ಮುಂಬೈ: ವಿಪಕ್ಷಗಳ ಇಂಡಿಯಾ ಮೈತ್ರಿಕೂಟವು 2024 ರ ಲೋಕಸಭೆ ಚುನಾವಣೆಯಲ್ಲಿ “ಸಾಧ್ಯವಾದಷ್ಟು ಸೀಟುಗಳಲ್ಲಿ ಒಟ್ಟಿಗೆ” ಸ್ಪರ್ಧಿಸಲಿದೆ ಎಂದು ಮುಂಬೈನಲ್ಲಿ ನಡೆದ ಸಭೆಯಲ್ಲಿ ನಿರ್ಣಯ ಕೈಗೊಂಡಿದೆ.
ಬಿಹಾರದ ಪಾಟ್ನಾ ಹಾಗೂ ಬೆಂಗಳೂರಿನಲ್ಲಿ ಈಗಾಗಲೇ ಪ್ರತಿಪಕ್ಷಗಳ ನಾಯಕರು ಎರಡು ಸಭೆಗಳನ್ನು ಮಾಡಿದ್ದು, ಗುರುವಾರದಿಂದ ಮುಂಬೈನಲ್ಲಿ ಮೂರನೇ ಸಭೆ ಸೇರಿದ್ದಾರೆ. ಸಭೆಯಲ್ಲಿ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ‘ಇಂಡಿಯಾ’ ಮೈತ್ರಿಕೂಟದ ಪ್ರತಿಪಕ್ಷಗಳು ಜಂಟಿಯಾಗಿ ಸ್ಪರ್ಧೆ ಮಾಡುವ ನಿರ್ಣಯವನ್ನು ತೆಗೆದುಕೊಂಡಿದ್ದೇವೆ ಎಂದು ಇಂಡಿಯಾ ನಾಯಕರು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಇದರ ಜೊತೆಗೆ, ವಿವಿಧ ರಾಜ್ಯಗಳಲ್ಲಿ ಸೀಟು ಹಂಚಿಕೆಯ ಪ್ರಕ್ರಿಯೆ ತಕ್ಷಣವೇ ಪ್ರಾರಂಭಿಸಲಾಗುತ್ತದೆ. ಅದಷ್ಟು ಬೇಗ ಸೀಟು ಕೊಡು-ಕೊಳ್ಳುವಿಕೆಯ ಪ್ರಕ್ರಿಯೆಯನ್ನು ಸಹಕಾರಿ ಮನೋಭಾವದಲ್ಲಿ ಮುಗಿಸಲಾಗುತ್ತದೆ. ಸಾರ್ವಜನಿಕರ ಸಮಸ್ಯೆಯ ವಿಷಯಗಳನ್ನು ಮುಂದಿಟ್ಟುಕೊಂಡು ದೇಶದ ವಿವಿಧ ಭಾಗಗಳಲ್ಲಿ ಶೀಘ್ರವೇ ರ್ಯಾಲಿಗಳನ್ನೂ ನಡೆಸುತ್ತೇವೆ. ವಿವಿಧ ಭಾಷೆಗಳಲ್ಲಿ ‘ಜುಡೇಗಾ ಭಾರತ್, ಜೀತೇಗಾ ಇಂಡಿಯಾ’ ಎಂಬ ವಿಷಯದ ಕುರಿತು ತಮ್ಮ ಸಂವಹನ ತಂತ್ರಗಳು, ಪ್ರಚಾರಗಳನ್ನು ಸಂಘಟಿಸಲು ನಿರ್ಣಯಿಸಲಾಗಿದೆ ಎಂದು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.