►ಮುಸ್ಲಿಮರನ್ನು ಕಾಂಗ್ರೆಸ್ ನಿರ್ಲಕ್ಷಿಸಿದರೆ ಬೇರೆ ಪಕ್ಷದೊಂದಿಗೆ ಜೊತೆಗೂಡುವ ಸನ್ನಿವೇಶ ಬರಬಹುದು
ಬೆಂಗಳೂರು: ರಾಜಕೀಯದಲ್ಲಿ ಮುಸ್ಲಿಮ್ ಸಮುದಾಯಕ್ಕೆ ಅನ್ಯಾಯವಾದರೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುತ್ತೇವೆ ಎಂದು ಮುಸ್ಲಿಮ್ ಧರ್ಮ ಗುರುಗಳು ಜಂಟಿ ಹೇಳಿಕೆ ನೀಡಿದ್ದಾರೆ.
ಬೆಂಗಳೂರಿನ ಖಾದ್ರಿ ಮಸೀದಿ ಸಭಾಂಗಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಮೀಯತುಲ್ ಉಲಮಾ ಹಿಂದ್ ರಾಜ್ಯಾಧ್ಯಕ್ಷ ಮುಫ್ತಿ ಇಫ್ತಿಖಾರ್ ಅಹ್ಮದ್ ಖಾಸ್ಮಿ, ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕನ ಸ್ಥಾನ ಮುಸ್ಲಿಮ್ ಸಮುದಾಯಕ್ಕೆ ಮೀಸಲಿಡಬೇಕಿತ್ತು. ಆದರೆ, ಕಾಂಗ್ರೆಸ್ಸಿನ ಹಿರಿಯ ನಾಯಕರು ತಪ್ಪು ಹೆಜ್ಜೆ ಇಟ್ಟಿದ್ದು, ಮುಸ್ಲಿಮ್ ಸಮುದಾಯಕ್ಕೆ ಅನ್ಯಾಯವಾಗಿದೆ ಎಂದು ಹೇಳಿದ್ದಾರೆ.
ಮುಸ್ಲಿಮ್ ಸಮುದಾಯ ಕಾಂಗ್ರೆಸ್ ಪಕ್ಷದ ಜಾತ್ಯತೀತ ನಿಲುವಿನಿಂದ ಪ್ರತಿ ಚುನಾವಣೆಯಲ್ಲೂ ಕಾಂಗ್ರೆಸ್ ಜೊತೆಗೆ ನಿಂತಿದೆ. ಆದರೆ, ಎಐಸಿಸಿ ನಾಯಕರು ಮುಸ್ಲಿಮ್ ಸಮುದಾಯದ ನಾಯಕರನ್ನು ಪರಿಗಣಿಸುತ್ತಿಲ್ಲ.ಹಲವು ವರ್ಷಗಳಿಂದ ಈ ಪಕ್ಷಕ್ಕಾಗಿ ದುಡಿದರೂ, ಅವರನ್ನು ನಿರ್ಲಕ್ಷ್ಯ ಮಾಡಿಕೊಂಡು ಬರುತ್ತಿದ್ದಾರೆ ಎಂದು ಅಸಮಾಧಾನ ಹೊರಹಾಕಿದರು.
ಮುಸ್ಲಿಮರನ್ನು ಕಾಂಗ್ರೆಸ್ ಪಕ್ಷ ಹೀಗೆ ನಿರ್ಲಕ್ಷ್ಯವಹಿಸಿದರೆ, ಪಶ್ಚಿಮಬಂಗಾಲ, ಬಿಹಾರ ರಾಜ್ಯಗಳಂತೆ ಕರ್ನಾಟಕದಲ್ಲೂ ಮುಸ್ಲಿಮರು ಬೇರೆ ಪಕ್ಷದೊಂದಿಗೆ ಜೊತೆಗೂಡುವ ಸನ್ನಿವೇಶ ಬರಲಿದೆ ಎಂದು ಎಚ್ಚರಿಸಿದರು.