ದುಬೈ: ಐಸಿಸಿ ಟಿ-20 ವಿಶ್ವಕಪ್ ಟೂರ್ನಿಯ ನಿರ್ಣಾಯಕ ಪಂದ್ಯದಲ್ಲಿ ನ್ಯೂಜಿಲೆಂಡ್ ಬುಧವಾರ ಸ್ಕಾಟ್ಲೆಂಡ್ ತಂಡದ ಎದುರು 16 ರನ್’ಗಳ ರೋಚಕ ಜಯ ದಾಖಲಿಸಿತ್ತು. ಆರಂಭಿಕ ಅನುಭವಿ ಬ್ಯಾಟರ್ ಮಾರ್ಟಿನ್ ಗಪ್ಟಿಲ್ ಗಳಿಸಿದ 93 ರನ್ ನ್ಯೂಜಿಲೆಂಡ್ ಗೆಲುವಿನಲ್ಲಿ ಪ್ರಮುಖ ಪಾತ್ತ ವಹಿಸಿತ್ತು.
90 ನಿಮಿಷಗಳ ತನ್ನ ಅಮೋಘ ಇನ್ನಿಂಗ್ಸ್’ ವೇಳೆ ಗಪ್ಟಿಲ್ ತೀವ್ರ ಬಳಲಿದಂತೆ ಕಂಡು ಬಂದಿದ್ದರು. ಈ ಕುರಿತು ಟಿವಿ ನ್ಯೂಜಿಲೆಂಡ್ ಬ್ರೇಕ್’ಫಾಸ್ಟ್ ಹವರ್ಸ್ ಕಾರ್ಯಕ್ರಮದಲ್ಲಿ ಮಾತನಾಡಿರುವ ಗಪ್ಟಿಲ್ ದುಬೈನ 33 ಡಿಗ್ರಿ ವಾತಾವರಣಕ್ಕೆ ಹೊಂದಿಕೊಳ್ಳುವುದು ಸುಲಭದ ಮಾತಲ್ಲ ಎಂದಿದ್ದಾರೆ.
“ಇನ್ನಿಂಗ್ಸ್ ಆರಂಭಿಸಿದ ಸಮಯದಿಂದ ಪೆವಿಲಿಯನ್’ಗೆ ಹಿಂತಿರುಗಿದ ವೇಳೆಯಲ್ಲಿ ನಾನು ಹೆಚ್ಚುಕಡಿಮೆ 4.4 ಕೆಜಿ ಭಾರವನ್ನು ಕಳೆದುಕೊಂಡಿದ್ದೆ. ಕೂಡಲೇ ಜಲೀಕರಣ ಪ್ರಕ್ರಿಯೆಯನ್ನು ಪ್ರಾರಂಭಿಸಬೇಕಾಯಿತು” ಎಂದು ನ್ಯೂಜಿಲೆಂಡ್ ಟಿವಿಗೆ ನೀಡಿದ್ದ ಸಂದರ್ಶನದಲ್ಲಿ ಗಪ್ಟಿಲ್ ಹೇಳಿದ್ದಾರೆ.
ಗಪ್ಟಿಲ್ ಅಮೋಘ ಇನ್ನಿಂಗ್ಸ್‌ನ ನೆರವಿನಿಂದ ನ್ಯೂಜಿಲೆಂಡ್ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟದಲ್ಲಿ 172 ರನ್’ಗಳಿಸಿತ್ತು. ಸವಾಲಿನ ಮೊತ್ತವನ್ನು ಬೆನ್ನಟ್ಟುವ ವೇಳೆ ಗೆಲುವಿನ ಭರವಸೆ ಮೂಡಿಸಿದ್ದ ಸ್ಕಾಟ್ಲೆಂಡ್, ಕೊನೆಯವರೆಗೂ ಹೋರಾಟ ನಡೆಸಿತಾದರೂ 5 ವಿಕೆಟ್ ನಷ್ಟದಲ್ಲಿ 156 ರನ್’ಗಳಿಸಲಷ್ಟೇ ಶಕ್ತವಾಯಿತು. ಆ ಮೂಲಕ ನ್ಯೂಜಿಲೆಂಡ್ 16 ರನ್’ಗಳ ರೋಚಕ ಗೆಲುವು ಸಾಧಿಸಿತ್ತು.