ಪಿಎಸ್‌ಐ ಪುತ್ರನಿಂದ ವ್ಹೀಲಿಂಗ್‌: ವೃದ್ಧ ಮೃತ್ಯು

Prasthutha|

ಮೈಸೂರು: ನಂಜನ ಗೂಡಿನ ಸಂಚಾರ ಠಾಣೆಯ ಪಿಎಸ್‌ಐ ಆಗಿದ್ದ ಯಾಸ್ಮಿನ್‌ ತಾಜ್‌ ಅವರ ಪುತ್ರ ಸಯ್ಯದ್‌ ಐಮಾನ್‌ ಬೈಕ್‌ ವ್ಹೀಲಿಂಗ್‌ ಮಾಡುತ್ತಿದ್ದಾಗ ಪಾದಚಾರಿಗೆ ಢಿಕ್ಕಿ ಹೊಡೆದು ಅವರು ಸಾವಿಗೀಡಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ಆಗ್ರಹದ ಮೇರೆಗೆ ಯಾಸ್ಮಿನ್‌ ತಾಜ್‌ ಅವರನ್ನು ಮೈಸೂರಿನ ಜಿಲ್ಲಾ ಅಪರಾಧ ದಾಖಲೆಗಳ ವಿಭಾಗಕ್ಕೆ ವರ್ಗಾಯಿಸಲಾಗಿದೆ.

- Advertisement -

ಮೃತರನ್ನು ದನಗಾಹಿ ರಂಗಸ್ವಾಮಿ ಎಂದು ಗುರುತಿಸಲಾಗಿದೆ. ಶವವನ್ನು ರವಿವಾರ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ನೀಡುವ ವೇಳೆ ಗ್ರಾಮಸ್ಥರು ಐಮನ್‌ ತಾಯಿ, ಪಿಎಸ್‌ಐ ಯಾಸ್ಮಿನ್‌ ತಾಜ್‌ ಅವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.

ತಾಯಿ ಕುಮ್ಮಕ್ಕಿನಿಂದ ಪುತ್ರ ಪದೇ ಪದೆ ವ್ಹೀಲಿಂಗ್‌ ಮಾಡಿ ಜನರ ಜೀವಕ್ಕೆ ಸಂಚಕಾರವಾಗಿದ್ದಾನೆ. ನಾವು ಯಾವುದೇ ಕಾರಣಕ್ಕೂ ಶವ ತೆಗೆದುಕೊಂಡು ಹೋಗುವುದಿಲ್ಲ. ಪಿಎಸ್‌ಐ ಯಾಸ್ಮಿನ್‌ ತಾಜ್‌ರನ್ನು ಅಮಾನತು ಮಾಡಿ, ಬಂಧಿಸಬೇಕು ಎಂದು ಆಗ್ರಹಿಸಿದರು.

- Advertisement -

ಈ ವೇಳೆ ಡಿವೈಎಸ್ಪಿ ಗೋವಿಂದ ರಾಜು ಪ್ರತಿಭಟನಕಾರರ ಮನವೊಲಿಸಲು ಯತ್ನಿಸಿದರು. ನೀವು ಕೊಟ್ಟ ದೂರಿನ ಅನುಸಾರವೇ ಎಫ್ಐಆರ್‌ ದಾಖಲಿಸಿದ್ದೇವೆ. ಜತೆಗೆ ಆತನ ತಾಯಿ ಯಾಸ್ಮಿನ್‌ ತಾಜ್‌ ಅವರನ್ನು ವರ್ಗಾವಣೆ ಮಾಡಲಾಗಿದ್ದು, ವರದಿ ಪಡೆದು ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.ಬಳಿಕ ಪ್ರತಿಭಟನಕಾರರು ಪ್ರತಿಭಟನೆಯನ್ನು ಹಿಂಪಡೆದರು.