ಮಹಿಳಾ ಮೀಸಲಾತಿ ಮಸೂದೆ ಕಾಂಗ್ರೆಸ್ ಮಂಡನೆ ಮಾಡಿದಾಗ ವಿರೋಧ ಪಕ್ಷದಲ್ಲಿದ್ದ ಬಿಜೆಪಿ ವಿರೋಧಿಸಿತ್ತು: ವಿ ಎಸ್ ಉಗ್ರಪ್ಪ ವಾಗ್ದಾಳಿ

Prasthutha|

ಹೊಸದಿಲ್ಲಿ: ಮಹಿಳಾ ಮೀಸಲಾತಿ ಮಸೂದೆಯನ್ನು ಮೊದಲು ಕಾಂಗ್ರೆಸ್‌ ಮಂಡನೆ ಮಾಡಿದಾಗ ವಿರೋಧ ಪಕ್ಷದಲ್ಲಿ ಇದ್ದಿದ್ದು ಬಿಜೆಪಿ. ಅಂದು ಏಕೆ ಬಿಜೆಪಿಯವರು ಬೆಂಬಲ ನೀಡಲಿಲ್ಲ? ನೀಡಿದ್ದರೆ ಇಷ್ಟೊತ್ತಿಗೆ ಮೀಸಲಾತಿ ಜಾರಿಗೆ ಬಂದಿರುತ್ತಿತ್ತು. ಇದು ಕೇವಲ ಕಣ್ಣೊರೆಸುವ ತಂತ್ರ, ಈ ಮೀಸಲಾತಿ ಯೋಜನೆ ತಕ್ಷಣ ಜಾರಿಗೆ ಬರುವುದೇ ಮೋದಿಯವರೇ” ಎಂದು ಮಾಜಿ ಸಂಸದ ವಿ ಎಸ್ ಉಗ್ರಪ್ಪ ಪ್ರಶ್ನಿಸಿದ್ದಾರೆ.

- Advertisement -

ಕೆಪಿಸಿಸಿ ಕಚೇರಿಯಲ್ಲಿ ಗುರುವಾರ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಇಡ್ಬ್ಯೂಎಸ್ ಮೀಸಲಾತಿ ಜಾರಿಗೆ ತಂದಾಗ ಈಗ ಹಾಕಿರುವ ನಿಯಮಗಳನ್ನು ಅದರಲ್ಲಿ ಹಾಕಿರಲಿಲ್ಲ. ಆರ್ಟಿಕಲ್ 334 ಎ ನಲ್ಲಿ ಈ ಮೀಸಲಾತಿ ಜಾರಿಗೆ ಬಂದು 15 ವರ್ಷ ಮಾತ್ರ ಜಾರಿಯಲ್ಲಿರುತ್ತದೆ ಎಂದು ಹೇಳಲಾಗಿದೆ. ಇದು ಜಾರಿಗೆ ಬರುವುದು ಯಾವಾಗ? 2021 ರಲ್ಲಿ ಜನಗಣತಿ ನಡೆದೆ ಇಲ್ಲ, ಕೊರೋನಾ ನೆಪ ಮಾಡಿಕೊಂಡು ಜನಗಣತಿ ನಡೆಸದೆ ಬಿಜೆಪಿ ಮೋಸ ಮಾಡುತ್ತಿದೆ” ಎಂದು ಟೀಕಾಪ್ರಹಾರ ನಡೆಸಿದರು.

“ಅರ್ಟಿಕಲ್ 82 ಕ್ಕೆ ತಿದ್ದುಪಡಿ ತಂದು 2026ರ ತನಕ ಯಾವುದೇ ಸಂಸತ್- ವಿಧಾನಸಭಾ ಕ್ಷೇತ್ರಗಳು ಮರು ವಿಂಗಡಣೆ ಮಾಡುವಂತಿಲ್ಲ ಎಂದು ತಿದ್ದುಪಡಿ ತಂದಿದ್ದಾರೆ ಬಿಜೆಪಿಯವರು. ಹಾಗಾದರೆ ಮಹಿಳಾ ಮೀಸಲಾತಿ ಹೇಗೆ ಜಾರಿಗೆ ಬರಲಿದೆ. ಇದು ಕೇವಲ ಮೋಸದ ಸಂಗತಿ” ಎಂದು ಕಿಡಿಕಾರಿದರು.

