►ವಸಂತ ಬಂಗೇರ ದಂಪತಿಯನ್ನು ಸನ್ಮಾನಿಸಿದ ವಿಪಕ್ಷ ನಾಯಕ
ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಇಂದು ಆಯೋಜಿಸಿದ್ದ ಸಮಾರಂಭದಲ್ಲಿ ಕ್ಷೇತ್ರದ ಮಾಜಿ ಶಾಸಕ ವಸಂತ ಬಂಗೇರ ಅವರ ಜೀವನ ಚರಿತ್ರೆ ಕುರಿತಾದ ವಸಂತ ವಿನ್ಯಾಸ ಪುಸ್ತಕವನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಶನಿವಾರ ಬಿಡುಗಡೆ ಮಾಡಿ ಬಂಗೇರ ದಂಪತಿಯನ್ನು ಗೌರವಿಸಿದರು.
ಜೊತೆಗೆ ಕರಾಟೆಯಲ್ಲಿ ಸಾಧನೆ ಮಾಡಿರುವ ವಿದ್ಯಾರ್ಥಿಗಳನ್ನು ಸನ್ಮಾನಿಸಿದರು. ಮಾಜಿ ಶಾಸಕ ವೈ.ಎಸ್.ವಿ. ದತ್ತ, ಪುಸ್ತಕದ ಲೇಖಕ ಅರವಿಂದ ಚೊಕ್ಕಾಡಿ ಮತ್ತಿತರರು ಹಾಜರಿದ್ದರು.
ಬಳಿಕ ಮಾತನಾಡಿದ ಅವರು, ಭಾರತ ಅನೇಕ ಜಾತಿ, ಧರ್ಮಗಳು, ಭಾಷೆಗಳು, ಸಂಸ್ಕೃತಿಯ ಜನರನ್ನು ಹೊಂದಿರುವ ದೇಶ. ನಾವೆಲ್ಲರು ಭಾರತೀಯರು ಎಂಬುದು ಪ್ರತಿಯೊಬ್ಬರ ತಲೆಯಲ್ಲಿ ಇರಬೇಕು, ಇದು ನಮ್ಮ ಪಕ್ಷದ ಧ್ಯೇಯ. ಈ ವಿಚಾರವನ್ನು ನಾನು ಪ್ರಸ್ತಾಪ ಮಾಡಿದರೆ ಸಿಟಿ ರವಿ ಎಂಬ ಮತಾಂಧ ನನಗೆ ಮುಸ್ಲಿಮರ ಹೆಸರು ಇಡುತ್ತಾನೆ. ನನಗೆ ನನ್ನ ತಂದೆ ತಾಯಿ ಇಟ್ಟಿರುವ ಹೆಸರು ಸಿದ್ದರಾಮಯ್ಯ, ಹೀಗಿದ್ದಾಗ ನನಗೆ ಇನ್ನೊಂದು ಹೆಸರು ಇಡಲು ಸಿಟಿ ರವಿ ಯಾರು? ನಾನು ಸಿಟಿ ರವಿಗಿಂತ ಹೆಚ್ಚಿನ ಹಿಂದೂ, ಆದರೆ ರವಿಯಂತೆ ನಾನು ಇನ್ನೊಂದು ಧರ್ಮದ ದ್ವೇಷಿಯಲ್ಲ. ನಾನು ನನ್ನ ಧರ್ಮವನ್ನು ಪ್ರೀತಿಸುತ್ತೇನೆ, ಇನ್ನೊಂದು ಧರ್ಮಕ್ಕೆ ಗೌರವ ಕೊಡುತ್ತೇನೆ. ಇದು ನನಗೂ ಮತ್ತು ಆರ್,ಎಸ್,ಎಸ್ ನವರಿಗೂ ಇರುವ ವ್ಯತ್ಯಾಸ ಎಂದು ಸಿದ್ದರಾಮಯ್ಯ ಹೇಳಿದರು.
ತಮ್ಮನ್ನು ತಾವು ದೇಶಭಕ್ತರು ಎಂದು ಕರೆದುಕೊಳ್ಳುವವರು ನಿಜವಾದ ದೇಶಭಕ್ತರೇ ಎಂದು ಜನ ಯೋಚನೆ ಮಾಡಬೇಕು. ಮಹಾತ್ಮ ಗಾಂಧಿ, ನೆಹರು, ವಲ್ಲಬಾಬಾಯಿ ಪಟೇಲ್, ರಾಜೇಂದ್ರ ಪ್ರಸಾದ್, ಮೌಲಾನಾ ಆಜಾದ್, ಲಾಲ್ ಬಹದೂರ್ ಶಾಸ್ತ್ರಿ, ಇಂದಿರಾ ಗಾಂಧಿ ಅವರು ದೇಶಭಕ್ತರಲ್ಲವ? ನಾವು ದೇಶಭಕ್ತರಲ್ಲವಾ? ನೀವು ದೇಶಭಕ್ತರಲ್ಲವಾ? ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟದ್ದು ಕಾಂಗ್ರೆಸ್ ಪಕ್ಷ. 1925ರಲ್ಲಿ ಸ್ಥಾಪನೆಯಾದ ಆರ್, ಎಸ್, ಎಸ್ ನಲ್ಲಿ ದೇಶಕ್ಕಾಗಿ ತ್ಯಾಗ, ಬಲಿದಾನಗೈದು ಹುತಾತ್ಮರಾದ ಒಬ್ಬನೇ ಒಬ್ಬ ವ್ಯಕ್ತಿ ಇದ್ದಾನ? ದೇಶಕ್ಕಾಗಿ ತ್ಯಾಗ, ಬಲಿದಾನಗೈದ ಪಕ್ಷ ಇದ್ದರೆ ಅದು ಕಾಂಗ್ರೆಸ್ ಮಾತ್ರ. ಇದಕ್ಕಾಗಿ ಕಾಂಗ್ರೆಸ್ ನ ಹಲವಾರು ಜನ ಪ್ರಾಣ ಕಳೆದುಕೊಂಡು ನಮಗೆ ಸ್ವಾತಂತ್ರ್ಯ ತಂದುಕೊಟ್ಟರು. ಇದೇ ಸತ್ಯವನ್ನು ಹೇಳಿದರೆ ಸಿದ್ದರಾಮುಲ್ಲ ಖಾನ್ ಎಂದು ಕರೆಯುತ್ತಾರೆ. ಇದು ಸತ್ಯವಾ ಅಲ್ಲವಾ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ಯಾರು ಸಂವಿಧಾನವನ್ನು ವಿರೋಧ ಮಾಡುತ್ತಾರೆ, ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಳ್ತಾರೆ ಅವರು ದೇಶಭಕ್ತರಲ್ಲ. ಯಾರು ಸಂವಿಧಾನವನ್ನು ಗೌರವಿಸುತ್ತಾ, ಅಧಿಕಾರ ಸಿಕ್ಕಾಗ ಸಂವಿಧಾನ ರೀತ್ಯಾ ನಡೆದುಕೊಳ್ತಾರೆ ಅವರು ನಿಜವಾದ ದೇಶಭಕ್ತರು. ದೇಶಭಕ್ತಿಯನ್ನು ಆರ್,ಎಸ್,ಎಸ್ ಮತ್ತು ಬಿಜೆಪಿ ಗುತ್ತಿಗೆ ತೆಗೆದುಕೊಂಡಿದೆಯಾ? ಗಾಂಧಿ ಅವರನ್ನು ಕೊಂದವರಿಂದ ನಾವು ಪಾಠ ಕಲಿಯಬೇಕಾ? ಈ ದೇಶಕ್ಕೆ ಒಬ್ಬನೇ ಮಹಾತ್ಮ, ಅವರನ್ನೇ ಕೊಂದ ಗೋಡ್ಸೆಯನ್ನು ಆರಾಧಿಸುತ್ತಾರೆ ಎಂದು ಹೇಳಿದರು.
