ಉಪ್ಪಿನಂಗಡಿಯಲ್ಲಿ ಪೊಲೀಸರ ಕ್ರೌರ್ಯಕ್ಕೆ ವ್ಯಾಪಕ ಆಕ್ರೋಶ: ವಿವಿಧ ಸಂಘಟನೆಗಳಿಂದ ಖಂಡನೆ

Prasthutha|

ಮಂಗಳೂರು: ಅಮಾಯಕರನ್ನು ಬಿಡುಗಡೆಗೊಳಿಸುವಂತೆ ಒತ್ತಾಯಿಸಿ ಉಪ್ಪಿನಂಗಡಿಯಲ್ಲಿ ಪ್ರತಿಭಟನಾನಿರತ ಪಿಎಫ್ ಐ ಕಾರ್ಯಕರ್ತರ ಮೇಲೆ ಪೊಲೀಸರ ನಡೆಸಿರುವ ಲಾಠಿಚಾರ್ಜ್ ಗೆ ಸಾರ್ವಜನಿಕ ವಲಯದಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ವಿವಿಧ ಸಂಘಟನೆಗಳು ಪೊಲೀಸರ ಕ್ರೌರ್ಯವನ್ನು ಖಂಡಿಸಿವೆ. ಧರ್ಮಗುರು ಸೇರಿದಂತೆ ಹಲವು ಪ್ರತಿಭಟನಕಾರರ ಮೇಲೆ ಹಿಂಸಾತ್ಮಕ ರೀತಿಯಲ್ಲಿ ಪೊಲೀಸರು ಲಾಠಿ ಬೀಸಿದ್ದಾರೆ. ಯಾವುದೇ ಮುನ್ಸೂಚನೆ ನೀಡದೆ ಏಕಾಏಕಿ ಲಾಠಿಯನ್ನು ಪ್ರತಿಭಟನಕಾರರ ತಲೆ ಮೇಲೆ ಬೀಸಿದ್ದಾರೆ ಎಂದು ಪಿಎಫ್ಐ ಆರೋಪಿಸಿದೆ.

- Advertisement -

ಮುಸ್ಲಿಮ್ ಒಕ್ಕೂಟ ಖಂಡನೆ

ಇತ್ತೀಚೆಗಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಉಪ್ಪಿನಂಗಡಿ ಪೊಲೀಸರು ನಿನ್ನೆ ಪಿ.ಎಫ್. ಐ.ಸಂಘಟನೆಯ ಮೂವರು ನಾಯಕರನ್ನು ಬಂಧಿಸಿದ್ದನ್ನು ವಿರೋಧಿಸಿ ಮತ್ತು ಬಂಧಿತ ನಾಯಕರನ್ನು ಬಿಡುಗಡೆಗೊಳಿಸ ಬೇಕೆಂದು ಆಗ್ರಹಿಸಿ ಸಂಘಟನೆಯ ಸದಸ್ಯರು ಉಪ್ಪಿನಂಗಡಿ ಪೊಲೀಸ್ ಠಾಣೆ ಎದುರಿಗೆ ಜಮಾಯಿಸಿ ಶಾಂತಿಯುತ ಪ್ರತಿಭಟನೆ ನಡೆಸಿದ್ದು ಪೊಲೀಸರು ಅಪ್ರಚೋದಿತವಾಗಿ ಪ್ರತಿಭಟನಕಾರರ ಮೇಲೆ ಅನ್ಯಾಯವಾಗಿ ಲಾಠಿ ಚಾರ್ಜ್ ಮಾಡಿದ್ದಾರೆ. ಅಮಾಯಕ ಪ್ರತಿಭಟನಕಾರರು ಘಂಭೀರ ಗಾಯ ಗೊಂಡಿದ್ದು, ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಜ.ಆತೂರ್ ಇಬ್ರಾಹಿಂ ತಂಗಲ್ ರವರಿಗೆ ರಕ್ತ ಗಾಯವಾಗಿದ್ದು, ಪೊಲೀಸರ ದೌರ್ಜನ್ಯ ಕ್ಕೆ ತೀವ್ರ ಖಂಡನೆಯಿದೆ. ಪೊಲೀಸರು ಶಾಂತಿ ಕಾಪಾಡುವುದರ ಹೊರತು, ಹಿಂಸೆಯನ್ನು ಪ್ರಚೋದಿಸಿದ್ದಾರೆ. ಪೊಲೀಸರ ಈ ದೌರ್ಜನ್ಯವನ್ನು ಪ್ರಶ್ನಿಸಿ ಕಾನೂನು ಹೋರಾಟ ಮಾಡಲಾಗುವುದು ಎಂದು ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ ಕೆ.ಅಶ್ರಫ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

