ದ.ಕ.ಜಿಲ್ಲೆಯ ಎಂಟು ಕ್ಷೇತ್ರಗಳಲ್ಲೂ ವೆಲ್ಫೇರ್ ಪಾರ್ಟಿ ಸ್ಪರ್ಧೆ: ಶ್ರೀಕಾಂತ್ ಸಾಲ್ಯಾನ್

Prasthutha|

ಮಂಗಳೂರು: ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕದ ಕೆಆರ್’ಎಸ್ ಪಕ್ಷ, ಜೆಡಿಯು ಸೇರಿದಂತೆ ರಾಜ್ಯದ ಐದು ಪ್ರಾದೇಶಿಕ ಪಕ್ಷಗಳ ಜೊತೆ ಮತ್ತು ಹದಿಮೂರು ಜನಪರ ಸಂಘಟನೆಗಳ ಜೊತೆ ಸಮನ್ವಯತೆಯ ಮೈತ್ರಿ ಮಾಡಿಕೊಂಡಿದ್ದು, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ದ.ಕ.ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಮೈತ್ರಿಕೂಟದ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ರಾಜ್ಯ ಉಪಾಧ್ಯಕ್ಷ  ಶ್ರೀಕಾಂತ್ ಸಾಲ್ಯಾನ್ ತಿಳಿಸಿದ್ದಾರೆ.

- Advertisement -

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಪ್ರಥಮವಾಗಿ ವೆಲ್ಫೇರ್‌ ಪಕ್ಷವು (W.P.I) ಪ್ರತಿಪಾದಿಸುವ ಸೈದ್ಧಾಂತಿಕತೆಯನ್ನು ತಮ್ಮ ಮುಂದಿಡುವುದು ಮುಖ್ಯವಾಗಿದ್ದು, ನೀವೆಲ್ಲರೂ ಅರಿತಿರುವಂತೆ, ನಾವು ನಮ್ಮ ಪಕ್ಷದ ರೂಪೀಕರಣಗೊಂಡ ದಿನಗಳಿಂದ ಇಂದಿನವರೆಗೂ ಸದಾ ಮೌಲ್ಯಾಧಾರಿತ ರಾಜಕಾರಣದ ಬಗ್ಗೆ ಮಾತ್ರ ಒತ್ತು ನೀಡುತ್ತದೆ ಎಂಬುವುದನ್ನು ಹೇಳುತ್ತಲೇ ಬಂದಿದ್ದೇವೆ ಮತ್ತು ಅದು ಭ್ರಷ್ಟಾಚಾರ ಮುಕ್ತ ಆಡಳಿತದೊಂದಿಗೆ, ಮತೀಯತೆಗೆ ಅವಕಾಶವಿರದ, ಶಾಂತಿ, ಸೌಹಾರ್ದ ಮತ್ತು ಸಾಮರಸ್ಯದ ಸಹೋದರತೆಯ ಸಹಬಾಳ್ವೆಯೊಂದಿಗೆ ನೆಮ್ಮದಿಯ ಬದುಕಿಗೆ ಬೇಕಾದ ಕಲ್ಯಾಣ ರಾಷ್ಟ್ರವೊಂದರ ಪರಿಕಲ್ಪನೆಯನ್ನು ನಮ್ಮ ಪಕ್ಷವು ಹೊಂದಿದೆ ಎಂಬುವುದನ್ನು ಸ್ಪಷ್ಟಪಡಿಸುತ್ತಿದ್ದೇವೆ ಎಂದು ಹೇಳಿದ್ದಾರೆ.

ರಾಜಕೀಯದಲ್ಲಿ ಸೈದ್ಧಾಂತಿಕ ನೆಲೆಗಟ್ಟನ್ನು ಹೊಂದಿರುವ ಮತ್ತು ಅವುಗಳಲ್ಲಿ ಬದ್ಧತೆಯನ್ನಿರಿಸಿದ ಪಕ್ಷಗಳ ಅಸ್ತಿತ್ವದ ಕೊರತೆ ಇಂದು ಎದ್ದು ಕಾಣುವ ವಿಚಾರವಾಗಿರುವುದರಿಂದ ಮಾತ್ರವಲ್ಲ, ಸಿದ್ಧಾಂತ, ಪ್ರಾಮಾಣಿಕತೆ, ಪ್ರಬುದ್ಧ ರಾಜಕೀಯ ನಿಲುವು ಹಾಗೂ ರಾಜಕೀಯ ಪಕ್ಷಗಳು ಎಂಬುವುದು ಪರಸ್ಪರ ವಿರೋಧಾಭಾಸ ಪದಗಳು ಎಂದೆನಿಸುವಷ್ಟರ ಮಟ್ಟಿಗೆ ತಲುಪಿದ ಪ್ರಸಕ್ತ ಸನ್ನಿವೇಶದಲ್ಲಿ ನಮಗೆ ನಮ್ಮ ರಾಜಕೀಯ, ಸಾಮಾಜಿಕ ನಿಲುವುಗಳನ್ನು ಮುಂದಿಡಲು ಒಂದು ರಾಜಕೀಯ ಪಕ್ಷ ಎಂಬ ನೆಲೆಯಲ್ಲಿ ಚುನಾವಣೆಗೆ ಸ್ಪರ್ಧೆ ನೀಡುವುದು ಅನಿವಾರ್ಯವಾಗಿದೆ ಎಂದು ತಿಳಿಸಿದ್ದಾರೆ.

- Advertisement -

ಪತ್ರಿಕಾಗೋಷ್ಠಿಯಲ್ಲಿ ರಾಜ್ಯಾಧ್ಯಕ್ಷ ಸುಲೈಮಾನ್ ಕಲ್ಲರ್ಪೆ, ಜಿಲ್ಲಾಧ್ಯಕ್ಷ ಸರ್ಫರಾಝ್, ಜಿಲ್ಲಾ ಉಪಾಧ್ಯಕ್ಷ ದಿವಾಕರ್ ರಾವ್, ಜಿಲ್ಲಾ ವಕ್ತಾರ ಶರೀಫ್, ಪಕ್ಷದ ಮಂಗಳೂರು ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಸಲಾಂ ಸಿಎಂ. ಉಪಸ್ಥಿತರಿದ್ದರು.



Join Whatsapp