ಚೆನ್ನೈ: 2026ರಲ್ಲಿ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಎಲ್ಲೇ ವಿರೋಧ ಬಂದರೂ ತಮ್ಮ ಪಕ್ಷವೇ ಗೆಲ್ಲಲಿದೆ ಎಂದು ತಮಿಳುನಾಡು ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಪರೋಕ್ಷವಾಗಿ ನಟ ಕಮ್ ರಾಜಕಾರಣಿ ವಿಜಯ್ ಎಚ್ಚರಿಕೆ ನೀಡಿದ್ದಾರೆ.
ದಳಪತಿ ವಿಜಯ್ ಅವರು ಅಕ್ಟೋಬರ್ 27ರಂದು ತನ್ನ ಪಕ್ಷ ತಮಿಳಗ ವೆಟ್ರಿ ಕಳಗಂ (TVK) ಉದ್ಘಾಟನಾ ಸಮಾವೇಶವನ್ನು ನಡೆಸಿದರು. ವಿಲ್ಲುಪುರಂ ಜಿಲ್ಲೆಯ ವಿಕ್ರವಾಂಡಿಯಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ವಿಜಯ್ ಅವರು ತಮ್ಮ ಮೊದಲ ರಾಜಕೀಯ ಭಾಷಣವನ್ನು ಮಾಡಿದರು. ಅವರು ಆಡಳಿತಾರೂಢ ದ್ರಾವಿಡ ಮುನ್ನೇತ್ರ ಕಳಗಂ (DMK) ಮತ್ತು ಬಿಜೆಪಿಯ ಹೆಸರೇಳದೆ ವಾಗ್ದಾಳಿ ನಡೆಸಿದ್ದರು.
ಅಂದಿನಿಂದ, ತಮಿಳುನಾಡಿನ ನಾಯಕರು, ವಿಶೇಷವಾಗಿ ಡಿಎಂಕೆ ನಾಯಕರು ವಿಜಯ್ ಅವರ ಭಾಷಣ ಮತ್ತು ಹೇಳಿಕೆಗಳಿಗೆ ಪ್ರತಿಕ್ರಿಯಿಸುತ್ತಿದ್ದಾರೆ.
ವಿಲ್ಲುಪುರಂನಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಉದಯನಿಧಿ, ವಿಜಯ್ ಮತ್ತು ಅವರ ರಾಜಕೀಯ ಬಗ್ಗೆ ಮಾತನಾಡಿದ್ದಾರೆ. 2026ರ ವಿಧಾನಸಭಾ ಚುನಾವಣೆಯಲ್ಲಿ ನಮ್ಮನ್ನು ವಿರೋಧಿಸಲು ಯಾರು ನಿರ್ಧರಿಸಿದರೂ, ಅವರು ಯಾವುದೇ ಮೈತ್ರಿ ಮಾಡಿಕೊಂಡರೂ, ಅವರು ಯಾವುದೇ ದಿಕ್ಕಿನಿಂದ ಬಂದರೂ ಪರವಾಗಿಲ್ಲ, ಅದು ದೆಹಲಿ ಅಥವಾ ಸ್ಥಳೀಯವಾಗಿ ಯಾರೇ ಬರಲಿ ಗೆಲ್ಲುವುದು ಮಾತ್ರ ಡಿಎಂಕೆ ಎಂದು ಹೇಳಿದರು.
ವಿಜಯ್ ಜೊತೆ ಬಹಳ ದಿನಗಳಿಂದ ಗೆಳೆತನ ಹೊಂದಿರುವ ಉದಯನಿಧಿ, ತಮ್ಮ ಚೊಚ್ಚಲ ರಾಜಕೀಯ ಸಮಾವೇಶಕ್ಕೆ ಸಹ ನಟನಿಗೆ ಶುಭ ಹಾರೈಸಿದ್ದರು. ವಿಜಯ್ ಹಲವು ವರ್ಷಗಳಿಂದ ಸ್ನೇಹಿತ. ನಾನು ಅವರನ್ನು ಬಾಲ್ಯದಿಂದಲೂ ನೋಡಿದ್ದೇನೆ. ನನ್ನ ಪ್ರೊಡಕ್ಷನ್ ಹೌಸ್ ನ ಮೊದಲ ಚಿತ್ರದಲ್ಲಿ ಅವರು ನಟಿಸಿದ್ದರು. ಈ ಹೊಸ ಸಾಹಸದಲ್ಲಿ ಅವರಿಗೆ ಯಶಸ್ಸು ಸಿಗಲಿ ಎಂದು ಹಾರೈಸುತ್ತೇನೆ ಎಂದು ಉದಯನಿಧಿ ಹೇಳಿದ್ದಾರೆ.
ವಿಜಯ್ ಅವರ ರಾಜಕೀಯ ಭಾಷಣದ ನಂತರ, ಅದಕ್ಕೆ ಪ್ರತಿಕ್ರಿಯೆಗಳು ವಿಭಿನ್ನವಾಗಿವೆ. ಕಾಂಗ್ರೆಸ್ ನಾಯಕ ಪಿ ಚಿದಂಬರಂ ಇದನ್ನು ಸಿದ್ಧಾಂತಗಳ ಮಿಶ್ರಣ ಎಂದು ಹೇಳಿದ್ದು ಟಿವಿಕೆ ಡಿಎಂಕೆಯ ಮತ ಹಂಚಿಕೆಯನ್ನು ವಿಭಜಿಸುವುದಿಲ್ಲ ಎಂದು ಹೇಳಿದರು.