ಆಸ್ತಿ ಪಾಲಿಗೆ ಪುತ್ರಿ ಬೇಡಿಕೆ ಇಟ್ಟಾಗ ವರದಕ್ಷಿಣೆ ರೂಪದಲ್ಲಿ ಪಡೆದ ಆಸ್ತಿಯನ್ನೂ ಪರಿಗಣಿಸಬೇಕು: ಕರ್ನಾಟಕ ಹೈಕೋರ್ಟ್

Prasthutha|

ಬೆಂಗಳೂರು: ವಿವಾಹದ ಸಂದರ್ಭದಲ್ಲಿ ಪುತ್ರಿಗೆ ವರದಕ್ಷಿಣೆ ಅಥವಾ ಬೇರೆ ರೀತಿಯಲ್ಲಿ ಆಸ್ತಿ ನೀಡಿದ್ದರೆ, ಆಕೆಯು ಹಿಂದೂ ಉತ್ತರಾಧಿಕಾರ ಕಾಯಿದೆ ಅಡಿ ಅವಿಭಕ್ತ ಕುಟುಂಬದ ಆಸ್ತಿಯಲ್ಲಿ ವಿಭಾಗಕ್ಕೆ ಬೇಡಿಕೆ ಇಟ್ಟರೆ ಮದುವೆಯ ಸಂದರ್ಭದಲ್ಲಿ ನೀಡಿದ್ದ ಆಸ್ತಿಯೂ ವಿಭಾಗಕ್ಕೆ ಒಳಪಡುತ್ತದೆ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

- Advertisement -

ಬೆಂಗಳೂರಿನ ವಿಚಾರಣಾಧೀನ ನ್ಯಾಯಾಲಯದ ಆದೇಶ ಪ್ರಶ್ನಿಸಿ ಹೇಮಲತಾ ಅವರು ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ನೇತೃತ್ವದ ಏಕಸದಸ್ಯ ಪೀಠವು ತೀರ್ಪು ಪ್ರಕಟಿಸಿದೆ. “ಹಿಂದೂ ಉತ್ತರಾಧಿಕಾರ ಕಾಯಿದೆ ಸೆಕ್ಷನ್ 6ರ ಅಡಿ ಫಲಾನುಭವಿಯಾಗಿರುವವರು ಅವಿಭಕ್ತ ಕುಟುಂಬದ ಆಸ್ತಿಗೆ ಸಂಬಂಧಿಸಿದಂತೆ ವಿವಾದ ಇಲ್ಲದ ಸಂದರ್ಭದಲ್ಲಿ ವರದಕ್ಷಿಣೆ ಅಥವಾ ಉಡುಗೊರೆ ಅಥವಾ ಮತ್ತಾವುದೇ ರೂಪದಲ್ಲಿ ಪಡೆದ ಆಸ್ತಿಯ ಬಗ್ಗೆ ಉಲ್ಲೇಖಿಸದೇ ವಿಭಾಗ (ಪಾಲು) ನಿರೀಕ್ಷಿಸಲಾಗದು. ವಿವಾದ ಇಲ್ಲದ ಸಂದರ್ಭದಲ್ಲಿ ಅವಿಭಕ್ತ ಕುಟುಂಬದ ಭಾಗವಾಗಿದ್ದ ಆಸ್ತಿಯನ್ನು ಫಿರ್ಯಾದುದಾರರು ಪಡೆದಿರುವುದರಿಂದ ಅದೂ ಆಸ್ತಿ ವಿಭಾಗ ಪ್ರಕರಣದ ಭಾಗವಾಗುತ್ತದೆ. ಅದನ್ನು ವಿಭಾಗ ಮಾಡಬೇಕಾಗುತ್ತದೆ” ಎಂದು ಪೀಠವು ತೀರ್ಪಿನಲ್ಲಿ ಹೇಳಿದೆ. “ವಿಭಾಗಕ್ಕೆ ನಿರ್ದಿಷ್ಟ ಆಸ್ತಿಗಳನ್ನೂ ಸೇರಿಸಬೇಕು ಎಂದು ಕೇಳುತ್ತಿರುವುದನ್ನು ಸ್ವತಂತ್ರವಾಗಿ ಖರೀದಿಸಲಾಗಿದ್ದು, ಅವುಗಳು ವಿಭಾಗಕ್ಕೆ ಒಳಪಡುವುದಿಲ್ಲ ಎಂದು ಅರ್ಜಿದಾರರ ವಕೀಲರು ವಾದಿಸಿದ್ದಾರೆ.

