ರಾಹುಲ್ ಗಾಂಧಿಯನ್ನು ಬಾಂಬ್ ಹಾಕಿ ಕೊಲೆ ಮಾಡುತ್ತೇವೆ: ಅಪರಿಚಿತ ವ್ಯಕ್ತಿಯಿಂದ ಬೆದರಿಕೆ ಪತ್ರ

Prasthutha|

ಇಂದೋರ್: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಬಾಂಬ್ ಹಾಕಿ ಕೊಲೆ ನಡೆಸುವುದಾಗಿ ಬೆದರಿಕೆ ಪತ್ರ ಬಂದಿದೆ. ರಾಹುಲ್ ಗಾಂಧಿ ಅವರು ಮಧ್ಯಪ್ರದೇಶದ ಇಂದೋರ್’ಗೆ ಬಂದ ತಕ್ಷಣ ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆ ಹಾಕಲಾಗಿದೆ.

- Advertisement -

ಭಾರತ್ ಜೋಡೋ ಯಾತ್ರೆ ಮಧ್ಯಪ್ರದೇಶ ತಲುಪುವ ಮುನ್ನವೇ ಇಂದೋರ್’ನಲ್ಲಿ ರಾಹುಲ್ ಗಾಂಧಿಗೆ ಅನಾಮಧೇಯ ಬೆದರಿಕೆ ಪತ್ರವೊಂದು ಬಂದ ನಂತರ ಆತಂಕ ಉಂಟಾಗಿದೆ. ಪತ್ರದಲ್ಲಿ ರಾಹುಲ್ ಗಾಂಧಿಯನ್ನು ಬಾಂಬ್ ಹಾಕಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ. ಪೊಲೀಸರು ಇದೀಗ ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ.

ಶುಕ್ರವಾರ ಬೆಳಗ್ಗೆ ಸಿಹಿ ಅಂಗಡಿಯೊಂದರ ಹೊರಗೆ ಅಪರಿಚಿತ ವ್ಯಕ್ತಿಯೊಬ್ಬರು ಬೆದರಿಕೆ ಪತ್ರವನ್ನು ಬಿಟ್ಟು ಹೋಗಿದ್ದರು ಎಂದು ತಿಳಿದುಬಂದಿದೆ. ಸಮೀಪದಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಪೊಲೀಸರು ಆರೋಪಿಗಾಗಿ ಶೋಧ ಆರಂಭಿಸಿದ್ದಾರೆ.

- Advertisement -

ವೀರ್ ಸಾವರ್ಕರ್ ಕುರಿತು ಮಾಧ್ಯಮಗಳಿಗೆ ಹೇಳಿಕೆ ನೀಡಿದ ಒಂದು ದಿನದ ನಂತರ ಈ ಬೆದರಿಕೆ ಬಂದಿದೆ. ಸಾವರ್ಕರ್ ಕುರಿತು ರಾಹುಲ್ ಗಾಂಧಿಯವರ ಹೇಳಿಕೆಯು ಮಹಾರಾಷ್ಟ್ರದ ರಾಜಕೀಯ ವಲಯಗಳಲ್ಲಿ ಕೋಲಾಹಲವನ್ನು ಎಬ್ಬಿಸಿತ್ತು.

ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ಸಿಗರು ಯಾತ್ರೆಯ ಮಾರ್ಗದಲ್ಲಿ ಇಂದೋರಿನ ಸ್ಟೇಡಿಯಮ್’ನಲ್ಲಿ ತಂಗಿದರೆ ಅಲ್ಲಿ ಬಾಂಬ್ ದಾಳಿ ನಡೆಸುವುದಾಗಿ ಅದರಲ್ಲಿ ಬೆದರಿಸಲಾಗಿದೆ.

