‘ಲೋಕ’ ಚುನಾವಣೆಯಲ್ಲಿ ಸೋತ ಕೇಂದ್ರ ಸಚಿವರು ಯಾರೆಲ್ಲಾ?

Prasthutha|

ನವದೆಹಲಿ: 2024ರ ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಇದರಲ್ಲಿ ಬಿಜೆಪಿಯ ಪ್ರಮುಖರಾದ ಸ್ಮೃತಿ ಇರಾನಿ, ಅರ್ಜುನ್ ಮುಂಡಾ, ಅಜಯ್ ಮಿಶ್ರಾ ಟೆನಿ, ಕೈಲಾಶ್ ಚೌಧರಿ ಹಾಗೂ ರಾಜೀವ್ ಚಂದ್ರಶೇಖರ್ ಸೇರಿದಂತೆ ಹಲವು ಮಂದಿ ಸೋಲನುಭವಿಸಿದ್ದಾರೆ.

- Advertisement -


ಸೋತ ಪ್ರಮುಖರು:
ಸ್ಮೃತಿ ಇರಾನಿ: ಬಿಜೆಪಿ ಭದ್ರಕೋಟೆಯಾಗಿದ್ದ ಅಮೇಥಿ ಲೋಕಸಭಾ ಕ್ಷೇತ್ರದಲ್ಲಿ ಸ್ಮೃತಿ ಇರಾನಿಯವರ ಸೋಲನ್ನು ಯಾರೂ ನಿರೀಕ್ಷಿಸಿರಲಿಲ್ಲ. 2019 ರಲ್ಲಿ ರಾಹುಲ್ ಗಾಂಧಿಯನ್ನು ಸೋಲಿಸಿದ್ದ ಸ್ಮೃತಿ ಇರಾನಿ ಅವರು ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಕಿಶೋರಿ ಲಾಲ್ ಶರ್ಮಾ ವಿರುದ್ಧ 1,67,196 ಮತಗಳ ಅಂತರದಿಂದ ಸೋತಿದ್ದಾರೆ.


ಅಜಯ್ ಮಿಶ್ರಾ ಟೆನಿ: ವಿವಾದಾತ್ಮಕ ಲಖಿಂಪುರ ಖೇರಿ ಘಟನೆಯಲ್ಲಿ ಸಿಲುಕಿರುವ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಟೆನಿಯವರನ್ನು ಸಮಾಜವಾದಿ ಪಕ್ಷದ ಉತ್ಕರ್ಷ್ ವರ್ಮಾ ಅವರು 34,329 ಮತಗಳಿಂದ ಸೋಲಿಸಿದ್ದಾರೆ.

- Advertisement -


ಅರ್ಜುನ್ ಮುಂಡಾ: ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವ ಅರ್ಜುನ್ ಮುಂಡಾ ಅವರು ಜಾರ್ಖಂಡ್ ನ ಖುಂಟಿ ಕ್ಷೇತ್ರದಲ್ಲಿ ಹೀನಾಯ ಸೋಲು ಕಂಡಿದ್ದಾರೆ. ಇವರು ಕಾಂಗ್ರೆಸ್ ಅಭ್ಯರ್ಥಿ ಕಾಳಿಚರಣ್ ಮುಂಡಾ ವಿರುದ್ಧ 1,49,675 ಮತಗಳ ಅಂತರದಿಂದ ಸೋತಿದ್ದಾರೆ.


ಕೈಲಾಶ್ ಚೌಧರಿ: ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವ ಕೈಲಾಶ್ ಚೌಧರಿ ಅವರು ರಾಜಸ್ಥಾನದ ಬಾರ್ಮರ್ನಲ್ಲಿ ಕಾಂಗ್ರೆಸ್ ನ ಉಮ್ಮೇದ ರಾಮ್ ಬೇನಿವಾಲ್ ಅವರಿಗಿಂತ 4.48 ಲಕ್ಷ ಮತಗಳಿಂದ ಹಿನ್ನಡೆ ಸಾಧಿಸಿ ಮೂರನೇ ಸ್ಥಾನ ಪಡೆದಿದ್ದಾರೆ. ಕೈಲಾಶ್ ಅವರಿಗೆ 2,86,733 ಮತಗಳು ಬಿದ್ದಿವೆ.

