ಮಲ್ಲಿಕಾರ್ಜುನ ಖರ್ಗೆ ಅವರ ಮಾರ್ಗದರ್ಶನದಂತೆ ನಡೆಯುತ್ತೇವೆ: ಡಿಸಿಎಂ ಡಿ. ಕೆ. ಶಿವಕುಮಾರ್

Prasthutha|

ಬೆಳಗಾವಿ/ ಹುಬ್ಬಳ್ಳಿ : “ನನ್ನನ್ನೂ ಸೇರಿದಂತೆ ಎಲ್ಲರೂ ಬಾಯಿಗೆ ಬೀಗ ಹಾಕಿಕೊಳ್ಳಬೇಕು ಎಂದು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದ್ದು, ಅವರ ಮಾರ್ಗದರ್ಶನದಲ್ಲಿ ನಡೆಯುತ್ತೇವೆ” ಎಂದು ಡಿಸಿಎಂ ಡಿ. ಕೆ. ಶಿವಕುಮಾರ್ ಅವರು ಹೇಳಿದರು.

- Advertisement -

ಹುಬ್ಬಳ್ಳಿ ವಿಮಾನ ನಿಲ್ದಾಣ ಹಾಗೂ ಬೆಳಗಾವಿಯ ಸರ್ಕಿಟ್ ಹೌಸ್ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಅವರು ಶುಕ್ರವಾರ ಪ್ರತಿಕ್ರಿಯೆ ನೀಡಿದರು.

ಕೆಪಿಸಿಸಿ ಅಧ್ಯಕ್ಷ ಹುದ್ದೆ ಬದಲಾವಣೆ ಬಗ್ಗೆ ಕೇಳಿದಾಗ, “ಮಲ್ಲಿಕಾರ್ಜುನ ಖರ್ಗೆ ಅವರು ನಮ್ಮ ರಾಷ್ಟೀಯ ನಾಯಕರು. ಅವರ ಹಾಗೂ ಪಕ್ಷದ ವರಿಷ್ಟರ ಮಾರ್ಗದರ್ಶನದಲ್ಲಿ ನಾವೆಲ್ಲರೂ ಕಾರ್ಯಕರ್ತರಾಗಿ ದುಡಿಯುತ್ತೇವೆ” ಎಂದು ಸ್ಪಷ್ಟಪಡಿಸಿದರು.

- Advertisement -

ಸಚಿವ ಆರ್. ಬಿ. ತಿಮ್ಮಾಪುರ ಅವರ ದಲಿತ ಸಿಎಂ ಹೇಳಿಕೆ ಹಾಗೂ ಸಿದ್ದರಾಮಯ್ಯ ಅವರೇ ನಮ್ಮ ನಾಯಕರು ಎನ್ನುವ ಹೇಳಿಕೆ ಬಗ್ಗೆ ಕೇಳಿದಾಗ, “ಏನೇನೋ ಹೇಳುವ ನಿಮ್ಮ (ಮಾಧ್ಯಮ) ಮಾತುಗಳಿಗೆ ನಾನು ಉತ್ತರ ನೀಡಲು ಸಿದ್ಧನಿಲ್ಲ” ಎಂದರು.

ಬೆಳಗಾವಿಯಿಂದಲೇ ಕಾಂಗ್ರೆಸ್ ಸರ್ಕಾರ ಪತನವಾಗುತ್ತದೆ ಎನ್ನುವ ಬಿಜೆಪಿಯವರ ಟೀಕೆಯ ಬಗ್ಗೆ ಕೇಳಿದಾಗ, “ಇದೇ ಬೆಳಗಾವಿ ನೆಲದಲ್ಲಿನ ಗಾಂಧಿ ಬಾವಿಯಿಂದ ನೀರನ್ನು ತೆಗೆದು ನೆಲವನ್ನು ಸ್ವಚ್ಛ ಮಾಡಿ. ಬಿಜೆಪಿ ಮಾಡಿದ್ದ ಕೊಳೆ, ಕಸವನ್ನು ಗುಡಿಸಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದು” ಎಂದು ತಿರುಗೇಟು ನೀಡಿದರು.

ಸತೀಶ್ ಜಾರಕಿಹೊಳಿ ಅವರು ಸೇರಿದಂತೆ 30 ಕ್ಕೂ ಹೆಚ್ಚು ಶಾಸಕರ ದುಬೈ ಪ್ರವಾಸದ ಬಗ್ಗೆ ಕೇಳಿದಾಗ, “ಇದರ ಬಗ್ಗೆ ನನಗೆ ಹೆಚ್ಚು ತಿಳಿದಿಲ್ಲ. ನಾನು ಇದರ ಬಗ್ಗೆ ಮಾತನಾಡಲು ಹೋಗುವುದಿಲ್ಲ” ಎಂದರು.

