ಕೊಲ್ಕತಾ : ಮುಂಬರುವ ವಿಧಾನಸಭೆ ಚುನಾವಣೆಗೆ ಪಶ್ಚಿಮ ಬಂಗಾಳದಲ್ಲಿ ಆಡಳಿತಾರೂಢ ಟಿಎಂಸಿ ಮತ್ತು ಬಿಜೆಪಿ ನಡುವೆ ಜಿದ್ದಾಜಿದ್ದಿಯ ಹೋರಾಟ ನಡೆಯುವ ಎಲ್ಲಾ ಲಕ್ಷಣಗಳು ಕಂಡುಬರುತ್ತಿವೆ. ಚುನಾವಣೆ ಇನ್ನೂ ಘೋಷಣೆಯಾಗದಿದ್ದರೂ, ಈಗಾಗಲೇ ಚುನಾವಣಾ ಪ್ರಚಾರ ಭರ್ಜರಿಯಾಗಿ ಸಾಗಿದೆ. ನಿನ್ನೆ ನಡೆದ ಕಾರ್ಯಕ್ರಮವೊಂದರಲ್ಲಿ ‘ಗೋಲಿ ಮಾರೋ (ಗುಂಡು ಹೊಡೆಯಿರಿ)’ ಎಂಬಂತಹ ಪ್ರಚೋದನಕಾರಿ ಘೋಷಣೆ ಕೂಗಿದ್ದ ಬಿಜೆಪಿ ಕಾರ್ಯಕರ್ತರನ್ನು ಬಂಧಿಸಲಾಗಿದೆ.
ಬುಧವಾರ ಹೂಗ್ಲಿ ಜಿಲ್ಲೆಯಲ್ಲಿ ಟಿಎಂಸಿ ತೊರೆದು ಇತ್ತೀಚೆಗೆ ಬಿಜೆಪಿ ಸೇರಿದ ಸುವೇಂದು ಅಧಿಕಾರಿ ಹಮ್ಮಿಕೊಂಡಿದ್ದ ರೋಡ್ ಶೋನಲ್ಲಿ ‘ದೇಶದ್ರೋಹಿಗಳಿಗೆ ಗುಂಡು ಹೊಡೆಯಿರಿ’ ಎಂಬ ಘೋಷಣೆ ಕೂಗಲಾಗಿತ್ತು. ಘಟನೆಗೆ ಸಂಬಂಧಿಸಿ ಪೊಲೀಸರು ಸ್ವಯಂ ದೂರು ದಾಖಲಿಸಿಕೊಂಡು ಮೂವರು ಬಿಜೆಪಿ ಕಾರ್ಯಕರ್ತನನ್ನು ಬಂಧಿಸಿದ್ದಾರೆ.
ಹೂಗ್ಲಿ ಜಿಲ್ಲೆಯ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಸುರೇಶ್ ಸಾಹು ಸೇರಿದಂತೆ ಮೂವರನ್ನು ಬಂಧಿಸಲಾಗಿದೆ. ಮೂವರನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಸುವೇಂದು ಅಧಿಕಾರಿ ಮೆರವಣಿಗೆ ಮಾಡುತ್ತಿದ್ದ ವೇಳೆ ಟ್ರಕ್ ನಲ್ಲಿದ್ದ ಬಿಜೆಪಿ ಕಾರ್ಯಕರ್ತರು ಈ ಘೋಷಣೆ ಕೂಗಿದ್ದರು.
ಕೆಲವು ದಿನಗಳ ಹಿಂದೆ ಟಿಎಂಸಿ ಸಮಾವೇಶವೊಂದರಲ್ಲಿ ‘ಬಂಗಾಳದ ದ್ರೋಹಿಗಳಿಗೆ ಗುಂಡು ಹೊಡೆಯಿರಿ’ ಎಂದು ಘೋಷಣೆ ಕೂಗಲಾಗಿತ್ತು. ಈ ಕುರಿತ ವೀಡಿಯೊ ವೈರಲ್ ಆಗಿತ್ತು. “ನಾವು ಇದಕ್ಕೆ ಬೆಂಬಲ ನೀಡುವುದಿಲ್ಲ. ಇದು ಬಿಜೆಪಿ ಕೇಂದ್ರ ಸಚಿವರೊಬ್ಬರು ಮಾಡಿದ್ದ ಘೋಷಣೆ. ಸಮಾವೇಶದಲ್ಲಿ ಕೂಗಿದ್ದು ನಿಜವಾರ ಟಿಎಂಸಿ ಬೆಂಬಲಿಗರೇ ಅಥವಾ ಹೊರಗಿನವರೇ ಎಂಬುದನ್ನು ಪತ್ತೆಹಚ್ಚುವಂತೆ ಸೂಚಿಸಿದ್ದೇನೆ. ನಮಗೆ ಶಾಂತಿಯಲ್ಲಿ ನಂಬಿಕೆಯಿದೆ” ಎಂದು ಟಿಎಂಸಿ ಸಚಿವ ಫರ್ಹಾಮ್ ಹಕೀಂ ಹೇಳಿದ್ದರು.