ಭಾರತ್ ಜೋಡೋ ಯಾತ್ರೆಯು ನವೆಂಬರ್ 28ರಂದು ಇಂದೋರ್ ತಲುಪಲಿದೆ. ಈ ಸಂಬಂಧ ಅಲ್ಲಿನ ಪೊಲೀಸರು ಕೇಸು ದಾಖಲಿಸಿಕೊಂಡು ಪತ್ರ ಬರೆದವರ ಪತ್ತೆಗೆ ತನಿಖೆ ಆರಂಭಿಸಿದೆ.

“ಇಂದೋರ್’ನ ಜುನಿ ಪ್ರದೇಶದಲ್ಲಿರುವ ಒಂದು ಸಿಹಿ ತಿಂಡಿಯ ಅಂಗಡಿಗೆ ನವೆಂಬರ್ 17ರ ಸಂಜೆ  ಈ ಬೆದರಿಕೆ ಪತ್ರ ಬಂದಿದೆ. ರಾಹುಲ್ ಗಾಂಧಿ ಮತ್ತು ಭಾರತ್ ಜೋಡೋ ಯಾತ್ರೆಯಲ್ಲಿ ಬರುವವರು ಖಾಲ್ಸಾ ಸ್ಟೇಡಿಯಮ್’ನಲ್ಲಿ ತಂಗಿದರೆ ಅವರ ಮೇಲೆ ಬಾಂಬ್ ದಾಳಿ ನಡೆಸಲಾಗುವುದು ಎಂದು ಪತ್ರದಲ್ಲಿ ಬೆದರಿಸಲಾಗಿದೆ” ಎಂದು ಇಂದೋರ್ ಪೊಲೀಸ್ ಕಮಿಷನರ್ ಎಚ್. ಸಿ. ಮಿಶ್ರಾ ಹೇಳಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

ಪತ್ರದಲ್ಲಿ ನೇರವಾಗಿ ರಾಹುಲ್ ಗಾಂಧಿಯವರನ್ನು ಗುರಿಯಿಟ್ಟು ಬಾಂಬು ದಾಳಿ ನಡೆಸುವುದಾಗಿ ಹೇಳಿಲ್ಲ. ಅಪರಿಚಿತನಿಂದ ಕ್ರಿಮಿನಲ್ ಸಂಚಿನ ಐಪಿಸಿ 507 ವಿಧಿಯಡಿ ಎಫ್’ಐಆರ್ ದಾಖಲಿಸಿಕೊಳ್ಳಲಾಗಿದೆ. ಪತ್ರದಲ್ಲಿನ ಬೆದರಿಕೆ ಬಗ್ಗೆ ತನಿಖೆ ಆರಂಭಿಸಿದ್ದೇವೆ. ಆದರೆ ಇದನ್ನು ಯಾರೋ ತುಂಟತನಕ್ಕಾಗಿ ಬರೆದಿರಬಹುದು ಎಂದುಕೊಳ್ಳುತ್ತೇನೆ ಎಂದೂ ಅವರು ಹೇಳಿದ್ದಾರೆ.

ಕೂಡಲೇ ಪತ್ರದ ಬಗ್ಗೆ ತೀವ್ರ ತನಿಖೆ ನಡೆಸಬೇಕು ಹಾಗೂ ಭಾರತ್ ಜೋಡೋ ಯಾತ್ರೆಗೆ ತೀವ್ರ ನಿಗಾದ ಭದ್ರತೆ ಒದಗಿಸಬೇಕು ಎಂದು ಮಧ್ಯಪ್ರದೇಶದ ಕಾಂಗ್ರೆಸ್ ಅಧ್ಯಕ್ಷ ನೀಲಬ್ ಶುಕ್ಲಾ ಒತ್ತಾಯ ಮಾಡಿದ್ದಾರೆ. ಸದ್ಯ ಮಹಾರಾಷ್ಟ್ರದಲ್ಲಿ ಸಂಚರಿಸುತ್ತಿರುವ ಭಾರತ್ ಜೋಡೋ ಯಾತ್ರೆಯು ನವೆಂಬರ್ 20ರಂದು ಮಧ್ಯಪ್ರದೇಶ ಪ್ರವೇಶಿಸುತ್ತದೆ. 



Join Whatsapp