ಕಲ್ಲಡ್ಕ ಭಟ್ಟನ ವಿರುದ್ಧ ಪ್ರತಿಭಟಿಸಲು ಅನುಮತಿ ಕೇಳಿದ ಮಹಿಳೆಯರಿಗೆ ನೋಟೀಸ್; ನ್ಯಾಯಾಲಯದಲ್ಲಿ ಪ್ರಶ್ನಿಸಲಿದ್ದೇವೆ: WIM

Prasthutha|

ಮಂಗಳೂರು: ಮುಸ್ಲಿಂ ಮಹಿಳೆಯರ ಬಗ್ಗೆ ಅವಾಚ್ಯವಾಗಿ ಅವಹೇಳನಕಾರಿ ಹೇಳಿಕೆ ನೀಡಿದ ಹಾಗೂ ಧಾರ್ಮಿಕ ಭಾವನೆಗೆ ಧಕ್ಕೆಯುಂಟು ಮಾಡಿದ ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ವಿಮೆನ್ ಇಂಡಿಯಾ ಮೂವ್ಮೆಂಟ್ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ವತಿಯಿಂದ ಕಲ್ಲಡ್ಕದಲ್ಲಿ ಮಂಗಳವಾರ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಆದರೆ ಪೊಲೀಸ್ ಇಲಾಖೆ ವಿನಾಕಾರಣ ಅನುಮತಿ ನಿರಾಕರಿಸಿತ್ತು. ಕೂಡ ಶಾಂತಿಯುತ ಪ್ರತಿಭಟನೆಗೆ ಅವಕಾಶ ನಿರಾಕರಿಸಿದ ಪೊಲೀಸ್ ಇಲಾಖೆ ಮಹಿಳೆಯರ ಮೇಲೆ ಸೆಕ್ಷನ್ 107 ರಡಿ ಕೇಸ್ ದಾಖಲಿಸಿದೆ. ಇದನ್ನು ವಿಮೆನ್ ಇಂಡಿಯ ಮೂವ್ಮೆಂಟ್ ತೀವ್ರವಾಗಿ ಖಂಡಿಸುತ್ತದೆ ಮತ್ತು ಕಾನೂನು ಹೋರಾಟದ ಮೂಲಕ ಎದುರಿಸಲಿದಿದ್ದೇವೆ ಎಂದು WIM ಹೇಳಿದೆ.

- Advertisement -

ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ WIM ರಾಜ್ಯಾಧ್ಯಕ್ಷೆ ಫಾತಿಮಾ ನಸೀಮಾ, ದ್ವೇಷ ಭಾಷಣದ ದೊಡ್ಡ ಇತಿಹಾಸವನ್ನೇ ಹೊಂದಿರುವ ಪ್ರಭಾಕರ್ ಭಟ್ನನ್ನು ಬಂಧಿಸಲು ಇದುವರೆಗೆ ಧೈರ್ಯ ತೋರದ ಪೋಲೀಸ್ ಇಲಾಖೆ ಅದರ ವಿರುದ್ಧ ಪ್ರತಿಭಟಿಸಲು ಸಜ್ಜಾದ ಮಹಿಳೆಯರನ್ನು ಠಾಣಿಯಲ್ಲಿ ದಿನವಿಡೀ ಸತಾಯಿಸಿದ್ದಾರೆ. ಮಾತ್ರವಲ್ಲ ಮರುದಿನ ನೋಟೀಸು ಜಾರಿಗೊಳಿಸಿರುವುದು ಅಕ್ಷಮ್ಯ ಎಂದರು. ಸಬಲೀಕರಣದ ಬಗ್ಗೆ ,ಕಾನೂನು ಸುವ್ಯವಸ್ಥೆ ಬಗ್ಗೆ, ಸಾಂವಿಧಾನಿಕ ನ್ಯಾಯದ ಬಗ್ಗೆ ಮಾತುಗಳನ್ನಾಡುವ ಸರ್ಕಾರಕ್ಕೆ ಇಂದಿನ ತನಕ ಆರೋಪಿಯೊಬ್ಬನನ್ನು ಬಂಧಿಸಲು ಸಾಧ್ಯವಾಗದಿರುವುದು ವಿಪರ್ಯಾಸ. ಸರಕಾರ ಬಿಜೆಪಿಯ IT ಸೆಲ್ ಗೆ ಬೆದರಿದಂತೆ ತೋರುತ್ತದೆ. ಮಾತ್ರವಲ್ಲ ಮುಂಬರುವ ಲೋಕಸಭಾ ಚುನಾವಣೆಗೆ ಮತ ಬೇಟೆಯ ಭರಾಟೆಯಲ್ಲಿ ಮೃದು ಹಿಂದುತ್ವಕ್ಕೆ ಮಣೆ ಹಾಕಿರುವ ಕಾಂಗ್ರೆಸ್ ಸರ್ಕಾರ ಆರ್ ಎಸ್ ಎಸ್ ನಾಯಕರನ್ನು ಬಂಧಿಸುವ ಇಚ್ಚಾಶಕ್ತಿಯನ್ನು ಹೊಂದಿಲ್ಲ. ತನ್ನ ಚುನಾವಣಾ ರಾಜಕೀಯಕ್ಕಾಗಿ ಪ್ರಜಾಪ್ರಭುತ್ವ ಸಂವಿಧಾನ ಮತ್ತು ನ್ಯಾಯಗಳನ್ನು ಬಲಿ ನೀಡುತ್ತಿರುವುದು ಸಿದ್ದರಾಮಯ್ಯ ಸರ್ಕಾರದ ನಿಲುವಾಗಿದೆ ಎಂದರು.

