ಪಶ್ಚಿಮ ಬಂಗಾಳ : ಮತ ಎಣಿಕೆ ದಿನದಂದು ತಡರಾತ್ರಿ ಹಿಂಸಾಚಾರ; ಐಎಸ್​ಎಫ್ ಕಾರ್ಯಕರ್ತ ಸಾವು

Prasthutha|

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ನಡೆದ ಪಂಚಾಯತ್ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷವು ಜಯಭೇರಿ ಬಾರಿಸಿದೆ. ಜುಲೈ 11 ರಂದು ಮತಎಣಿಕೆ ನಡೆದಿದ್ದು ತಡರಾತ್ರಿ ನಡೆದ ಹಿಂಸಾಚಾರದಲ್ಲಿ ಭಾರತೀಯ ಸೆಕ್ಯುಲರ್ ಫ್ರಂಟ್(ISF)ಕಾರ್ಯಕರ್ತ ಸಾವನ್ನಪ್ಪಿದ್ದು, ಪೊಲೀಸ್​ ಅಧಿಕಾರಿಗೆ ಗಾಯಗಳಾಗಿವೆ.

- Advertisement -

ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣಗಳ ಭಂಗಾರ್ ಪ್ರದೇಶದಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು, ಒಂದು ಬೂತ್‌ನಲ್ಲಿ ಮುನ್ನಡೆ ಸಾಧಿಸಿದ್ದ ಐಎಸ್‌ಎಫ್ ಅಭ್ಯರ್ಥಿಯೊಬ್ಬರು ಎಣಿಕೆಯ ಕೊನೆಯ ಸುತ್ತಿನಲ್ಲಿ ಸೋತ ನಂತರ ಘರ್ಷಣೆಗೆ ಕಾರಣವಾಯಿತು. ಸ್ಥಳದಲ್ಲಿ ಬಾಂಬ್ ಸ್ಫೋಟ ಸಂಭವಿಸಿದ್ದರಿಂದ ಉದ್ವಿಗ್ನತೆ ಹೆಚ್ಚಿತ್ತು.

ಘರ್ಷಣೆಯ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೈಗೆ ಗುಂಡು ತಗುಲಿದೆ. ಗಾಯಗೊಂಡ ಅಧಿಕಾರಿಯನ್ನು ತಕ್ಷಣ ವೈದ್ಯಕೀಯ ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತು.

- Advertisement -

ಜುಲೈ 8 ರಂದು ನಡೆದ ಪಂಚಾಯತ್ ಚುನಾವಣೆಯನ್ನು ಬೆಚ್ಚಿಬೀಳಿಸಿದ ಹಿಂಸಾಚಾರವು ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌ನ 11 ಮಂದಿಯೊಂದಿಗೆ ಕನಿಷ್ಠ 15 ಜನರನ್ನು ಬಲಿ ತೆಗೆದುಕೊಂಡಿತು. ಕಳೆದ ತಿಂಗಳು ಚುನಾವಣೆ ಘೋಷಣೆಯಾದಾಗಿನಿಂದ, ಚುನಾವಣೆಗೆ ಸಂಬಂಧಿಸಿದ ಘಟನೆಗಳಲ್ಲಿ ಸಾವನ್ನಪ್ಪಿದವರ ಸಂಖ್ಯೆ 33ಕ್ಕೆ ಏರಿದೆ.

74 ಸಾವಿರ ಸ್ಥಾನಗಳಿಗೆ ನಡೆದಿದ್ದ ಚುನಾವಣೆಯಲ್ಲಿ ಟಿಎಂಸಿ ಗೆಲುವು ಸಾಧಿಸಿದೆ, ಗ್ರಾಮ ಪಂಚಾಯತ್​ನಲ್ಲಿ 30,391 ಸ್ಥಾನಗಳಲ್ಲಿ, ತಾಲೂಕು ಪಂಚಾಯಿತಿಯ 2155 ಸ್ಥಾನಗಳಲ್ಲಿ, ಜಿಲ್ಲಾ ಪಂಚಾಯಿತಿಯ 88 ಸ್ಥಾನಗಳಲ್ಲಿ ಟಿಎಂಸಿ ಗೆಲುವು ದಾಖಲಿಸಿದೆ.

ಬಿಜೆಪಿಯು ಗ್ರಾಮ ಪಂಚಾಯತ್​ನ 8239 ಸ್ಥಾನಗಳಲ್ಲಿ, ತಾಲೂಕು ಪಂಚಾಯಿತಿಯ 214 ಸ್ಥಾನಗಳಲ್ಲಿ, ಜಿಲ್ಲಾ ಪಂಚಾಯಿತಿಯ 13 ಸ್ಥಾನಗಳಲ್ಲಿ ಬಿಜೆಪಿ ಗೆದ್ದಿದೆ. ಅಖಿಲ ಭಾರತ ಸೆಕ್ಯುಲರ್ ಫ್ರಂಟ್ ಮತ್ತು ಸ್ವತಂತ್ರರು ಸೇರಿದಂತೆ 1732 ಸ್ಥಾನಗಳಲ್ಲಿ ಗೆಲವಿನ ನಗೆ ಬೀರಿದ್ದಾರೆ.

ಪಶ್ಚಿಮ ಬಂಗಾಳದ ಪಂಚಾಯತ್ ಚುನಾವಣೆಯ ಮತ ಎಣಿಕೆಯ ದಿನದಂದು ವಿವಿಧ ಸ್ಥಳಗಳಲ್ಲಿ ಹಿಂಸಾತ್ಮಕ ಘರ್ಷಣೆಗಳು ಮುಂದುವರೆದವು. ಮತ ಎಣಿಕೆಗೂ ಮುನ್ನವೇ ಹಿಂಸಾಚಾರದ ವರದಿಯಾಗಿದೆ. ದಿನ್ಹಾಟಾ, ಹೌರಾ, ಬಸಿರ್ಹತ್, ಕೂಚ್ ಬೆಹಾರ್, ಮಾಲ್ಡಾ, ದಕ್ಷಿಣ 24 ಪರಗಣ ಜಿಲ್ಲೆಗಳ ವಿವಿಧ ಮತ ಎಣಿಕೆ ಕೇಂದ್ರಗಳಲ್ಲಿ ಬಾಂಬ್ ಸ್ಫೋಟಗಳು ಮತ್ತು ಘರ್ಷಣೆಗಳು ನಡೆದಿವೆ ಎಂದು ವರದಿಯಾಗಿದೆ.



Join Whatsapp