ಐದು ವರ್ಷ ಕಳೆದರೂ ಪತ್ತೆಯಾಗದ ಜೆ.ಎನ್.ಯು ವಿದ್ಯಾರ್ಥಿ ನಜೀಬ್ | ಮುಗಿಲು ಮುಟ್ಟಿದ ತಾಯಿಯ ರೋದನ

Prasthutha|

ಮುಂಬೈ: ಜೆ.ಎನ್.ಯು ವಿದ್ಯಾರ್ಥಿ ನಜೀಬ್ ನಾಪತ್ತೆಯಾಗಿ ಐದು ವರ್ಷಗಳು ಕಳೆದರೂ ಇದುವರೆಗೆ ಅವರ ಬಗ್ಗೆ ಯಾವುದೇ ಸುಳಿವು ದೊರೆಯದಿರುವುದರಿಂದ ಕುಟುಂಬ ಚಿಂತಾಕ್ರಾಂತವಾಗಿದೆ. ಮಗನಿಗಾಗಿ ರೋದಿಸುತ್ತಿರುವ ತಾಯಿ ಫಾತಿಮಾ ನಫೀಸ್ ತನ್ನ ಮಗನ ಬರುವಿಕೆಗಾಗಿ ಎದುರು ನೋಡುತ್ತಿದ್ದಾರೆ.

- Advertisement -

ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿದಂತೆ ಆರೆಸ್ಸೆಸ್ ನ ವಿದ್ಯಾರ್ಥಿ ಘಟಕವಾದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಕಾರ್ಯಕರ್ತರೊಂದಿಗೆ ನಡೆದ ಜಗಳದ ಬಳಿಕ ನಜೀಬ್ ನಾಪತ್ತೆಯಾಗಿದ್ದರು.

ಜೆ.ಎನ್.ಯು ನಲ್ಲಿ ಅಧ್ಯಯನ ನಡೆಸುತ್ತಿದ್ದ ನಜೀಬ್ ರನ್ನು 2016 ರಲ್ಲಿ ಎಬಿವಿಪಿ ಅಪಹರಣ ನಡೆಸಿತ್ತು ಎಂದು ವಿದ್ಯಾರ್ಥಿ ಸಂಪಟನೆಯಾದ ಜೆ.ಎನ್.ಯು.ಎಸ್.ಯು ಆರೋಪಿಸಿದೆ. ಎಬಿವಿಪಿ ಕಾರ್ಯಕರ್ತ ವಿಕ್ರಾಂತ್ ಕುಮಾರ್ ನೊಂದಿಗೆ ನಡೆದ ಜಗಳದ ನಂತರ ನಜೀಬ್ ನಾಪತ್ತೆಯಾಗಿರುವುದು ಪೊಲೀಸ್ ತನಿಖೆಯಿಂದ ಬಹಿರಂಗಗೊಂಡಿತ್ತು. ಈ ನಿಟ್ಟಿನಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದರು.

- Advertisement -

ನಜೀಬ್ ನ ಲ್ಯಾಪ್ ಟಾಪ್ ಮತ್ತು ಫೋನ್ ಅನ್ನು ಪೊಲೀಸರು ಹಾಸ್ಟೆಲ್ ನಿಂದ ವಶಪಡಿಸಿಕೊಂಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ 9 ಮಂದಿಯನ್ನು ಆರೋಪಿಗಳೆಂದು ಗುರುತಿಸಲಾಗಿದ್ದರೂ, ಪೊಲೀಸರು ಸರಿಯಾದ ಮಾರ್ಗದಲ್ಲಿ ತನಿಖೆ ಮುಂದುವರಿಸದ ಕಾರಣ ಪ್ರಕರಣ ಹಳ್ಳ ಹಿಡಿದಿದೆ ಎಂದು ನಜೀಬ್ ತಾಯಿ ಮಾಧ್ಯಮಕ್ಕೆ ತಿಳಿಸಿದ್ದಾರೆ.

ಈ ಮಧ್ಯೆ ನಜೀಬ್ ನನ್ನು ಐಸಿಸಿ ಪರ ಎಂದು ಬಿಂಬಿಸಲು ಶ್ರಮಿಸಿದ ಕೆಲವು ಮಾಧ್ಯಮ ಸಂಸ್ಥೆಗಳ ವಿರುದ್ಧ ಆತನ ತಾಯಿ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದರು. ಮಾತ್ರವಲ್ಲ ಅದೇ ವರ್ಷ ಸಿಬಿಐ ನಜೀಬ್ ನನ್ನು ಪತ್ತೆಹಚ್ಚಲು ಸಾಧ್ಯವಿಲ್ಲ ಎಂಬ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿತ್ತು. ಸಿಬಿಐ ನಡೆಯನ್ನು ಪ್ರಶ್ನಿಸಿ ಆತನ ತಾಯಿ ಫಾತಿಮಾ 2020 ರಲ್ಲಿ ದಾವೆ ಹೂಡಿದ್ದರು.

ಸತತ ಐದು ವರ್ಷಗಳ ಬಳಿಕ ನಜೀಬ್ ನನ್ನು ಪತ್ತೆ ಹಚ್ಚದ್ದನ್ನು ವಿರೋಧಿಸಿ ವಿದ್ಯಾರ್ಥಿ ಸಂಘಟನೆಗಳಾದ ಎಸ್.ಐ.ಒ, BAPSA, ಫೆಟರ್ನಿಟಿ ಮೂವ್ಮೆಂಟ್, ಎಮ್.ಎಸ್.ಎಫ್, ಎನ್.ಎಸ್.ಯು ಸೇರಿದಂತೆ ಹಲವಾರು ಸಂಘಟನೆಗಳು ನಿನ್ನೆ ನಜೀಬ್ ನ ಪತ್ತೆಗೆ ಒತ್ತಾಯಿಸಿದೆ.

Join Whatsapp