- Advertisement -

ಮೀಸಲಾತಿ ನೀಡುವ ಉದ್ದೇಶ ಮೋದಿಗಿಲ್ಲ

“2031 ಕ್ಕೆ ಜನಗಣತಿ ಪ್ರಾರಂಭ ಮಾಡಿದರೆ ಅದು ಮುಗಿಯಲು 2035 ರವರೆಗೆ ಕಾಯಬೇಕು. ಆದರೆ 15 ವರ್ಷಕ್ಕೆ ಮಾತ್ರ ಮಹಿಳಾ ಮೀಸಲಾತಿ ಜಾರಿಯಲ್ಲಿ ಇರುವುದು ಎಂದು ಹೇಳಲಾಗಿದೆ. ಹಾಗಾದರೆ ಯಾವ ಮಹಿಳೆಯರಿಗೆ ಇದರ ಉಪಯೋಗ ಸಿಗುತ್ತದೆ. ಮಹಿಳೆಯರ ಮೂಗಿಗೆ ತುಪ್ಪ ಹಚ್ಚುವ ಕೆಲಸ ಮಾಡಿದ್ದಾರೆ ಹೊರತು, ಪ್ರಾಮಾಣಿಕವಾಗಿ ಮೀಸಲಾತಿ ನೀಡುವ ಉದ್ದೇಶ ಮೋದಿ ಅವರಿಗೆ ಹಾಗೂ ಬಿಜೆಪಿಯವರಿಗೆ ಇಲ್ಲ” ಎಂದು ದೂರಿದರು.

“ಎಸ್ಸಿ- ಎಸ್ಟಿ ಹಾಗೂ ಓಬಿಸಿಗಳಿಗೆ ಒಳಮೀಸಲಾತಿಯನ್ನು ನೂತನ ಮಹಿಳಾ ಮಸೂದೆಯಲ್ಲಿ ನೀಡಬೇಕು. 15 ವರ್ಷದಲ್ಲಿ ನಾವೇ ಇರುವುದಿಲ್ಲ. ಆಗ ಏನು ಬೇಕಾದರೂ ಆಗಲಿ ಎನ್ನುವ ಧೋರಣೆ ಬಿಜೆಪಿಯದ್ದು. ಮೀಸಲಾತಿಯನ್ನು ಕೂಡಲೇ ಜಾರಿಗೆ ತರುವ ಹೋರಾಟವನ್ನು ಈ ದೇಶದ ಮಹಿಳೆಯರು ಮಾಡಬೇಕು, ಇದಕ್ಕೆ ಕಾಂಗ್ರೆಸ್ ಪಕ್ಷ ಬೆಂಬಲ ನೀಡುತ್ತದೆ” ಎಂದು ತಿಳಿಸಿದರು.

ಮೋದಿ ಮಹಾನ್ ಕಲಾಕಾರ

“ಮೋದಿಯವರು ಮಹಾನ್ ಕಲಾಕಾರ, ಮೀಸಲಾತಿ ನಾಟಕವಾಡಿದರೆ ಮಹಿಳೆಯರು ನಂಬುತ್ತಾರೆ ಎಂದುಕೊಂಡಿದ್ದಾರೆ. ನೀವು ಬೆಲೆ ಏರಿಕೆ, ನಿರುದ್ಯೋಗವನ್ನು ಮುಚ್ಚಿ ಹಾಕಲು ಈ ನಾಟಕ. ನೀವು ಕೂಡಲೇ ಮೀಸಲಾತಿ ನೀಡದಿದ್ದರೆ ಈ ದೇಶದ ಮಹಿಳೆಯರಿಗೆ ಮೋಸ ಮಾಡಿದಂತೆ. ಮೀಸಲಾತಿ ಮೂಲಕ ಗೌರವ ತರುವಂತಹ ಕೆಲಸ ಬಿಜೆಪಿ ಮಾಡುತ್ತಿಲ್ಲ” ಎಂದರು.