ನಕಲಿ ಗಾಂಧಿಗಳು ಸಮಾವೇಶ ಮಾಡುತ್ತಿದ್ದಾರೆ ಎನ್ನುವ ಬಿಜೆಪಿಯವರ ಟೀಕೆಯ ಬಗ್ಗೆ ಕೇಳಿದಾಗ, “ಬಹಳ ಸಂತೋಷ. ಇಡೀ ದೇಶದಲ್ಲಿ ಒಬ್ಬರೇ ಗಾಂಧಿ ಇರುವುದು. ನಾವೆಲ್ಲರೂ ಸಹ ಗಾಂಧಿ ವಂಶಸ್ಥರೇ, ಗಾಂಧಿ ಅವರು ಕಟ್ಟಿದ ಭಾರತದವರು. ಅದಕ್ಕೆ ನಾವು ಗಾಂಧಿ ಭಾರತ ಎಂದು ಹೆಸರಿಟ್ಟು ಕಾರ್ಯಕ್ರಮ ಮಾಡುತ್ತಿದ್ದೇವೆ” ಎಂದರು.

ಧಾರವಾದದಲ್ಲೂ ಪೂರ್ವಭಾವಿ ಸಭೆ

“ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಸಮಾವೇಶದ ತಯಾರಿ ಕುರಿತು ಹುಬ್ಬಳ್ಳಿ, ಧಾರವಾಡ, ಹಾವೇರಿ ಸೇರಿದಂತೆ ಈ ಭಾಗದ ಮುಖಂಡರ ಪೂರ್ವಭಾವಿ ಸಭೆ ಕರೆಯಲಾಗಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು ಇಡೀ ಕಾರ್ಯಕ್ರಮದ ತಯಾರಿಯನ್ನು ಬೆಳಗಾವಿಯಲ್ಲಿ ಪರಿಶೀಲನೆ ಮಾಡಿದ್ದಾರೆ. ಶನಿವಾರ (ನಾಳೆ) ಧಾರವಾಡದಲ್ಲಿ ಸಮಾವೇಶದ ತಯಾರಿ ಕುರಿತು ಮತ್ತೊಂದು ಸುತ್ತಿನ ಸಭೆಯಿದೆ.

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಹಠಾತ್ ನಿಧನದಿಂದ ಬಹಳ ವಿಜೃಂಭಣೆಯಿಂದ ಆಯೋಜನೆಗೊಂಡಿದ್ದ ಸಮಾವೇಶ ಮುಂದೂಡಲಾಯಿತು. ಇದೇ 26- 27 ರಂದು ಎಐಸಿಸಿಯಿಂದ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಜನಿಸಿದ ಮಧ್ಯಪ್ರದೇಶದ ಮಾಹೋದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ನೂರು ವರ್ಷಗಳ ಹಿಂದೆ ಮಹಾತ್ಮಾ ಗಾಂಧಿ ಅವರ ಅಧ್ಯಕ್ಷತೆಯಲ್ಲಿ ನಡೆದಿದ್ದ ಅಧಿವೇಶನದ ಸ್ಥಳದಲ್ಲಿಯೇ ಕಳೆದ ವರ್ಷ ಡಿ. 26 ರಂದು ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ನಡೆಸಿದ್ದೆವು. ಅದರಲ್ಲಿ ಎಐಸಿಸಿ ಅಧ್ಯಕ್ಷರಾಗಿದ್ದ ಮಲ್ಲಿಕಾರ್ಜುನ ಖರ್ಗೆ ಅವರು, ರಾಹುಲ್ ಗಾಂಧಿ ಅವರು ಭಾಗವಹಿಸಿದ್ದರು. ಈ ಸಭೆಯಲ್ಲಿ ಹಲವಾರು ನಿರ್ಣಯಗಳನ್ನು ತೆಗೆದುಕೊಳ್ಳಲಾಗಿತ್ತು. ನೂರು ವರ್ಷಗಳ ಹಿಂದಿನ ನಿರ್ಣಯಗಳು ಹಾಗೂ ಡಿಸೆಂಬರ್ ಅಲ್ಲಿ ತೆಗೆದುಕೊಂಡಿದ್ದ ನಿರ್ಣಯಗಳನ್ನು ಹಾಗೂ ಒಂದಷ್ಟು ಇತಿಹಾಸದ ಪುಸ್ತಕಗಳನ್ನು ಜ. 21 ರಂದು ನಡೆಯುವ ಸಮಾವೇಶದಲ್ಲಿ ಬಿಡುಗಡೆ ಮಾಡಲಾಗುವುದು.ಪ್ರತಿ ವಿಧಾನಸಭಾ ಕ್ಷೇತ್ರದಿಂದ ಕನಿಷ್ಠ 100 ಜನರು ಬರಬೇಕು ಎಂದು ತಿಳಿಸಿದ್ದೇವೆ.