ಈ ದೇಶದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗ ಅಂದರೆ ನಮಗೆ ಸ್ವಾತಂತ್ರ್ಯ ಬಂದಾಗ ದೇಶದ ಅಕ್ಷರಸ್ಥರ ಪ್ರಮಾಣ 16% ಇತ್ತು, ಆಹಾರದ ಸ್ವಾವಲಂಬನೆ ಇರಲಿಲ್ಲ. ಆ ಸಂದರ್ಭದಲ್ಲಿ ಆಹಾರಕ್ಕಾಗಿ ಬೇರೆ ದೇಶಗಳ ಎದುರು ಗೋಗರೆಯಬೇಕಾದ ಪರಿಸ್ಥಿತಿ ಇತ್ತು, ಕಾಂಗ್ರೆಸ್ ಪಕ್ಷ ಹಸಿರು ಕ್ರಾಂತಿಯನ್ನು ಮಾಡಿ ಇಂದು 135 ಕೋಟಿ ಜನರಿಗೆ ಆಹಾರ ಸಿಗುವಂತೆ ಮಾಡಿದೆ, ಇದು ಬಿಜೆಪಿಯ ಸಾಧನೆ ಅಲ್ಲ. ಇಂದು ಅನೇಕ ಕೈಗಾರಿಕೆಗಳು, ಅಣೆಕಟ್ಟುಗಳು, ವಿಮಾನ ನಿಲ್ದಾಣಗಳು ಸ್ಥಾಪನೆ ಆಗಿದ್ದರೆ, ಸಂಪರ್ಕ ಕ್ರಾಂತಿಯ ಮೂಲಕ ಬೆರಳ ತುದಿಯಲ್ಲಿ ಜಗತ್ತಿನ ಮೂಲೆ ಮೂಲೆ ತಲುಪಲು ಸಾಧ್ಯವಾಗಿದ್ದರೆ ಅದಕ್ಕೆ ಕಾಂಗ್ರೆಸ್ ಕಾರಣ. ಖಾಸಗಿ ಬ್ಯಾಂಕುಗಳನ್ನು ರಾಷ್ಟ್ರೀಕರಣ ಮಾಡಿ ಬಡವರ ಪಾಲಿಗೆ ಬ್ಯಾಂಕಿನ ಬಾಗಿಲು ತೆರೆಯುವಂತೆ ಮಾಡಿದ್ದು ಇಂದಿರಾ ಗಾಂಧಿ ಅವರು. ಇಲ್ಲಿ ಕೆನೆರಾ ಬ್ಯಾಂಕ್ ಮತ್ತು ವಿಜಯಾ ಬ್ಯಾಂಕ್ ಇತ್ತು, ಅವುಗಳನ್ನು ವಿಲೀನ ಮಾಡಿ ರಾಜ್ಯದ ಪಾಲಿನ ಬ್ಯಾಂಕುಗಳನ್ನು ಬಂದ್ ಮಾಡಿದವರು ಬಿಜೆಪಿ ಅವರು. ಇದರಿಂದಾಗಿ ಇಂದು ಬಡವರಿಗೆ ಸಾಲ ಸಿಗುವ ಸ್ಥಿತಿ ಇದೆಯಾ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ಇಂದಿರಾ ಗಾಂಧಿ ಅವರ ಸರ್ಕಾರ 1971ರಲ್ಲಿ ಪಾಕಿಸ್ತಾನದ ವಿರುದ್ಧ ಹೋರಾಟ ಮಾಡಿ ಸುಮಾರು 1 ಲಕ್ಷ ಸೈನಿಕರನ್ನು ಸೆರೆ ಹಿಡಿಯಿತು. ಇದನ್ನು ಕಂಡ ಅಟಲ್ ಬಿಹಾರಿ ವಾಜಪೇಯಿ ಅವರು ʼಅಮ್ಮ ನೀನು ಸಾಮಾನ್ಯ ಮಹಿಳೆ ಅಲ್ಲ, ನೀವು ದುರ್ಗಿʼ ಎಂದು ಕರೆದಿದ್ದರು. ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಆಹಾರ ಭದ್ರತಾ ಕಾಯ್ದೆ, ಶಿಕ್ಷಣ ಹಕ್ಕು ಕಾಯ್ದೆ, ಮಾಹಿತಿ ಹಕ್ಕು ಕಾಯ್ದೆ, ಉದ್ಯೋಗ ಹಕ್ಕು ಕಾಯ್ದೆಗಳನ್ನು ಜಾರಿಗೆ ತಂದರು. ಈಗಿನ ನರೇಂದ್ರ ಮೋದಿ ಅವರ ಸರ್ಕಾರ ಆರ್.ಎಸ್.ಎಸ್ ನ ಹಿಡನ್ ಅಜೆಂಡಾ ಇರುವ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತಂದಿದೆ ಎಂದು ಹೇಳಿದರು.
ನಾನು ಮುಖ್ಯಮಂತ್ರಿಯಾಗಿದ್ದಾಗ ಬಡವರು, ದಲಿತರು, ರೈತರು, ಅಲ್ಪಸಂಖ್ಯಾತರು ಮುಂತಾದ ಜನರಿಗೆ ನೆರವಾಗಲೆಂದು ಅನೇಕ ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದೆ, ಈಗಿನ ಬಿಜೆಪಿ ಸರ್ಕಾರ ಒಂದೊಂದಾಗಿ ಅವುಗಳನ್ನು ನಿಲ್ಲಿಸುತ್ತಿದೆ. ಅನ್ನಭಾಗ್ಯ ಯೋಜನೆ ಅಡಿ ನೀಡುತ್ತಿದ್ದ ಅಕ್ಕಿ ಪ್ರಮಾಣವನ್ನು 7 ಕೆ.ಜಿ ಇಂದ 5 ಕೆ.ಜಿ ಗೆ ಇಳಿಕೆ ಮಾಡಿದೆ. ಇದು ಯಾರಪ್ಪನ ಮನೆ ಹಣವಲ್ಲ, ಜನರ ತೆರಿಗೆ ದುಡ್ಡು, ಅದನ್ನು ಜನರಿಗೆ ಖರ್ಚು ಮಾಡಲು ಬಂದಿರುವುದೇನು? ಇಂದಿರಾ ಕ್ಯಾಂಟೀನ್, ಶೂಭಾಗ್ಯ, ಅನ್ನಭಾಗ್ಯ, ಕೃಷಿ ಭಾಗ್ಯ, ಶಾದಿ ಭಾಗ್ಯ ಇಂದು ಇವೆಯಾ? ಅನ್ನಭಾಗ್ಯ ಯೋಜನೆ ಕೇಂದ್ರ ಸರ್ಕಾರದ ಕಾರ್ಯಕ್ರಮ ಎನ್ನುವ ಬಸವರಾಜ ಬೊಮ್ಮಾಯಿ ಅವರಿಗೆ ಆಹಾರ ಭದ್ರತಾ ಕಾಯ್ದೆ ಜಾರಿಗೆ ತಂದಿದ್ದು ನರೇಂದ್ರ ಮೋದಿ ಅವರಲ್ಲ ಮನಮೋಹನ್ ಸಿಂಗ್ ಅವರ ಸರ್ಕಾರ ಎಂಬುದನ್ನು ನೆನಪಿಸಲು ಬಯಸುತ್ತೇನೆ. ಅನ್ನಭಾಗ್ಯ ಕೇಂದ್ರ ಸರ್ಕಾರದ ಯೋಜನೆಯಾಗಿದ್ದರೆ ಬಿಜೆಪಿ ಆಡಳಿತದಲ್ಲಿರುವ ಉತ್ತರ ಪ್ರದೇಶ, ಗುಜರಾತ್, ಮಧ್ಯಪ್ರದೇಶ ರಾಜ್ಯಗಳಲ್ಲಿ ಯೋಜನೆ ಯಾಕೆ ಇಲ್ಲ? ಎಂದು ಪ್ರಶ್ನಿಸಿದರು.
