ರಾಷ್ಟ್ರೀಯ ಹೆದ್ದಾರಿ ಉನ್ನತೀಕರಣಕ್ಕೆ ವನ್ಯಜೀವಿ ಕಾರ್ಯಕರ್ತರ ಆಕ್ಷೇಪ

Prasthutha|

ನವದೆಹಲಿ: ‘ಬೆಳಗಾವಿಯಿಂದ ಚೋರ್ಲಾ ಮೂಲಕ ಕರ್ನಾಟಕವನ್ನು ಗೋವಾದೊಂದಿಗೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 748ಎಎ ಉನ್ನತೀಕರಣ ಯೋಜನೆಯನ್ನು ಕೈಬಿಡಬೇಕು’ ಎಂದು ವನ್ಯಜೀವಿ ಕಾರ್ಯಕರ್ತರು ಆಗ್ರಹಿಸಿದ್ದಾರೆ. 

- Advertisement -

ಯೋಜನಾ ಪ್ರದೇಶ ದಟ್ಟ ಅರಣ್ಯಗಳ ಮೂಲಕ ಸಾಗುತ್ತದೆ. ಹುಲಿ, ಚಿರತೆ, ಕಾಟಿ (ಕಾಡುಕೋಣ), ಕೆನ್ನಾಯಿ, ಕರಡಿ, ಕಡವೆ, ಕಾಳಿಂಗ ಸರ್ಪ ಸೇರಿದಂತೆ ಅಪರೂಪದ ವನ್ಯಜೀವಿಗಳು ಇಲ್ಲಿವೆ. ಈಗಾಗಲೇ ಈ ಹೆದ್ದಾರಿಯಲ್ಲಿ ಕಾಟಿ, ಚಿರತೆ, ಕಾಳಿಂಗ ಸರ್ಪ ಸೇರಿದಂತೆ ಹಲವು ವನ್ಯಜೀವಿಗಳು ವಾಹನ ಅಪಘಾತಕ್ಕೆ ಬಲಿಯಾಗಿವೆ. ಹೀಗಾಗಿ, ಹೆದ್ದಾರಿ ವಿಸ್ತರಣೆಯನ್ನು ಕೈಬಿಡುವುದು ಸೂಕ್ತ ಎಂದು ವನ್ಯಜೀವಿ ಕಾರ್ಯಕರ್ತರು ಅಭಿಪ್ರಾಯಪಟ್ಟಿದ್ದಾರೆ. 

ಗೋವಾ ರಾಜ್ಯದ ವ್ಯಾಪ್ತಿಯಲ್ಲಿ ಹೆದ್ದಾರಿಯು ಮಹದಾಯಿ ಅಭಯಾರಣ್ಯದ ಮೂಲಕ ಸಾಗುತ್ತಿದ್ದು ಹೆದ್ದಾರಿಯ ಉನ್ನತೀಕರಣ ಯೋಜನೆ ಹುಲಿಗಳ ಸಂರಕ್ಷಣೆಗೆ ಮಾರಕವಾಗಲಿದೆ ಎಂದೂ ಕಾರ್ಯಕರ್ತರು ತಿಳಿಸಿದ್ದಾರೆ.

- Advertisement -

ಈ ಹೆದ್ದಾರಿಯು ಬೆಳಗಾವಿಯ ಪೀರನವಾಡಿಯಿಂದ ಆರಂಭವಾಗಿ ಕಿನಾಯೆ, ಜಾಂಬೋಟಿ, ಕಣಕುಂಬಿ, ಚೋರ್ಲಾ ಮೂಲಕ ಗೋವಾದ ಸ್ಯಾಂಕೀಲಿಮ್ ಎಂಬಲ್ಲಿ ಮುಕ್ತಾಯವಾಗುತ್ತದೆ. ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈ ಹೆದ್ದಾರಿಯನ್ನು ಉನ್ನತೀಕರಿಸಲು ₹220 ಕೋಟಿ ಮೀಸಲಿರಿಸಿದೆ.

Join Whatsapp