ಇದು ಕೆಪಿಸಿಸಿಯ ಕಾರ್ಯಕ್ರಮವಲ್ಲ ಎಐಸಿಸಿಯಿಂದ ನಡೆಯುವ ಕಾರ್ಯಕ್ರಮ. ಜ.21 ರ ಬೆಳಿಗ್ಗೆ ಸುವರ್ಣ ಸೌಧದ ಮುಂಭಾಗದಲ್ಲಿ ಮಹಾತ್ಮಾ ಗಾಂಧಿ ಅವರ ಪ್ರತಿಮೆಯನ್ನು ಮಲ್ಲಿಕಾರ್ಜುನ ಖರ್ಗೆ ಅವರು ಅನಾವರಣ ಮಾಡಲಿದ್ದಾರೆ. ರಾಹುಲ್ ಗಾಂಧಿ ಅವರ ಉಪಸ್ಥಿತಿ ಇರಲಿದೆ. ಜೊತೆಗೆ ಎಲ್ಲಾ ಜನಪ್ರತಿನಿಧಿಗಳು, ಪ್ರತಿಪಕ್ಷಗಳ ನಾಯಕರು, ಎರಡೂ ಮನೆಗಳ ಸ್ಪೀಕರ್ ಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಇಡೀ ದೇಶದ ಭೂಪಟದಲ್ಲಿ ಬೆಳಗಾವಿಗೆ ತನ್ನದೇ ಆದ ಮಹತ್ವವಿದೆ. ಇತ್ತೀಚೆಗೆ ನಾನು ಒಂದು ಸಭೆ ಸಲುವಾಗಿ ಒಂದು ಹೋಟೆಲ್ ಗೆ ಹೋಗಿದ್ದೆ. ಆ ಹೋಟೆಲ್ ಮಾಲೀಕರು ಬೆಳಗಾವಿ ಎಲ್ಲಿದೆ ಎಂದು ಈ ಮೊದಲು ನಾವು ಎಲ್ಲರಿಗೂ ಹೇಳಬೇಕಾಗಿತ್ತು. ಆದರೆ ಈಗ ಕಾಂಗ್ರೆಸ್ ಸಮಾವೇಶದಿಂದ ತನ್ನದೇ ಆದ ಮಹತ್ವ ಪಡೆದುಕೊಂಡಿದೆ” ಎಂದರು.

ಕಳೆದ ಬೆಳಗಾವಿ ಅಧಿವೇಶನದ ವೇಳೆ ಬೆಳಗಾವಿ ಜಿಲ್ಲೆಯ ಮಾಧ್ಯಮದವರಿಗೆ ಪಾಸ್ ವಿತರಣೆಯಲ್ಲಿ ಆದ ಲೋಪದ ಬಗ್ಗೆ ಕೇಳಿದಾಗ, “ಈ ನ್ಯೂನ್ಯತೆ ನನಗೆ ಆನಂತರ ಗಮನಕ್ಕೆ ಬಂದಿತು. ಈ ರೀತಿಯ ಲೋಪ ಮತ್ತೆ ಆಗದಂತೆ ನೋಡಿಕೊಳ್ಳಲಾಗುವುದು. ಮಾಧ್ಯಮಗಳಿಲ್ಲದೆ ನಾವಿಲ್ಲ. ಎಲ್ಲಾ ಭಾಗದ ಪತ್ರಕರ್ತರನ್ನು ಗೌರವದಿಂದ ನಡೆಸಿಕೊಳ್ಳಲಾಗುವುದು. ನಿಮಗೆ ಪ್ರತ್ಯೇಕ ಪಾಸ್ ವ್ಯವಸ್ಥೆ ಮಾಡಲಾಗುವುದು” ಎಂದು ಭರವಸೆ ನೀಡಿದರು.

