ಮಂಗಳೂರು: ಕೋಮು ದ್ವೇಷಕ್ಕೆ ಕೊಲೆಯಾದ ಫಾಝಿಲ್, ಮಸೂದ್ ಕೊಲೆ ಆರೋಪಿಗಳ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ವಿಚಾರದಲ್ಲಿ ನಿಮ್ಮ ಮೌನ ಏಕೆ?. ಈ ವಿಚಾರದಲ್ಲಿ ಒಂದೇ ಒಂದು ಹೇಳಿಕೆ ನಿಮ್ಮಿಂದ ಹೊರಬಿದ್ದಿಲ್ಲ ಎಂದು ವಿಪಕ್ಷ ಉಪನಾಯಕ ಯು.ಟಿ. ಖಾದರ್ ಅವರು ಎಡಿಜಿಪಿ ಅಲೋಕ್ ಕುಮಾರ್ ಅವರನ್ನು ಪ್ರಶ್ನಿಸಿದ್ದಾರೆ.
ಈ ಕುರಿತು ಎಡಿಜಿಪಿ ಅಲೋಕ್ ಕುಮಾರ್ ರವರಿಗೆ ಪತ್ರ ಬರೆದಿರುವ ಯು.ಟಿ.ಖಾದರ್, ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಕೊಲೆಗಳಿಗೆ ಸಂಬಂಧಿಸಿದಂತೆ ಎಡಿಜಿಪಿ ಅವರು ಜನರಿಗಿರುವ ಸಂಶಯ ನಿವಾರಿಸಿ, ಪೊಲೀಸ್ ಇಲಾಖೆಯ ಮೇಲೆ ವಿಶ್ವಾಸ ಮೂಡವಂತೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಸರಣಿ ಕೊಲೆಗಳ ಆರೋಪಿಗಳನ್ನು ಬಂಧಿಸಲು, ಅವರನ್ನು ಕಾನೂನು ಕ್ರಮಕ್ಕೆ ಒಳಪಡಿಸಲು ಮತ್ತು ಕೊಲೆಗಳ ಸರಣಿ ಮುಂದುವರಿಯದಂತೆ ತಡೆಯಲು ಪೊಲೀಸ್ ಇಲಾಖೆ ನಡೆಸುತ್ತಿರುವ ಪ್ರಯತ್ನ ಶ್ಲಾಘನೀಯ. ಪ್ರವೀಣ್ ನೆಟ್ಟಾರು ಅವರ ಕೊಲೆ ಪ್ರಕರಣದ ಆರೋಪಿಗಳ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವುದಾಗಿ ತಾವು ನೀಡಿದ ಹೇಳಿಕೆಯನ್ನು ನಾನು ಸ್ವಾಗತಿಸುತ್ತೇನೆ. ಕೊಲೆ ಹಾಗೂ ಸಮಾಜದಲ್ಲಿ ಭಯವನ್ನು ಹುಟ್ಟಿಸುವ ಸಮಾಜ ಘಾತುಕ ದುಷ್ಕರ್ಮಿಗಳ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಕ್ಕೆ ಎಲ್ಲರ ಬೆಂಬಲವೂ ಇದೆ ಎಂದು ತಿಳಿಸಿದ್ದಾರೆ.
ಅದೇ ರೀತಿಯಲ್ಲಿ ಕೋಮು ದ್ವೇಷಕ್ಕೆ ಕೊಲೆಯಾದ ಫಾಝಿಲ್, ಮಸೂದ್ ಇನ್ನಿತರ ಕೊಲೆ ಪ್ರಕರಣ ಆರೋಪಿಗಳ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ವಿಚಾರದಲ್ಲಿ ಮೌನ ಏಕೆ? ಇದು ನಾಗರಿಕ ಸಮಾಜದ ಪ್ರತಿಯೊಬ್ಬರ ಪ್ರಶ್ನೆಯಾಗಿದೆ. ಜಿಲ್ಲೆಯ ಜನರ ಮತ್ತು ಸಮಾಜದ ಅನುಮಾನ ಮತ್ತು ಪ್ರಶ್ನೆಗಳನ್ನು ಜವಾಬ್ದಾರಿಯುತ ಶಾಸಕನಾಗಿ ನಾನು ನಿಮ್ಮ ಮುಂದಿಡುತ್ತಿದ್ದೇನೆ ಎಂದಿದ್ದಾರೆ.
ಈ ಅನುಮಾನಗಳನ್ನು ಬಗೆಹರಿಸಿ, ಪೊಲೀಸ್ ಇಲಾಖೆಯ ಮೇಲೆ ವಿಶ್ವಾಸ ಬರುವಂತಹ ಸೂಕ್ತ ಉತ್ತರವನ್ನು ನಿಮ್ಮಿಂದ ನಿರೀಕ್ಷಿಸಿದ್ದೇವೆ, ಉತ್ತರ ನೀಡುತ್ತೀರಿ ಎನ್ನುವ ವಿಶ್ವಾಸ ನನಗಿದೆ ಎಂದು ಅವರು ಪತ್ರದಲ್ಲಿ ಬರೆದಿದ್ದಾರೆ.