ಡ್ರಗ್ಸ್ ಪಿಡುಗಿಗೆ ಆರ್.ಎಸ್.ಎಸ್ ಮುಖ್ಯಸ್ಥರು ಯಾರನ್ನು ದೂಷಿಸುತ್ತಾರೆ? |ಶಿವಸೇನಾ ಸಂಸದ ಸಂಜಯ್ ರಾವತ್ ಕಿಡಿ

Prasthutha|

ಪುಣೆ: ಸಮಾಜದಲ್ಲಿ ವ್ಯಾಪಕವಾಗುತ್ತಿರುವ ಮಾದಕದ್ರವ್ಯ ಸೇವನೆಯ ಬಗ್ಗೆ ಆರ್.ಎಸ್.ಎಸ್. ಮುಖ್ಯಸ್ಥ ಮೋಹನ್ ಭಾಗವತ್ ಕಳವಳ ವ್ಯಕ್ತಪಡಿಸಿದ ಬೆನ್ನಲ್ಲೇ ಶಿವಸೇನಾ ನಾಯಕ, ದೇಶದಲ್ಲಿ ಡ್ರಗ್ಸ್ ಪಿಡುಗಿನ ಹೆಚ್ಚಳಕ್ಕೆ ಯಾರನ್ನು ದೂಷಿಸುತ್ತೀರಿ ಎಂದು ಅವರು ಪ್ರಶ್ನಿಸುವ ಮೂಲಕ ಆರೆಸ್ಸೆಸ್ ಮುಖ್ಯಸ್ಥ ಮೋಹತ್ ಭಾಗವತ್ ಅವರಿಗೆ ತಿರುಗೇಟು ನೀಡಿದ್ದಾರೆ.

- Advertisement -

ಈ ಹಿಂದೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನೋಟ್ ಬ್ಯಾನ್ ಮೂಲಕ ಮಾದಕದ್ರವ್ಯಕ್ಕೆ ಕಡಿವಾಣ ಹಾಕುವ ಯೋಜನೆ ಹಾಕಿಕೊಂಡಿದೆ ಎಂಬ ಹೇಳಿಕೆ ನೀಡಿದ್ದರು. ಆದರೆ ಪ್ರಸಕ್ತ ದೇಶದಲ್ಲಿ ಅದು ಹೆಚ್ಚಾಗುತ್ತಿದ್ದು, ಮಾದಕದ್ರವ್ಯ ತಡೆಗಟ್ಟಲು ಕೇಂದ್ರ ಕ್ರಮ ಜರುಗಿಸಿಲ್ಲ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಕೇಂದ್ರ ಸರ್ಕಾರ ನೀಡಿದ ಭರವಸೆಯನ್ನು ಜಾರಿಗೊಳಿಸುವಲ್ಲಿ ವೈಫಲ್ಯತೆ ಅನುಭವಿಸಿರುವುದು ಆರೆಸ್ಸೆಸ್ ಮುಖ್ಯಸ್ಥರ ಹೇಳಿಕೆಯಿಂದ ಬಹಿರಂಗವಾಗಿದೆ ಎಂದು ಶಿವಸೇನಾ ನಾಯಕ ರಾವತ್ ಕುಟುಕಿದರು.

- Advertisement -

ನಾಗ್ಪುರದಲ್ಲಿ ವಿಜಯದಶಮಿ ಸಂದರ್ಭದಲ್ಲಿ ಮಾಡಿದ ವಾರ್ಷಿಕ ಭಾಷಣದಲ್ಲಿ ಭಾಗವತ್ ಡ್ರಗ್ಸ್ ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಮಾತನಾಡಿ, ಇದನ್ನು ಸಮಾಜದ ಎಲ್ಲಾ ವರ್ಗಗಳು ಸೇವಿಸುತ್ತಿವೆ ಮತ್ತು ರಾಷ್ಟ್ರೀಯ ಭದ್ರತೆಗೆ ಬೆದರಿಕೆ ಒಡ್ಡುತ್ತಿವೆ ಎಂದು ಒತ್ತಿ ಹೇಳಿದ್ದರು.

ಮೋಹನ್ ಭಾಗವತ್ ಹೇಳಿಕೆಗೆ ಪ್ರತಿಕ್ರಿಯಿಸಿದ ಸಂಸದ ಸಂಜಯ್ ರಾವತ್, ಪ್ರಧಾನಿ ಮೋದಿ ಡ್ರಗ್ಸ್ ವ್ಯವಹಾರದಿಂದ ಸಂಗ್ರಹಿಸಲಾಗುವ ಕಪ್ಪು ಹಣ ಮತ್ತು ದೇಶವಿರೋಧಿ ಚಟುವಟಿಕೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ನೋಟ್ ಬ್ಯಾನ್ ಮಾಡುತ್ತಿರುವುದಾಗಿ ದೇಶದ ಜನತೆಯನ್ನು ನಂಬಿಸಿದ್ದರು. ಆದರೆ ಪ್ರಸಕ್ತ ಈಗ ದೇಶದಲ್ಲೇ ಅತ್ಯಧಿಕ ಮಾದಕದ್ರವ್ಯ ಸೇವನೆ ಮತ್ತು ದೇಶವಿರೋಧಿ ಚಟುವಟಿಕೆ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಂಬರುವ ಉಪ ಚುನಾವಣೆಯಲ್ಲಿ ದಾದ್ರಾ ಲೋಕಸಭಾ ಕ್ಷೇತ್ರ, ನಗರ ಮತ್ತು ಹವೇಲಿಯ ಕ್ಷೇತ್ರಗಳನ್ನು ಶಿವಸೇನ ಗೆಲುವು ಸಾಧಿಸುವ ವಿಶ್ವಾಸವಿದೆ. ಮಾತ್ರವಲ್ಲ 2024 ರ ಸಾರ್ವತ್ರಿಕ ಚುನಾವಣೆಯಲ್ಲಿ ಶಿವಸೇನಾ 22 ಸಂಸದರನ್ನು ಗೆಲ್ಲಿಸುವ ಮೂಲಕ ರಾಷ್ಟ್ರ ರಾಜಕೀಯದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಲಿದ್ದೇವೆ ಎಂದು ರಾವತ್ ತಿಳಿಸಿದರು.



Join Whatsapp