ಮೊಸರಲ್ಲಿ ಕಲ್ಲು ಹುಡುಕುವುದು ಬೇಡ

ಕಳೆದ ಬಾರಿಯ ಕಾರ್ಯಕ್ರಮಕ್ಕೆ ಆಹ್ವಾನ ನೀಡಿರಲಿಲ್ಲ ಎನ್ನುವ ಸಂಸದ ಜಗದೀಶ್ ಶೆಟ್ಟರ್ ಅವರ ಆರೋಪದ ಬಗ್ಗೆ ಕೇಳಿದಾಗ, “ಉದ್ಘಾಟನಾ ಫಲಕದಲ್ಲಿಯೇ ಶೆಟ್ಟರ್ ಅವರ ಹೆಸರಿದೆ. ಆಹ್ವಾನ ಪತ್ರಿಕೆಯನ್ನು ನಾನೇ ಕೊಡುತ್ತೇನೆ. ಹೀಗಿದ್ದರು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡಲಾಗುತ್ತಿದೆ. ಎಲ್ಲಾ ಪಕ್ಷದವರಿಗೂ ಆಹ್ವಾನ ನೀಡಲಾಗುವುದು ಎಂದು ನಾನೇ ಖುದ್ದಾಗಿ ಹೇಳುತ್ತಿದ್ದೇನೆ. ಸರ್ಕಾರಿ ಕಾರ್ಯಕ್ರಮಕ್ಕೆ ಎಲ್ಲರೂ ಬರಬಹುದು. ಜೈ ಬಾಪು, ಜೈ ಭೀಮ್ , ಜೈ ಸಂವಿಧಾನ ಸಮಾವೇಶಕ್ಕೆ ದಳ, ಬಿಜೆಪಿಯವರು ಬಿಟ್ಟು ಮಾಧ್ಯಮದವರು, ಸಾರ್ವಜನಿಕರು ಮುಕ್ತವಾಗಿ ಭಾಗವಹಿಸಬಹುದು” ಎಂದು ತಿಳಿಸಿದರು.

ರಾಜ್ಯದಲ್ಲಿ ಸರಣಿ ಕಳ್ಳತನವಾಗುತ್ತಿರುವ ಹಾಗೂ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆಯೇ ಎಂದು ಕೇಳಿದಾಗ, “ಇದಕ್ಕೆ ಗೃಹಸಚಿವರು ಸರಿಯಾದ ಉತ್ತರ ನೀಡುತ್ತಾರೆ” ಎಂದರು.

ಮಹದಾಯಿ ಬಗ್ಗೆ ಮತ್ತೆ ಮನವಿ

ಮಹದಾಯಿ ವಿವಾದ ಬಗೆಹರಿಯದ ಬಗ್ಗೆ ಕೇಳಿದಾಗ, “ಇದರ ಬಗ್ಗೆ ಕಳೆದ ಹತ್ತು ದಿನಗಳ ಹಿಂದೆ ದೆಹಲಿಯಲ್ಲಿ ಸಭೆ ನಡೆದಿತ್ತು. ನಾನು ಹಾಗೂ ಎಚ್. ಕೆ. ಪಾಟೀಲ್ ಅವರು ಇದೇ ವಿಚಾರವಾಗಿ ಇಂದು ಅರ್ಧ ಗಂಟೆ ಚರ್ಚೆ ಮಾಡಿದ್ದೇವೆ. ನಾನು ಹಾಗೂ ಮುಖ್ಯಮಂತ್ರಿಗಳು ಪ್ರಧಾನಿಗಳನ್ನು ಭೇಟಿ ಮಾಡಿ ಈ ವಿಚಾರ ಪ್ರಸ್ತಾಪ ಮಾಡಿದಾಗ ಕೇಂದ್ರ ಜಲಶಕ್ತಿ ಸಚಿವರರಿಗೆ ಈ ವಿಚಾರವನ್ನು ತಿಳಿಸಲಾಗಿದೆ ಎಂದು ಖುದ್ದು ಪ್ರಧಾನಿಗಳೇ ಹೇಳಿದ್ದರು. ಹುಬ್ಬಳ್ಳಿಯ ಸಂಸದರನ್ನು ಭೇಟಿಯಾಗಿ ಅವರಿಗೂ ವಿಚಾರ ತಿಳಿಸಿದಾಗ ಅವರೂ ಸಹ ಸಂಬಂಧಪಟ್ಟವರ ಗಮನಕ್ಕೆ ತರಲಾಗಿದೆ ಎಂದು ಹೇಳಿದ್ದರು. ಕಳೆದ ಬಾರಿ ನಡೆದ ಸಭೆಯಲ್ಲಿ ಇದರ ಬಗ್ಗೆ ನಿರ್ಣಯ ತೆಗೆದುಕೊಳ್ಳುತ್ತಾರೆ ಎನ್ನುವ ಭರವಸೆಯಿತ್ತು. ಆದರೆ ಆಸೆ ನೆರವೇರಲಿಲ್ಲ. ಮುಂದೆ ಸಂಸತ್ ಅಧಿವೇಶನ ನಡೆಯುವ ವೇಳೆಯಲ್ಲಿ ಮತ್ತೊಮ್ಮೆ ಮನವಿ ಸಲ್ಲಿಸಲಾಗುವುದು” ಎಂದು ಹೇಳಿದರು.



Join Whatsapp