ಖ್ಯಾತ ಗಾಯಕ ಸಿಧು ಮೂಸೆವಾಲೆ ಕೊಲೆ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಪಂಜಾಬ್ ಸರ್ಕಾರ

Prasthutha|

ನವದೆಹಲಿ: ಖ್ಯಾತ ಪಂಜಾಬ್ ಗಾಯಕ, ಕಾಂಗ್ರೆಸ್ ನಾಯಕ ಸಿಧು ಮೂಸೆವಾಲಾ ಅವರನ್ನು ಭಾನುವಾರ ಗುಂಡಿಕ್ಕಿ ಹತ್ಯೆ ನಡೆಸಲಾಗಿತ್ತು. ಸಿಧು ಮೂಸೆವಾಲಾ ಅವರಿಗೆ ನೀಡಲಾಗಿದ್ದ ಭದ್ರತೆಯನ್ನು ಹಿಂಪಡೆದ ಬೆನ್ನಲ್ಲೇ ಅವರ ಹತ್ಯೆ ನಡೆದಿತ್ತು. ಹೀಗಾಗಿ ಮೂಸೆವಾಲಾ ಅವರ ಭದ್ರತೆಯನ್ನು ತೆರವುಗೊಳಿಸುವ ನಿರ್ಧಾರದ ಕುರಿತು ಮುಖ್ಯಮಂತ್ರಿ ಭಗವಂತ್ ಮಾನ್ ತನಿಖೆಗೆ ಆದೇಶಿಸಿದ್ದಾರೆ.

- Advertisement -

ತನ್ನ ಮಗನ ಕೊಲೆಯ ಬಗ್ಗೆ ಕೇಂದ್ರ ತನಿಖಾ ದಳ ಮತ್ತು ಎನ್.ಐ.ಎ ಸಂಸ್ಥೆಯಿಂದ ತನಿಖೆ ನಡೆಸಬೇಕೆಂದು ಒತ್ತಾಯಿಸಿ ಮೃತನ ತಂದೆ ಬಲ್ಕೌರ್ ಸಿಂಗ್ ಮುಖ್ಯಮಂತ್ರಿಗೆ ಪತ್ರ ಬರೆದಿದ್ದರು. ಬಲ್ಕೌರ್ ಸಿಂಗ್ ಅವರ ಪತ್ರಕ್ಕೆ ಪ್ರತಿಕ್ರಿಯಿಸಿದ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್, ಭದ್ರತಾ ವಿವರಗಳನ್ನು ಮೊಟಕುಗೊಳಿಸುವ ನಿರ್ಧಾರದ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.

ಘಟನೆಯಲ್ಲಿ ಭಾಗಿಯಾದವರನ್ನು ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳಲು ಬಿಡುವುದಿಲ್ಲ. ಈ ಕುರಿತು ಹೈಕೋರ್ಟ್ ನ ಹಾಲಿ ನ್ಯಾಯಾಧೀಶರು ತನಿಖೆ ನಡೆಸಲಾಗುವುದೆಂದು ಮುಖ್ಯಮಂತ್ರಿ ತಿಳಿಸಿದ್ದಾರೆ. ತನಿಖೆಗೆ ಪಂಜಾಬ್ ಸರ್ಕಾರ ಸಂಪೂರ್ಣ ಸಹಕಾರ ನೀಡಲಿದೆ ಎಂದು ಈ ವೇಳೆ ಅವರು ತಿಳಿಸಿದ್ದಾರೆ.

- Advertisement -

ಸಿಧು ಮೂಸೆವಾಲಾ ಅವರನ್ನು ನಾವೇ ಹತ್ಯೆ ನಡೆಸಿದ್ದು ಎಂದು ಇಬ್ಬರು ಗ್ಯಾಂಗ್’ಸ್ಟರ್ ಗಳಾದ ಲಾರೆನ್ಸ್ ಬಿಷ್ಣೋಯ್ ಮತ್ತು ಕೆನಡಾ ಮೂಲದ ಗೋಲ್ಡಿ ಬ್ರಾರ್ ಒಪ್ಪಿಕೊಂಡಿದ್ದಾರೆ. ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯ್ ಮತ್ತು ಗೋಲ್ಡಿ ಬ್ರಾರ್ ನಿಕಟವರ್ತಿಗಳೆಂದು ತಿಳಿದು ಬಂದಿದ್ದು, ಇಬ್ಬರು ಸೇರಿಕೊಂಡು ಸಿಧು ಮೂಸೆವಾಲಾ ಅವರನ್ನು ಹತ್ಯೆ ನಡೆಸಿದ್ದಾರೆ ಎಂದು ಹೇಳಲಾಗಿದೆ.

ಘಟನೆಗೆ ಸಂಬಂಧಿಸಿದಂತೆ ಐಪಿಸಿ ಸೆಕ್ಷನ್ 302, 307, 341 ಮತ್ತು ಶಸ್ತ್ರಾಸ್ತ್ರ ಕಾಯ್ದೆ 25, 27ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Join Whatsapp