ಇದನ್ನು ವಿಚಾರಣಾಧೀನ ನ್ಯಾಯಾಲಯ ಅಗತ್ಯ ದಾಖಲೆಗಳನ್ನು ಪರಿಶೀಲಿಸಿ ನಿರ್ಧರಿಸಬೇಕಿದೆ. ಹೀಗಾಗಿ, ಆಕ್ಷೇಪಾರ್ಹವಾದ ಆಸ್ತಿಯು ಅವಿಭಕ್ತ ಕುಟುಂಬಕ್ಕೆ ಸೇರಿದ್ದೋ, ಇಲ್ಲವೋ ಎಂಬುದನ್ನು ವಿಚಾರಣೆಯ ಸಂದರ್ಭದಲ್ಲಿ ಪಕ್ಷಕಾರರು ಸಾಬೀತುಪಡಿಸಬೇಕಿದೆ. ಅದು ಅವಿಭಕ್ತ ಕುಟುಂಬಕ್ಕೆ ಸೇರಿದ್ದರೆ ಅದನ್ನು ವಿಭಾಗ ಮಾಡಬೇಕಾಗುತ್ತದೆ. ಸ್ವತಂತ್ರವಾಗಿ ಖರೀದಿಸಿದ್ದರೆ ಅದು ವಿಭಾಗಕ್ಕೆ ಒಳಪಡುವುದಿಲ್ಲ” ಎಂದು ಪೀಠವು ಸ್ಪಷ್ಟಪಡಿಸಿದೆ. ಪ್ರಕರಣದ ಹಿನ್ನೆಲೆ: ಹೇಮಲತಾ ಅವರು ಹಿಂದೂ ಉತ್ತರಾಧಿಕಾರ ಕಾಯಿದೆ ಸೆಕ್ಷನ್ 6ರ ಅಡಿ ತಂದೆ ವೆಂಕಟೇಶ್ ಅವರ ಅವಿಭಕ್ತ ಕುಟುಂಬದ ಆಸ್ತಿಯಲ್ಲಿ ವಿಭಾಗ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದು, ಸದರಿ ವಿವಾದವು ವಿಚಾರಣೆಗೆ ಒಳಪಟ್ಟಿದೆ ಹೇಮಲತಾ ಅವರ ಸಹೋದರ ಸೋಮಶೇಖರ್ ಎಂಬವರು ಎರಡು ನಿರ್ದಿಷ್ಟ ಆಸ್ತಿಗಳನ್ನು ವಿಭಾಗಕ್ಕೆ ಪರಿಗಣಿಸಬೇಕು ಎಂದು ವಿಚಾರಣಾಧೀನ ನ್ಯಾಯಾಲಯಕ್ಕೆ ಮಧ್ಯಪ್ರವೇಶ ಮನವಿ ಸಲ್ಲಿಸಿದ್ದರು. ವಿವಾಹದ ಸಂದರ್ಭದಲ್ಲಿ ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಪಲ್ಲೇರಾಯನಹಳ್ಳಿಯಲ್ಲಿ ಒಂದು ಎಕರೆ ಭೂಮಿಯನ್ನು ಹೇಮಲತಾ ಅವರ ಮಾವ ಚೆನ್ನಯ್ಯ ಅವರ ಹೆಸರಿಗೆ ತಂದೆ ವೆಂಕಟೇಶ್ ಅವರು ಸಾಮಾನ್ಯ ಕ್ರಯ ಪತ್ರ (ನಾಮಿನಲ್ ಸೇಲ್ ಡೀಡ್) ಮಾಡಿಕೊಟ್ಟಿದ್ದಾರೆ. ಇನ್ನೊಂದು ಆಸ್ತಿಯನ್ನು ತಂದ ವೆಂಕಟೇಶ್ ಅವರು ತಮ್ಮ ವೈಯಕ್ತಿಕ ಹಣದಿಂದ ಖರೀದಿಸಿದ್ದು, ವಿವಾಹದ ಸಂದರ್ಭದಲ್ಲಿ ಅದರ ಅಧಿಕಾರ ಪತ್ರ (ಪವಾರ್ ಆಫ್ ಅಟಾರ್ನಿ) ಅನ್ನು ಹೇಮಲತಾ ಮತ್ತು ಅವರ ಪತಿ ಜಯರಾಮಯ್ಯ ಅವರಿಗೆ ಮಾಡಿದ್ದಾರೆ. 2006ರ ಮೇನಲ್ಲಿ ಅದರ ಕ್ರಯ ಪತ್ರವನ್ನು ಮಾಡಿಕೊಡಲಾಗಿದೆ. ಹೀಗಾಗಿ, ಅವುಗಳು ಸಹ ಕೌಟುಂಬಿಕ ಆಸ್ತಿಗಳಾಗಿವೆ ಎಂದು ವಾದಿಸಲಾಗಿತ್ತು. ಇದಕ್ಕೆ ಅರ್ಜಿದಾರರು ಆಕ್ಷೇಪಿಸಿದ್ದರು. ಪಕ್ಷಕಾರರ ವಾದ ಆಲಿಸಿದ್ದ ವಿಚಾರಣಾಧೀನ ನ್ಯಾಯಾಲಯವು ಸೋಮಶೇಖರ್ ವಾದವನ್ನು ಪುರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಹೇಮಲತಾ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.



Join Whatsapp