ಬಿಜೆಪಿ ಅಧಿಕಾರಕ್ಕೆ ಬಂದಿದ್ದು ಕೂಡ ಜನರ ಆಶೀರ್ವಾದ ಪಡೆದುಕೊಂಡಲ್ಲ. ಆಪರೇಷನ್ ಕಮಲ ಎಂಬ ಅನೈತಿಕ ದಾರಿಯಿಂದ. ಈ ಸರ್ಕಾರವನ್ನು 40% ಕಮಿಷನ್ ಸರ್ಕಾರ ಎಂದು ವಿಧಾನಸೌಧದ ಗೋಡೆಗಳು ಹೇಳುತ್ತವೆ, ರಾಜ್ಯದ ಜನ ಹೇಳುತ್ತಾರೆ, ಗುತ್ತಿಗೆದಾರರು ಹೇಳುತ್ತಾರೆ. ವರ್ಗಾವಣೆ, ಬಿಲ್ ಪಾವತಿ, ಬಡ್ತಿ, ನೇಮಕಾತಿ ಹೀಗೆ ಎಲ್ಲಾ ಕಡೆಗಳಲ್ಲಿ ಲಂಚದಿಂದ ತುಂಬಿ ಹೋಗಿದೆ. ಇಂಥ ಸರ್ಕಾರ ಮತ್ತೆ ಬೇಕ? ನಾನು ಮುಖ್ಯಮಂತ್ರಿ ಆಗಿದ್ದಾಗ ವಸಂತ್ ಬಂಗೇರಾ ಅವರು ಕ್ಷೇತ್ರದ ಅಭಿವೃದ್ಧಿಗಾಗಿ 2,000 ಕೋಟಿ ಅನುದಾನವನ್ನು ತಂದಿದ್ದರು. ಈ ಅನುದಾನದಲ್ಲಿ ಸಾಕಷ್ಟು ಜನಪರ ಕಾರ್ಯಗಳನ್ನು ಮಾಡಿದ್ದಾರೆ. ಇವರಿಗಿಂತ ಬಡವರ ಪರವಾದ ಬೇರೆ ರಾಜಕಾರಣಿ ಬೇಕ? ಬಂಗೇರ ಅವರಿಗಿಂತ ಜಾತ್ಯತೀತ ವ್ಯಕ್ತಿ ಇದ್ದಾರ? ಕರಾವಳಿಯಲ್ಲಿ ವಿದ್ಯಾವಂತರ ಪ್ರಮಾಣ ಹೆಚ್ಚಿದೆ ಎಂಬ ಕಾರಣಕ್ಕೆ ಇಲ್ಲಿನ ಕಮಿಷನ್ ಅನ್ನು 50% ಗೆ ಹೆಚ್ಚಿಗೆ ಮಾಡಿದ್ದಾರೆ. ಎಲ್ಲಿಯವರೆಗೆ ಕೋಮುವಾದಿ ಪಕ್ಷ ಅಧಿಕಾರದಲ್ಲಿ ಇರುತ್ತದೆ ಅಲ್ಲಿಯವರೆಗೆ ರಾಜ್ಯ ವಿನಾಶದ ದಿಕ್ಕಿನತ್ತ ಸಾಗಲಿದೆ ಎಂದು ಸಿದ್ದರಾಮಯ್ಯ ಹೇಳಿದರು.