ನವದೆಹಲಿ: ನಮ್ಮ ಪಕ್ಷವು ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಪಶ್ಚಿಮ ಉತ್ತರ ಪ್ರದೇಶವನ್ನು ಪ್ರತ್ಯೇಕ ರಾಜ್ಯವನ್ನಾಗಿ ಘೋಷಿಸಲಾಗುವುದು ಎಂದು ಬಿಎಸ್ ಪಿ ಮುಖ್ಯಸ್ಥೆ ಮಾಯಾವತಿ ಹೇಳಿದ್ದಾರೆ.
ಪಶ್ಚಿಮ ಉತ್ತರ ಪ್ರದೇಶದಲ್ಲಿ ಹೈಕೋರ್ಟ್ ಪೀಠ ಸ್ಥಾಪಿಸುವುದಾಗಿ ಮಾಯಾವತಿ ಘೋಷಿಸಿದ್ದಾರೆ.
ನಮ್ಮ ಪಕ್ಷ ಕೆಲಸ ಮಾಡುವುದರಲ್ಲಿ ನಂಬಿಕೆ ಇಟ್ಟಿದೆ ಹಾಗಾಗಿ ಪ್ರಣಾಳಿಕೆ ಬಿಡುಗಡೆ ಮಾಡುವುದಿಲ್ಲ ಎಂದು ಮಾಯಾವತಿ ಹೇಳಿದರು.
ಉತ್ತರ ಪ್ರದೇಶದಲ್ಲಿ ನನ್ನ ನೇತೃತ್ವದಲ್ಲಿ 4 ಬಾರಿ ಸರ್ಕಾರ ರಚನೆಯಾಗಿದೆ, ನಮ್ಮ ಸರ್ಕಾರದಲ್ಲಿ ಯಾವುದೇ ಕೋಮುಗಲಭೆಗಳು ಇರಲಿಲ್ಲ, ಆದರೆ ಎಸ್ಪಿ ಸರ್ಕಾರದಲ್ಲಿ, ಜಾಟ್ ಮತ್ತು ಮುಸ್ಲಿಂ ಸಮುದಾಯಗಳನ್ನು ಪರಸ್ಪರ ಹೊಡೆದಾಡುವಂತೆ ಮಾಡಲಾಯಿತು. ಇಲ್ಲಿ ತೀರಾ ಹಿಂದುಳಿದ ಸಮುದಾಯದ ಒಬ್ಬರಿಗೆ ಟಿಕೆಟ್ ನೀಡಿ ಈ ಸ್ಥಳದಲ್ಲಿ ಮುಸ್ಲಿಂ ಸಮುದಾಯ ಮತ್ತು ಜಾಟ್ ಸಮುದಾಯದ ನಡುವೆ ಭಾಂದವ್ಯ ಮೂಡಿಸಿದ್ದೇವೆ. ನಾನು ಮುಜಾಫರ್ನಗರದಿಂದ ಮುಸ್ಲಿಂ ಸಮುದಾಯದ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಬಯಸಿದ್ದೆ ಆದರೆ ಮುಸ್ಲಿಂ ಸಮುದಾಯದಿಂದ ಯಾರೂ ಸ್ಪರ್ಧಿಸಲು ಸಿದ್ಧರಿರಲಿಲ್ಲ ಎಂದರು.