ಭಾನುವಾರವೇ ಏಕೆ ರಜೆ?

Prasthutha|

01-01-2022 ರಿಂದ ಹೊಸ ವರ್ಷದ ಕೊಡುಗೆಯಾಗಿ ಯುಎಇಯಲ್ಲಿ ಹೊಸ ರಜಾ ನೀತಿ ಜಾರಿಗೆ ಬರುತ್ತಿದೆ. ಇದರ ಪ್ರಕಾರ ಇಡೀ ಜಗತ್ತಿನಲ್ಲಿಯೆ ತನ್ನ ನಾಡಿನ ಜನ ಸಾಮಾನ್ಯರಿಗೆ ಅತ್ಯಂತ ಹೆಚ್ಚು ರಜೆ ಕೊಡುವ ನಾಡಾಗಿ ಹೊರಹೊಮ್ಮುತಿದೆ. ವಾರದಲ್ಲಿ ನಾಲ್ಕೂವರೆ ದಿನ ಮಾತ್ರ ಕೆಲಸ! ಎರಡೂವರೆ ದಿನ ರಜೆ!! ರಾಜ ಪ್ರಭುತ್ವ ಹೆಚ್ಚು ದುಡಿಸಿ ಜನ ಸಾಮಾನ್ಯರ ರಕ್ತ ಹೀರುತ್ತದೆ ಎಂಬ ನಿಲುವಿನಿಂದ ಪ್ರಜಾಪ್ರಭುತ್ವದಲ್ಲಿ ಬದುಕುತ್ತಿರುವ ರಕ್ತ ಹೀನ ಜನರು ನಾವುಗಳು. ನಮ್ಮಲ್ಲಿ ಇರುವ ಪ್ರಜಾಪ್ರಭುತ್ವದಲ್ಲಿ ದಿನೇ ದಿನೇ ಹೆಚ್ಚು ಜನರಿಗೆ ಉದ್ಯೋಗ ಕೊಡದೆ ಕಡಿಮೆ ಜನರಿಗೆ ಉದ್ಯೋಗ ನೀಡಿ ಹೆಚ್ಚು ಹೆಚ್ಚು ದುಡಿಸುತ್ತಿರುವುದು ಅದೇ ಸಮಯದಲ್ಲಿ  ಹೆಚ್ಚು ಹೆಚ್ಚು ನಿರುದ್ಯೋಗಕ್ಕೂ ಕಾರಣವಾಗಿದೆ. ಯುಎಇಯ ರಾಜ ತಮ್ಮಿಚ್ಛೆಯಂತೆ ಮಾಡಿದ್ದಾರೆ, ಆದರಿಲ್ಲಿ ನಮ್ಮಲ್ಲಿ ಪ್ರಜೆಗಳಾದ ನಾವುಗಳು ದನಿ ಎತ್ತದೆ ಯಾವುದೇ ಜನಪರ ಕೆಲಸವನ್ನು ಪ್ರಭುತ್ವದಿಂದ ದಕ್ಕಿಸಿಕೊಳ್ಳಲು ಸಾಧ್ಯವಿಲ್ಲ.

- Advertisement -

ನಮ್ಮಲ್ಲಿ ಉದ್ಯೋಗವೆ ಇಲ್ಲ ರಜೆ ಬಗ್ಗೆ ಚರ್ಚೆ ಬೇಕೇ? ಅನಿಸಿದರೂ ಚರ್ಚಿಸಲೆಬೇಕಿದೆ. ಭಾರತದಲ್ಲಿ ಭಾನುವಾರ ರಜೆ ಅಂತ ಶುರುವಾಗಿದ್ದು 1843 ರಲ್ಲಿ ಎಂದು ಇಂಟರ್ನೆಟ್ ನಲ್ಲಿ ಹುಡುಕಿದಾಗ ಸಿಕ್ಕಿತು. ಇವತ್ತಿಗೂ ರಾಜ್ಯ ಸರ್ಕಾರದ ರಜೆಗಳು ಬೇರೆ ಒಕ್ಕೂಟ ಸರ್ಕಾರದ ರಜೆಗಳು ಬೇರೆ ಅಂತಿರುವಾಗ 1843 ರಲ್ಲಿ ಒಕ್ಕೂಟವು ಇರಲಿಲ್ಲ ರಾಜ್ಯವು ಇರಲಿಲ್ಲ, ಆಗ ಇದ್ದಿದ್ದು ರಾಜರ ಆಳ್ವಿಕೆಯ ಕನ್ನಡ ನಾಡು ದೇಶವಾಗಿದ್ದರಿಂದ ಈ ಮಾಹಿತಿಯನ್ನು ಕರಾರುವಾಕು ಎಂದು ಪರಿಗಣಿಸಲಾಗದು. ಇನ್ನು 1950 ರ ನಂತರ ಇಂಡಿಯಾ ಒಕ್ಕೂಟದ ಸಂವಿಧಾನದ ಆಧಾರದಲ್ಲಿ ಆಡಳಿತ ನಡೆಯುತ್ತಿರುವುದರಿಂದ ಸಂವಿಧಾನದ ಯಾವುದಾದರು ಆರ್ಟಿಕಲ್ ರಜೆ ಬಗ್ಗೆ ನುಡಿದಿದ್ಯಾ ಎಂದು ಪರಿಶೀಲಿಸಿದೆ ಯಾವುದೆ ಮಾಹಿತಿ ಸಿಗಲಿಲ್ಲ. ಸಂವಿಧಾನ ಚೆನ್ನಾಗಿ ತಿಳಿದವರು ಇದರ ಬಗ್ಗೆ ನಮಗು ತಿಳಿಸಿಕೊಡಿ, ತಿಳಿಯುವ ಆಸಕ್ತಿಯಿದೆ.

