್ಲಿ ಸಂಕಷ್ಟಗಳು ಎದುರಾಗಬಹುದು. ಆದರೆ ನಮ್ಮ ಸ್ಥಿರತೆ ಮತ್ತು ದೃಢತೆ ಈ ಹೋರಾಟದಲ್ಲಿ ನಮಗೆ ಸಹಾಯಕವಾಗಲಿದೆ” ಎಂದು ಅವರು ಹೇಳಿದ್ದಾರೆ.