ಶಿರಸಿ: ಪರೇಶ್ ಮೇಸ್ತಾ ಪ್ರಕರಣದಲ್ಲಿ ಹಿಂದುಳಿದ ವರ್ಗಗಳ ಯುವಕರ ಮೇಲೆ ಮಾತ್ರ ಯಾಕೆ ಕೇಸ್ ದಾಖಲಾಯಿತು? ಹೋರಾಟದ ನೇತೃತ್ವ ವಹಿಸಿದ್ದ ಕಾಗೇರಿಯವರಂಥ ನಾಯಕರ ಮೇಲೆ ಯಾಕೆ ಕೇಸ್ ದಾಖಲಾಗಿಲ್ಲ ಎಂದು ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಪ್ರಶ್ನಿಸಿದರು.
ಪರೇಶ್ ಮೇಸ್ತಾ ಪ್ರಕರಣದಲ್ಲಿ ಅಂದಿನ ಐಜಿ ಹೆಮಂತ್ ನಿಂಬಾಳ್ಕರ್ ಅವರು ಕಾಂಗ್ರೆಸ್ ನಾಯಕರ ಸೂಚನೆಯ ಮೇರೆಗೆ ಸುಳ್ಳು ಕೇಸ್ ದಾಖಲು ಮಾಡಿದ್ದಾರೆ ಎಂಬ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಆರೋಪಕ್ಕೆ ಕೈ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್ ತಿರುಗೇಟು ಕೊಟ್ಟಿದ್ದಾರೆ.
ಈ ಪ್ರಕರಣದ ಕುರಿತು ಕೇಸ್ ದಾಖಲಾಗದಂತೆ ಯಾರೊಂದಿಗೆ ನೀವು ಹೊಂದಾಣಿಕೆ ಮಾಡಿಕೊಂಡಿದ್ರಿ?, ನಾನೊಬ್ಬಳು ಹೆಣ್ಣೆಂದು ನನ್ನ ಮತ್ತು ನನ್ನ ಕುಟುಂಬವನ್ನ ಗುರಿಯಾಗಿಸಿ ಟೀಕಿಸುತ್ತಿದ್ದಾರೆ. ಮೇಸ್ತಾ ಪ್ರಕರಣದಲ್ಲಿ ನನ್ನ ಗಂಡನ ಮೇಲೆ ಈಗ ಕಾಗೇರಿಯವರು ಆರೋಪ ಹೊರಿಸಿದ್ದಾರೆ. ಕಾಗೇರಿಯವರು ಅಂದು ಈ ಭಾಗದ ಶಾಸಕರಾಗಿದ್ದರು. ನ್ಯಾಯಕ್ಕಾಗಿ ಹೋರಾಟ ನಡೆಸಿದ್ದೆವು ಎನ್ನುತ್ತಾರೆ. ಹಾಗಿದ್ದರೆ, ಆ ಪ್ರಕರಣದಲ್ಲಿ ಹಿಂದುಳಿದ ವರ್ಗದ ಯುವಕರ ಮೇಲೆ ಮಾತ್ರ ಯಾಕೆ ಕೇಸ್ ಆಗಿದೆ, ಹೋರಾಟ ನಡೆಸಿದ ನಿಮ್ಮಂಥ ನಾಯಕರ ಮೇಲೆ ಯಾಕೆ ಕೇಸ್ ಆಗಿಲ್ಲ ಎಂದು ವಾಗ್ದಾಳಿ ನಡೆಸಿದರು.