- Advertisement -

ಜಮಾಅತೆ ಇಸ್ಲಾಮಿ ಹಿಂದ್ ದಕ್ಷಿಣ ಕನ್ನಡ

ಉಪ್ಪಿನಂಗಡಿಯಲ್ಲಿ ಪ್ರತಿಭಟನಾ ನಿರತ ಪಿಎಫ್.ಐ ಸದಸ್ಯರು ಮತ್ತು ಕಾರ್ಯಕರ್ತರ ಮೇಲೆ ಪೊಲೀಸರು ಲಾಠಿ ಬೀಸಿದ್ದು ನಿಜಕ್ಕೂ ಖಂಡನೀಯವಾಗಿದೆ. ಪ್ರಕರಣದಲ್ಲಿ ಅಮಾಯಕರನ್ನು ಬಂಧಿಸುವುದು, ಬಿಡುಗಡೆ ಮಾಡುವುದು ಇಂತಹ ಘಟನೆಗಳು ನಡೆದರೆ ಜನರು ಉದ್ರಿಕ್ತಗೊಳ್ಳುತ್ತಾರೆ. ಪ್ರತಿಭಟನಾಕಾರರ ಜೊತೆ ಸಂಧಾನ ಮತ್ತು ಮಾತುಕತೆಯ ಮೂಲಕ ಶಾಂತಿ ಕದಡದಂತೆ ನೋಡಿಕೊಳ್ಳಬೇಕಾದ ಪೊಲೀಸರೇ ಶಾಂತಿ ಕಾಪಾಡುವ ಬದಲಿಗೆ ಹಿಂಸೆಯ ದಾರಿಯನ್ನು ತುಳಿಯುವುದು ಇನ್ನಷ್ಟು ಅರಾಜಕತೆಗೆ ಕಾರಣವಾಗುತ್ತದೆ. ಈ ಬಗ್ಗೆ ಉನ್ನತ ಅಧಿಕಾರಿಗಳು ಗಮನ ಹರಿಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು.

ಕೆಲವು ದಿನಗಳಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಶೇಷವಾಗಿ ಪುತ್ತೂರು ಉಪ್ಪಿನಂಗಡಿ ಪರಿಸರದಲ್ಲಿ ಅಮಾಯಕರ ಮೇಲೆ ಹಲ್ಲೆ ನಡೆಯುತ್ತಿದ್ದು, ಆ ಮೂಲಕ ಅಶಾಂತಿಯ ವಾತಾವರಣ ಸೃಷ್ಟಿಸಲು ಪ್ರಯತ್ನಿಸುತ್ತಿರುವುದು ನಿಜಕ್ಕೂ ಆತಂಕಕಾರಿ ಮಾತ್ರವಲ್ಲದೆ ಇಂತಹ ಬೆಳವಣಿಗೆ ಖಂಡನೀಯವಾಗಿದೆ. ಪೊಲೀಸರು ಈ ಬಗ್ಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು.

ಎಲ್ಲಾ ನಾಗರಿಕ ಬಂಧುಗಳು ನಾಯಕರು, ವಿದ್ವಾಂಸರ ಇಂತಹ ಸಂದರ್ಭಗಳಲ್ಲಿ ಸರಿಯಾದ ಮಾರ್ಗದರ್ಶನ ಮಾಡಲು ಮುಂದೆ ಬರಬೇಕು. ದೌರ್ಜನ್ಯ ವಿರುದ್ಧ ಕಾನೂನಾತ್ಮಕ ಹೋರಾಟ ಮಾಡಬೇಕು. ಯಾವುದೇ ಸಂದರ್ಭದಲ್ಲಿ ಕಾನೂನನ್ನು ಕೈಗೆತ್ತಿಕೊಳ್ಳದಂತೆ ಪ್ರಜ್ಞಾಪೂರ್ವಕವಾಗಿ ನೋಡಿಕೊಳ್ಳಬೇಕು ಎಂದು ಜಮಾಅತೆ ಇಸ್ಲಾಮಿ ಹಿಂದ್ ಒತ್ತಾಯಿಸಿದೆ.

ಹಾಗೆಯೇ ಯಾವುದೇ ಸಂದರ್ಭದಲ್ಲಿ ಸತ್ಯ, ನ್ಯಾಯ ಮತ್ತು ಕಾನೂನನ್ನು ಕಾಪಾಡಲು ಮತ್ತು ಶಾಂತಿಯ ವಾತಾವರಣ ರೂಪಿಸಲು ಪ್ರಯತ್ನ ಪಡಬೇಕು. ಕೋಮು ಸಂಘರ್ಷ, ಕೋಮು ಧ್ರುವೀಕರಣಗೊಳ್ಳದಂತೆ ಜವಾಬ್ದಾರಿಯುತವಾಗಿ ನೋಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಸರ್ವ ಬಂಧುಗಳು ಒಂದಾಗಿ ಕಾರ್ಯಪ್ರವೃತ್ತರಾಗಬೇಕಾಗಿದೆ ಎಂದು ಜಮಾಅತೆ ಇಸ್ಲಾಮಿ ಹಿಂದ್ ಕರೆ ನೀಡಿದೆ.



Join Whatsapp