ರಾಜೀವ್ ಚಂದ್ರಶೇಖರ್: ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಅವರು ಕೇರಳದ ತಿರುವನಂತಪುರದಲ್ಲಿ ಕಾಂಗ್ರೆಸ್ ಮುಖಂಡ ಶಶಿ ತರೂರ್ ವಿರುದ್ಧ 16,077 ಮತಗಳ ಅಂತರದಿಂದ ಸೋತಿದ್ದಾರೆ.


ಉತ್ತರ ಪ್ರದೇಶದ ಚಂದೌಲಿ ಕ್ಷೇತ್ರದಲ್ಲಿ ಕೇಂದ್ರ ಭಾರೀ ಕೈಗಾರಿಕೆ ಸಚಿವ ಮಹೇಂದ್ರ ನಾಥ್ ಪಾಂಡೆ ಸೋತಿದ್ದಾರೆ. ವಸತಿ ಮತ್ತು ನಗರ ವ್ಯವಹಾರಗಳ ರಾಜ್ಯ ಸಚಿವ ಕೌಶಲ್ ಕಿಶೋರ್ ಅವರು ಮೋಹನ್ಲಾಲ್ಗಂಜ್ ನಲ್ಲಿ ಸಮಾಜವಾದಿ ಪಕ್ಷದ ಆರ್ಕೆ ಚೌಧರಿ ವಿರುದ್ಧ 70,292 ಮತಗಳಿಂದ ಸೋಲು ಕಂಡಿದ್ದಾರೆ.


ಕೇಂದ್ರದ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಖಾತೆಯ ರಾಜ್ಯ ಸಚಿವೆ ಸಾಧ್ವಿ ನಿರಂಜನ್ ಜ್ಯೋತಿ ಅವರು ಯುಪಿಯ ಫತೇಪುರ್ನಲ್ಲಿ ಸೋತಿದ್ದಾರೆ. ರೈಲ್ವೆ ಖಾತೆ ರಾಜ್ಯ ಸಚಿವ ರಾವ್ ಸಾಹೇಬ್ ದಾನ್ವೆ ಅವರು ಮಹಾರಾಷ್ಟ್ರದ ಜಲ್ನಾ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಕಲ್ಯಾಣ ವೈಜನಾಥ್ ರಾವ್ ಕಾಳೆ ವಿರುದ್ಧ ಸೋತಿದ್ದಾರೆ. ಸಂಪುಟ ಸಚಿವ ಆರ್ಕೆ ಸಿಂಗ್ ಅವರು ಬಿಹಾರದ ಅರ್ರಾದಿಂದ ಸಿಪಿಐ(ಎಂಎಲ್)ನ ಸುದಾಮ ಪ್ರಸಾದ್ ವಿರುದ್ಧ ಸೋತಿದ್ದಾರೆ.


ಇವರ ಜೊತೆಗೆ ಸಚಿವರಾದ ಮಹೇಂದ್ರ ನಾಥ್ ಪಾಂಡೆ, ಕೌಶಲ್ ಕಿಶೋರ್, ಸಾಧ್ವಿ ನಿರಂಜನ್ ಜ್ಯೋತಿ, ಸಂಜೀವ್ ಬಲ್ಯಾನ್, ರಾವ್ ಸಾಹೇಬ್ ದಾನ್ವೆ, ಆರ್ ಕೆ ಸಿಂಗ್, ವಿ ಮುರಳೀಧರನ್, ಎಲ್ ಮುರುಗನ್, ಸುಭಾಸ್ ಸರ್ಕಾರ್ ಮತ್ತು ನಿಶಿತ್ ಪ್ರಮಾಣಿಕ್ ಅವರೂ ಸೋಲಿನ ರುಚಿ ಕಂಡಿದ್ದಾರೆ.



Join Whatsapp