ಮಂಗಳೂರು: ಹಿಜಾಬ್ ಪ್ರಕರಣದ ವೇಳೆ ವಿವಾದಕ್ಕೀಡಾಗಿದ್ದ ಕುಂದಾಪುರದ ಸರ್ಕಾರಿ ಜೂನಿಯರ್ ಕಾಲೇಜಿನ ಪ್ರಾಂಶುಪಾಲ ರಾಮಕೃಷ್ಣ ಅವರಿಗೆ ರಾಜ್ಯ ಪ್ರಶಸ್ತಿ ಪ್ರಕಟಿಸಿರುವ ಕಾಂಗ್ರೆಸ್ ಸರಕಾರದ ಹಿಡೆನ್ ಅಜೆಂಡಾ ಏನಿದೆ ಎಂದು ಎಸ್ ಡಿಪಿಐ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ಪ್ರಶ್ನಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಹಿಜಾಬ್ ಧರಿಸಿದ ಕಾರಣಕ್ಕಾಗಿ ಮುಸ್ಲಿಂ ವಿದ್ಯಾರ್ಥಿನಿಯರನ್ನು ಗೇಟ್ ನಿಂದ ಹೊರಗಟ್ಟಿ ತಿಂಗಳುಗಳ ಕಾಲ ಬಿಸಿಲಿನಲ್ಲಿ ನಿಲ್ಲಿಸಿದ, ಮುಸ್ಲಿಂ ದ್ವೇಷವನ್ನೇ ಉಸಿರಾಡುವ ಕುಂದಾಪುರ ಸರಕಾರಿ ಕಾಲೇಜಿನ ಪ್ರಾಂಶುಪಾಲರಾದ ರಾಮಕೃಷ್ಣ ರವರು ಕನಿಷ್ಠ ಪ್ರಾಧ್ಯಾಪಕರಾಗಲೂ ಸಹ ನೈತಿಕತೆ ಇಲ್ಲದ ಕೋಮುವಾದಿ. ಇಂತಹ ವ್ಯಕ್ತಿಗೆ ಕಾಂಗ್ರೆಸ್ ಸರ್ಕಾರವು ರಾಜ್ಯ ಪ್ರಶಸ್ತಿಗೆ ಆಯ್ಕೆ ಮಾಡಿ ಹೀರೋ ಮಾಡಲು ಹೊರಟಿರುವುದರ ಹಿಂದೆ ಸರಕಾರದ ಹಿಡೆನ್ ಅಜೆಂಡಾ ಏನಿದೆ? ಹೊಂದಾಣಿಕೆಯೋ? ಕೊಡುಕೊಳ್ಳುವಿಕೆಯೋ ? ಭಯವೋ ? ಮುಸ್ಲಿಮರ ಬಗ್ಗೆ ತುಚ್ಛ ಭಾವನೆಯೋ ಎಂದು ಪ್ರಶ್ನಿಸಿದ್ದಾರೆ.
ಸೆ.5ರಂದು ‘ಶಿಕ್ಷಕರ ದಿನಾಚರಣೆ’ಯ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಇಬ್ಬರು ಉತ್ತಮ ಪ್ರಾಂಶುಪಾಲರು ಮತ್ತು 8 ಉಪನ್ಯಾಸಕರಿಗೆ ರಾಜ್ಯಮಟ್ಟದ ಪ್ರಶಸ್ತಿಯನ್ನು ಘೋಷಣೆ ಮಾಡಿದೆ.
ಪ್ರಾಂಶುಪಾಲ ಬಿ.ಜಿ ರಾಮಕೃಷ್ಣ ಈ ಹಿಂದೆ ಬಿಜೆಪಿ ಸರಕಾರದ ಅವಧಿಯಲ್ಲಿ ಹಿಜಾಬ್ ವಿವಾದ ತಲೆದೋರಿದಾಗ ವಿವಾದಕ್ಕೀಡಾಗಿದ್ದರು. ಕುಂದಾಪುರದ ಸರ್ಕಾರಿ ಜೂನಿಯರ್ ಕಾಲೇಜಿಗೆ ಹಿಜಾಬ್ ಧರಿಸಿ ಬಂದ ಮುಸ್ಲಿಂ ವಿದ್ಯಾರ್ಥಿನಿಯರನ್ನು ಗೇಟ್ ನಲ್ಲಿಯೇ ತಡೆದು ಪ್ರವೇಶ ನಿರಾಕರಿಸಿದ್ದರು. ವಿದ್ಯಾರ್ಥಿನಿಯರನ್ನು ಗೇಟ್ನಿಂದ ಹೊರಗೆ ಕಳುಹಿಸಿ ಸ್ವತಃ ತಮ್ಮ ಕೈಯಾರೆ ಕಾಲೇಜು ಗೇಟ್ ಬಂದ್ ಮಾಡಿದ್ದರು. ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತು.