ಗೋಡ್ಸೆ ಆರಾಧಕನಿಗೆ ಪರಿಹಾರ ಧನ ನೀಡಿದ ಸರ್ಕಾರ, ಮೃತ ಯೋಧನಿಗೆ ಯಾಕೆ ನೀಡಿಲ್ಲ?: ಪ್ರಿಯಾಂಕ್ ಖರ್ಗೆ

Prasthutha|

ಬೆಂಗಳೂರು: ‘ಶಿವಮೊಗ್ಗದಲ್ಲಿ ಹತ್ಯೆಗೀಡಾದ ಹರ್ಷನ ಕುಟುಂಬಕ್ಕೆ ಸರ್ಕಾರ 25 ಲಕ್ಷ ರೂ. ಪರಿಹಾರ ನೀಡಿರುವುದನ್ನುಪ್ರಶ್ನಿಸಿದ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ,ಯಾವ ನಿಯಮಗಳ ಆಧಾರದಲ್ಲಿ ಸಾರ್ವಜನಿಕರ ತೆರಿಗೆ ಹಣವನ್ನು ನೀಡಲಾಗಿದೆ? ಎಂದು ಬಿಜೆಪಿಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

- Advertisement -

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು ‘ಅನಾರೋಗ್ಯ ಪೀಡಿತರಿಗೆ, ಬಡವರ ನೆರವಿಗೆ, ಯೋಧರ ಕುಟುಂಬಗಳಿಗೆ ಬಳಸಬಹುದಾದ ‘ವಿವೇಚನೆ’ಯನ್ನು ತಮ್ಮ ಪಕ್ಷದ ಕೆಡರ್ ಒಬ್ಬನಿಗೆ ಬಳಸಿದ್ದು ಮುಖ್ಯಮಂತ್ರಿಗಳ ಯೋಚನೆ, ವಿವೇಚನೆ ಎಂತದ್ದು ಎಂದು ತಿಳಿಸುತ್ತದೆ. ಬಿಜೆಪಿ ಪಕ್ಷದ ಮೂಲಕ 25 ಲಕ್ಷವಲ್ಲ 25 ಕೋಟಿಯಾದರೂ ಕೊಡಲಿ, ಆದರೆ ಸರ್ಕಾರದ ಹಣ ದುರ್ಬಳಕೆಗೆ ಅಧಿಕಾರ ಕೊಟ್ಟವರು ಯಾರು?’ ಎಂದು ಪ್ರಶ್ನಿಸಿದ್ದಾರೆ.

‘ಗಾಂಧಿಯ ಕೊಲೆಗಾರ ಗೋಡ್ಸೆಯಲ್ಲಿ ದೇಶಭಕ್ತಿ ಕಾಣುವ ವ್ಯಕ್ತಿಯ ಸಾವಿಗೆ 25 ಲಕ್ಷ ರೂ. ನೀಡಿದ ಸರ್ಕಾರ, ದೇಶದ ಗಡಿ ಕಾಯುತ್ತಾ ಮೃತನಾದ ಯೋಧ ಅಲ್ತಾಫ್‌ಗೆ ಎಷ್ಟು ನೀಡಿದೆ? ದೇಶಭಕ್ತಿಯ ವ್ಯಾಖ್ಯಾನ ಬದಲಿಸಿದೆಯೇ ಬಿಜೆಪಿ ಸರ್ಕಾರ? ಗೋಡ್ಸೆ ಆರಾಧಕನಿಗೆ ಹಣ ನೀಡುವ ಮೂಲಕ ಗಾಂಧಿ ಹತ್ಯೆಯನ್ನು ಅನುಮೋದಿಸುತ್ತದೆಯೇ ಬಿಜೆಪಿ? ಸಿಎಂ ಉತ್ತರಿಸಬೇಕು’ ಎಂದು ಒತ್ತಾಯಿಸಿದ್ದಾರೆ.

- Advertisement -

ತಮ್ಮ ಪಕ್ಷದ ಕಾರ್ಯಕರ್ತನ ಕುಟುಂಬಕ್ಕೆ 25 ಲಕ್ಷ ಹಣ ನೀಡಿರುವ ಈ ಸರ್ಕಾರ, ‘ನೆರೆ ಸಂತ್ರಸ್ತರಿಗೆ, ಕೋವಿಡ್ ನಿಂದ ಮೃತಪಟ್ಟವರ ಕುಟುಂಬಕ್ಕೆ ಪರಿಹಾರ ನೀಡಲು ಹಿಂದೆಮುಂದೆ ನೋಡುತ್ತದೆ. ಇಂತಹ ಉದಾರ ಮನಸಿದ್ದರೆ ಧರ್ಮಸ್ಥಳದಲ್ಲಿ ಬಿಜೆಪಿ ಮುಖಂಡನಿಂದ ಹತ್ಯೆಯಾದ ದಲಿತ ಯುವಕ ದಿನೇಶ್ ಹಾಗೂ ಕೊಡಗಿನ ಯೋಧ ಅಲ್ತಾಫ್ ಕುಟುಂಬಕ್ಕೆ ಏಕೆ ಪರಿಹಾರ ನೀಡಲಿಲ್ಲ? ಎಂದು ಆಕ್ರೋಶಗೊಂಡರು.

ನಮ್ಮ ಯೂಟ್ಯೂಬ್ ಚಾನೆಲನ್ನು Subscribe ಮಾಡಿ : Prasthutha News

Join Whatsapp