ಇದನ್ನು ಸರಕಾರ ಹಲವು ಬಾರಿ ಸಾಬೀತುಪಡಿಸಿದೆ. ವಿಶೇಷತಃ 2013ರಲ್ಲಿ ಇದೇ ಪ್ರಭಾಕರ್ ಭಟ್ಟನ ಕೇಸ್ ಅನ್ನು ರಿ ಓಪನ್ ಮಾಡಿ ಬಂದಿಸುವುದಾಗಿ ಭರವಸೆ ನೀಡಿದ್ದ ಸಿದ್ದರಾಮಯ್ಯ ಐದು ವರ್ಷದುದ್ದಕ್ಕೂ ಬಂಧಿಸಿಲ್ಲ. ಇದೀಗ ಪುನಃ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಅದೇ ಸಿದ್ದರಾಮಯ್ಯ ಸರ್ಕಾರ ತನ್ನ ಹಳೆ ಚಾಳಿಯನ್ನು ಮುಂದುವರಿಸಿದೆ. ಇದರಿಂದಾಗಿ ಚುನಾವಣೆಗೆ ಮುನ್ನ ನೀಡಿದ ಭರವಸೆಗಳೆಲ್ಲವೂ ನೀರಿನ ಮೇಲಿನ ಹೋಮದಂತಾಗಿದೆ. ಈ ಮೂಲಕ ಸರಕಾರ ಮತದಾರರನ್ನು ಕೂಡ ವಂಚಿಸುತ್ತಿದೆ. ಸರಕಾರಕ್ಕೆ ಪ್ರಜಾಪ್ರಭುತ್ವ ಸಂವಿಧಾನದ ಮೇಲೆ ನೈಜ ಕಾಳಜಿ, ನಂಬಿಕೆ, ಪ್ರೇಮ ಇರುವುದಾದರೆ ತಕ್ಷಣ ಆರೋಪಿಯನ್ನು ಬಂಧಿಸಲಿ. ಮಹಿಳೆಯರ ಮೇಲೆ 107 ರಡಿ ನೋಟೀಸ್ ಕಳುಹಿಸಿರುವ ಅಧಿಕಾರಿಯ ವಿರುದ್ಧ ಕೋರ್ಟ್ನಲ್ಲಿ ಪ್ರಶ್ನಿಸಲಿದ್ದೇವೆ.ಅಧಿಕಾರಿ ವರ್ಗ ಮಹಿಳೆಯರ ಮೇಲೆ ನಡೆಸಿದ ದರ್ಪವನ್ನು ಕಾನೂನು ಹೋರಾಟದ ಮೂಲಕ ಎದುರಿಸಲಿದಿದ್ದೇವೆ ಎಂದು ತಿಳಿಸಿದ್ದಾರೆ.



Join Whatsapp