ಪುಣೆ: ದೇವರೆಂದು ನಮ್ಮನ್ನು ನಾವೇ ಸ್ವಯಂಘೋಷಣೆ ಮಾಡಿಕೊಳ್ಳಬಾರದು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
ಪ್ರಧಾನಿ ಮೋದಿ ಲೋಕಸಭೆ ಚುನಾವಣೆ ವೇಳೆ ‘ನಾನು ಜೈವಿಕವಾಗಿ ಜನಿಸಿದಂತೆ ಭಾಸವಾಗುತ್ತಿಲ್ಲ. ನನ್ನನ್ನು ಭಗವಂತನೇ ಕಳಿಸಿದ್ದಾನೆ ಎಂಬಂತೆ ಭಾಸವಾಗುತ್ತಿದೆ’ ಎಂಬ ಹೇಳಿಕೆ ನೀಡಿದ್ದರು.
ಮಣಿಪುರದಲ್ಲಿ ಮಕ್ಕಳ ಶಿಕ್ಷಣಕ್ಕಾಗಿ ಶ್ರಮಿಸಿದ ಮತ್ತು ಭಯ್ಯಾಜಿ ಎಂದು ಜನಪ್ರಿಯರಾಗಿದ್ದ ಶಂಕರ್ ದಿನಕರ್ ಕೇನ್ ಅವರ ಶತಮಾನೋತ್ಸವದ ಅಂಗವಾಗಿ ನಡೆದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಭಾಗವತ್, ನಾವು ದೇವರಾಗುತ್ತೇವೋ ಇಲ್ಲವೋ ಎಂಬುದನ್ನು ಜನರು ನಿರ್ಧರಿಸುತ್ತಾರೆ. ನಾವು ದೇವರಾಗಿದ್ದೇವೆ ಎಂದು ಸ್ವಯಂ ಘೋಷಿಸಬಾರದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಶಾಂತವಾಗಿರುವುದಕ್ಕಿಂತ ಮಿಂಚಿನಂತೆ ಹೊಳೆಯಬೇಕು ಎಂದು ಕೆಲವರು ಭಾವಿಸುತ್ತಾರೆ. ಆದರೆ ಸಿಡಿಲು ಬಡಿದ ನಂತರ ಮೊದಲಿಗಿಂತ ಹೆಚ್ಚು ಕತ್ತಲೆಯಾಗುತ್ತದೆ. ಆದ್ದರಿಂದ ಕೆಲಸಗಾರರು ದೀಪಗಳಂತೆ ಉರಿಯಬೇಕು ಮತ್ತು ಅಗತ್ಯವಿದ್ದಾಗ ಮಾತ್ರ ಹೊಳೆಯಬೇಕು ಎಂದು ಹೇಳಿದರು.