“ಮಹಿಳಾ ಮೀಸಲಾತಿ ಕಾಂಗ್ರೆಸ್ ಪಕ್ಷದ ಕೂಸು, ಅದಕ್ಕೆ ಒಂದಷ್ಟು ಓರೆಕೋರೆಗಳು ಇದ್ದರು ಮುಂದಕ್ಕೆ ಸರಿ ಮಾಡಿಕೊಳ್ಳಬಹುದು ಎಂದು ಒಪ್ಪಿಗೆ ನೀಡಿದೆವು. 9 ವರ್ಷಗಳು ಸುಮ್ಮನೆ ಕುಳಿತುಕೊಂಡು ಸೋಲು ಕಟ್ಟಿಟ್ಟ ಬುತ್ತಿ ಎಂದು ತಿಳಿದು ಮೋದಿಯವರು ಈಗ ಇರುವ ಕ್ಷೇತ್ರಗಳಲ್ಲೆ ಮಹಿಳಾ ಜನಸಂಖ್ಯೆ ಮತ್ತು ಎಸ್ಸಿ- ಎಸ್ಟಿ ಮೀಸಲು ಕ್ಷೇತ್ರಗಳಲ್ಲಿ ತಲಾ ಎರಡು ಸೀಟುಗಳನ್ನು ನೀಡಲಿ. 1989ರಲ್ಲಿ ರಾಜೀವ್ ಗಾಂಧಿ ಹಾಗೂ ಪಿ.ವಿ.ನರಸಿಂಹರಾವ್ ಅವರ ಕಾಲದಿಂದ ಚರ್ಚೆಯಲ್ಲಿ ಇರುವ ಸಂಗತಿ. ಸಂವಿಧಾನದ ಅರ್ಟಿಕಲ್ 243 ಕ್ಕೆ ತಿದ್ದುಪಡಿ ತರುವುದರ ಮೂಲಕ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ಕೊಟ್ಟಿದ್ದು ಕಾಂಗ್ರೆಸ್ ಪಕ್ಷ. ನಂತರದ ದಿನಗಳಲ್ಲಿ ಸಂಸತ್ತು ಮತ್ತು ವಿಧಾನಮಂಡಲದಲ್ಲಿ ಮಹಿಳಾ ಮೀಸಲಾತಿ ಇರಬೇಕು ಎನ್ನುವ ಚರ್ಚೆ ಮುನ್ನಲೆಗೆ ಬಂದಿತು. 1996ರಲ್ಲಿ ವಿಧೇಯಕ ಮಂಡನೆ ಮಾಡಲಾಯಿತು. ದೇವೇಗೌಡರು ಹಾಗೂ ಮನಮೋಹನ್ ಸಿಂಗ್ ಅವರು ಮಹಿಳಾ ಮೀಸಲಾತಿ ಪರವಾಗಿ ಕೆಲಸ ಮಾಡಿದ ಪ್ರಧಾನಿಗಳು” ಎಂದರು.

ಪ್ರಕಾಶ್ ರಾಥೋಡ್ ಟೀಕೆ

“ಮಹಿಳಾ ಮೀಸಲಾತಿ ಮಸೂದೆ ತರಾತುರಿಯಲ್ಲಿ ತಂದಂತಹ ಬಿಲ್. ಸಾರ್ವಜನಿಕರ ಅಭಿಪ್ರಾಯ ತೆಗೆದುಕೊಂಡಿಲ್ಲ, ಸರಿಯಾದ ಚರ್ಚೆ ಮಾಡಿಲ್ಲ. ಮೋದಿಯವರ ಜುಮ್ಲಾಗಳಿಗೆ ಇದು ಹೊಸ ಸೇರ್ಪಡೆ, 20 ವರ್ಷಗಳಾದರೂ ಈ ಬಿಲ್ ಜಾರಿಗೆ ತರಲು ಆಗುವುದಿಲ್ಲ. ಮಹಿಳೆಯರಿಗೆ ಬಿಜೆಪಿ ಸರ್ಕಾರ ಮೋಸ ಮಾಡಿದೆ” ಎಂದು ಪ್ರಕಾಶ್‌ ರಾಥೋಡ್‌ ಹೇಳಿದರು.

“ಮಹಿಳೆಯರು ಸಹ ಇದನ್ನು ವಿರೋಧಿಸುತ್ತಾರೆ. ರಾಹುಲ್ ಗಾಂಧಿ ಅವರು ಹೇಳಿದ್ದಾರೆ, ಈ ಮೀಸಲಾತಿ ಬಿಲ್ ಅಪೂರ್ಣವಾದ್ದು ಏಕೆಂದರೆ ಹಿಂದುಳಿದ ವರ್ಗದವರಿಗೆ ಎಷ್ಟು ಮೀಸಲಾತಿ ನೀಡುತ್ತೇವೆ ಎನ್ನುವ ಸ್ಪಷ್ಟತೆ ಇಲ್ಲ. ಪ್ರಧಾನಿ ಕಚೇರಿಯಲ್ಲಿ ಕೇವಲ 3 ಮಂದಿ ಓಬಿಸಿ ಅಧಿಕಾರಿಗಳು ಮಾತ್ರ ಇದ್ದಾರೆ” ಎಂದರು.



Join Whatsapp