ಬೆಂಗಳೂರು: ಸಂಘ ಪರಿವಾರದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ ಆರೋಪದ ಮೇರೆಗೆ ನಟ ಚೇತನ್ ಅಹಿಂಸಾ ಅವರನ್ನು ಪೊಲೀಸರು ಬಂಧಿಸಿದ್ದು ಸರಿಯಲ್ಲ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾಧ್ಯಕ್ಷ ಅಡ್ವೋಕೇಟ್ ತಾಹೇರ್ ಹುಸೇನ್ ಖಂಡಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು, ಚೇತನ್ ಅಹಿಂಸಾ ಅವರು ತಮ್ಮ ಅಭಿಪ್ರಾಯವನ್ನು ಪ್ರಕಟಿಸಿದ್ದಾರೇ ಹೊರತು ಯಾವುದೇ ಅಪರಾಧ ಕೃತ್ಯ ಮಾಡಿಲ್ಲ. ಹಾಗೆ ನೋಡಿದರೆ ಸಂಘ ಪರಿವಾರದ ನಾಯಕರು ಒಂದು ಕೋಮುವಿಗೆ ಗುರಿಯಾಗಿಸಿ ನಿರಂತರವಾಗಿ ಕಾನೂನು ವಿರೋಧಿ ಹೇಳಿಕೆ ನೀಡುವ ಮೂಲಕ ಒಂದು ಧರ್ಮ( ಇಸ್ಲಾಂ) ಹಾಗೂ ಒಂದು ಸಮುದಾಯ(ಮುಸ್ಲಿಂ)ದ ವಿರುದ್ಧ ದ್ವೇಷದ ವಾತಾವರಣ ನಿರ್ಮಿಸಿ ವಿಷಬೀಜ ಬಿತ್ತುತ್ತಿದ್ದಾರೆ. ಅಲ್ಲದೇ ವಾಟ್ಸಪ್ ಯುನಿವರ್ಸಿಟಿ ಮೂಲಕ ಸುಳ್ಳನ್ನು ಹರಿಬಿಟ್ಟು ಸತ್ಯವನ್ನು ವಾದ ಮಾಡುವುದಲ್ಲದೇ ಅದನ್ನು ಖಂಡಿಸಿದವರಿಗೆ ಧರ್ಮ ವಿರೋಧಿ, ದೇಶ ವಿರೋಧಿ ಎಂದು ಹೀಯಾಳಿಸುವ ಕೆಲಸ ಮಾಡತ್ತಿರುವುದು ಸರಿಯಲ್ಲ. ಇಂತಹ ಚಿಕ್ಕಪುಟ್ಟ ವಿಷಯಕ್ಕೆ ಪೊಲೀಸರ ಬಲ ಪ್ರಯೋಗಿಸಿ ಹೋರಾಟಗಾರರ ಮೇಲೆ ಹಾಗೂ ವಿರೋಧ ಪಕ್ಷದ ನಾಯಕರ ಮೇಲೆ ದರ್ಪ ತೋರುತ್ತಿರುವುದು ಸರಿಯಲ್ಲ. ಕೂಡಲೇ ಇದನ್ನು ತಡೆಯಬೇಕು. ಚೇತನ್ ಅಹಿಂಸಾ ಅವರನ್ನು ಬಿಡುಗಡೆ ಮಾಡಬೇಕು ಎಂದು ತಾಹೇರ್ ಹುಸೇನ್ ಒತ್ತಾಯಿಸಿದ್ದಾರೆ.