ಒಂದೇ ತಿಂಗಳಲ್ಲಿ ಎರಡು ದಶಲಕ್ಷ ಭಾರತೀಯರ ಖಾತೆಗಳನ್ನು ನಿಷೇಧಿಸಿದ ವಾಟ್ಸಾಪ್…!

Prasthutha|

ನವದೆಹಲಿ: 2021ರ ಹೊಸ ಐಟಿ ನಿಯಮಗಳ ಅನುಸಾರ ಅಕ್ಟೋಬರ್ ತಿಂಗಳಿನಲ್ಲಿ 2 ಮಿಲಿಯನ್’ಗೂ ಅಧಿಕ ಭಾರತೀಯರ ವಾಟ್ಸಾಪ್ ಖಾತೆಗಳನ್ನು ನಿಷೇಧಿಸಲಾಗಿದೆ ಎಂದು ವಾಟ್ಸಾಪ್’ನ್ನು ನಿಯಂತ್ರಿಸುತ್ತಿರುವ ಮೆಟಾ ಕಂಪನಿ ಹೇಳಿದೆ.

- Advertisement -

ವಾಟ್ಸಾಪ್ ಸಂಬಂಧ 500 ಕುಂದು ಕೊರತೆಗಳ ದೂರನ್ನು ಕಂಪನಿಯು ಸ್ವೀಕರಿಸಿದ್ದು, ಇದರಲ್ಲಿ 18 ದೂರುಗಳಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದು ಕಂಪನಿಯು ಹೇಳಿದೆ.

ಫೇಸ್’ಬುಕ್, ವಾಟ್ಸಾಪ್ ಹಾಗೂ ಇನ್ಸ್ಟಾಗ್ರಾಮ್’ಅನ್ನು ಒಳಗೊಂಡ ಅಪ್ಲಿಕೇಶನ್’ಗಳ ಮಾತೃ ಸಂಸ್ಥೆಯಾದ ಮೆಟಾ, ಬಳಕೆದಾರರ ಡೇಟಾ ಗೌಪ್ಯತೆಯ ಬಗ್ಗೆ ತೀವ್ರ ಪರಿಶೀಲನೆಯನ್ನು ಎದುರಿಸುತ್ತಿದೆ. ಹೀಗಾಗಿ ಈ ಮೂರು ಪ್ರಮುಖ ಅಪ್ಲಿಕೇಶನ್’ಗಳಲ್ಲಿದ್ದ 21.8 ದಶಲಕ್ಷಕ್ಕೂ ಹೆಚ್ಚು ಆಕ್ಷೇಪಾರ್ಹ ವಿಷಯಗಳನ್ನು ತೆಗೆದುಹಾಕಿರುವುದಾಗಿ ಕಂಪನಿಯ ವಕ್ತಾರರು ಹೇಳಿದ್ದಾರೆ.

- Advertisement -

ಮೇ ತಿಂಗಳಲ್ಲಿ ಜಾರಿಗೆ ಬಂದ ಹೊಸ ಐಟಿ ನಿಯಮಗಳ ಪ್ರಕಾರ 5 ದಶಲಕ್ಷಕ್ಕೂ ಹೆಚ್ಚು ಬಳಕೆದಾರರನ್ನು ಹೊಂದಿರುವ ದೊಡ್ಡ ಡಿಜಿಟಲ್ ವೇದಿಕೆಗಳು, ತಾವು ಸ್ವೀಕರಿಸಿದ ದೂರುಗಳ ವಿವರಗಳು ಮತ್ತು ತೆಗೆದುಕೊಂಡ ಕ್ರಮದ ವರದಿಗಳನ್ನು ಪ್ರತಿ ತಿಂಗಳು ಪ್ರಕಟಿಸಬೇಕಾಗಿದೆ.

‘ಐಟಿ ನಿಯಮ-2021ರ ಅನುಸಾರ, ಅಕ್ಟೋಬರ್ ತಿಂಗಳ ಐದನೇ ಮಾಸಿಕ ವರದಿಯನ್ನು ಪ್ರಕಟಿಸಿದ್ದೇವೆ. ಈ ಬಳಕೆದಾರ-ಸುರಕ್ಷತಾ ವರದಿಯು, ಬಳಕೆದಾರರ ದೂರುಗಳ ವಿವರಗಳು ಮತ್ತು ಕಂಪನಿಯು ತೆಗೆದುಕೊಂಡ ಸಂಬಂಧಿತ ಕ್ರಮದ ವಿವರಗಳನ್ನು ಮತ್ತು ವಾಟ್ಸಾಪ್ ವೇದಿಕೆಯ ದುರುಪಯೋಗವನ್ನು ತಡೆಗಟ್ಟುವ ಕ್ರಮಗಳನ್ನು ಒಳಗೊಂಡಿದೆ’ ಎಂದು ವಾಟ್ಸಪ್ ವಕ್ತಾರರು ತಿಳಿಸಿದ್ದಾರೆ.

Join Whatsapp