ಒಂದು ಮಣ ರಜೆಗಳಿವೆ ಒಕ್ಕೂಟ ಸರ್ಕಾರ ಮತ್ತು ರಾಜ್ಯ ಸರ್ಕಾರದ ಕಡೆಯಿಂದ ಅಂತ ಅನಿಸಿದರೆ ಅದು ಬರಿ ಮೇಲ್ಮೈಯ್ ತಿಳಿವಳಿಕೆ ಆಗುತ್ತದೆ. ಕಾರ್ಪೋರೇಟ್ ವಲಯದಲ್ಲಿ ವೀಕೆಂಡ್ 2 ದಿನ ರಜೆ ಇದೆ ಬಿಡಿ ಮಜ ಬಿಡಿ ಎಂದರು ಈ ರಜೆಯ ಚರ್ಚೆ ಸರಿಯಾಗಿ ಆಗದು. ಏಕೆಂದರೆ ಅತಿ ಹೆಚ್ಚು ಖಾಸಗಿ ವಲಯ, ಅಸಂಘಟಿತ ವಲಯ, ಕೃಷಿ ವಲಯದಲ್ಲಿ ದುಡಿಯುತ್ತ ಅನಾರೋಗ್ಯಕರವಾದ ಬದುಕು ಬದುಕುತ್ತಿರುವವರೆ ಹೆಚ್ಚು ಇರುವುದರಿಂದ. ಇವರೆಲ್ಲರಿಗೂ ಭಾನುವಾರ ಒಂದೇ ದಿನ ರಜೆ ಇದೆ. ಕೃಷಿ ವಲಯದಲ್ಲಿ ಅದು ಕೂಡ ಇಲ್ಲಾ ಎಂದರು ಏನೋ ಒಂದು ರೀತಿ ಭಾನುವಾರ ರಜೆ ಅನ್ನುವಂತೆಯೆ ಪಿ಼ಕ್ಸ್  ಆಗಿರುತ್ತಾರೆ. ಕನ್ನಡ ನಾಡು-ನುಡಿ ಮತ್ತು ಸಾಮಾಜಿಕ ನ್ಯಾಯದ ತಳಹದಿ ಮೇಲೆ ಮುಂದಿನ 50 ವರ್ಷಗಳ ಮುನ್ನೋಟ ಗಮನದಲ್ಲಿ ಇಟ್ಕೊಂಡು ಬರಿ ಭಾನುವಾರ ರಜೆ , ಸಾಮಾಜಿಕ ಅನ್ಯಾಯ ಹೆಚ್ಚಿಸಲು ಇರುವ ಜಾತಿ-ಧರ್ಮಗಳ ಹಬ್ಬದ ರಜೆ ಮತ್ತು ಕನ್ನಡ ನಾಡು-ನುಡಿ ಗೆ ದ್ರೋಹವೆಸಗುತ್ತಿರುವ ಇಂಡಿಯಾ ಒಕ್ಕೂಟ ಮಟ್ಟದ ರಜೆಗಳ ಬಗ್ಗೆ ಚರ್ಚಿಸಿ ಹೊಸ ರಜೆ ನೀತಿಯನ್ನು ಕಂಡಿಡಿದು ಜಾಗೃತಿ ಮೂಡಿಸಿ ಅಳವಡಿಸಿಕೊಳ್ಳುವಂತೆ ಮಾಡಬೇಕಿದೆ.

- Advertisement -

ಇದರಿಂದ ಈ ಸಮಾಜದಲ್ಲಿ ಅನಾರೋಗ್ಯಕರವಾಗಿ ಹೆಚ್ಚು ಜನರು ಬದುಕುತ್ತಿರುವುದನ್ನು ಆರೋಗ್ಯಕರವಾಗಿ ಬದುಕುವುದರ ಕಡೆಗೆ ಬದಲಾಯಿಸಬಹುದು. ಎಲ್ಲಾ ಬದಲಾವಣೆಗಳು ಮೊದಲು ಕಷ್ಟಕರವೆ ನಂತರ ಗೊಂದಲವೆ ಕಡೆಯಲ್ಲಿ ಅದ್ಭುತವಾಗುತ್ತದೆ. ಹೆಚ್ಚು ಜನರ ಖುಶಿ ಮತ್ತು ಸೌಕರ್ಯದ ಬದುಕಿಗಾಗಿ ವ್ಯವಸ್ಥೆಯಲಿ ಬದಲಾವಣೆ ಅವಾಗವಾಗ ತರುತ್ತಲೆ ಇರಬೇಕಾಗುತ್ತದೆ.

Join Whatsapp