ನ್ಯಾಯಾಲಯಗಳಲ್ಲೂ ವಿಕಲಚೇತನರಿಗೆ ನ್ಯಾಯದ ಸುಲಭಲಭ್ಯತೆಯನ್ನು ಖಾತರಿ ಪಡಿಸಬೇಕಿದೆ: ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಎಸ್.ಎ. ಬೋಪಣ್ಣ

Prasthutha|

ಬೆಂಗಳೂರು : ನ್ಯಾಯಾಲಯಗಳಲ್ಲಿ ವಿಕಲಚೇತನರಿಗೆ ಪೂರಕವಾದ ವ್ಯವಸ್ಥೆಯನ್ನು ಕಲ್ಪಿಸುವ ಮೂಲಕ ನ್ಯಾಯದ ಸುಲಭಲಭ್ಯತೆಯನ್ನು ಖಾತರಿ ಪಡಿಸಬೇಕಿದೆ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎಸ್.ಎ. ಬೋಪಣ್ಣ ಕರೆ ನೀಡಿದರು.

- Advertisement -

ಅವರು ಬೆಂಗಳೂರಿನ ರಾಮಯ್ಯ ಕಾನೂನು ಕಾಲೇಜಿನಲ್ಲಿ ಶನಿವಾರ ನಡೆದ ಬೆಳ್ಳಿ ಮಹೋತ್ಸವ ಕಾರ್ಯಕ್ರಮದಲ್ಲಿ ‘ದಿ ಅಸೋಸಿಯೇಷನ್ ಆಫ್ ಪೀಪಲ್ ವಿತ್ ಡಿಸೆಬಿಲಿಟಿ(ಎಪಿಡಿ)’ ಸಂಸ್ಥೆ ರಾಮಯ್ಯ ಕಾನೂನು ಕಾಲೇಜಿನ ಸಹಕಾರದೊಂದಿಗೆ ಸ್ಥಾಪಿಸಿದ ‘ನೂತನ ಡಿಸೆಬಿಲಿಟಿ ಲಾ ಸೆಂಟರ್‌’ ಅನ್ನು ಉದ್ಘಾಟಿಸಿ ಮಾತನಾಡಿದರು.

ತಮ್ಮ ವಿಕಲಚೇತನ ಸ್ಥಿತಿಯಿಂದಾಗಿ ಅವಕಾಶ ವಂಚಿತರು ಮತ್ತು ಬಡವರು ಹಲವು ವರ್ಷಗಳಿಂದ ನ್ಯಾಯದಿಂದ ವಂಚಿತರಾಗಿದ್ದಾರೆ. ನ್ಯಾಯದ ಸುಲಭ ಲಭ್ಯತೆಯನ್ನು ಅವರಿಗೆ ಪಡೆಯಲು ಸಾಧ್ಯವಾಗಿಲ್ಲ.

- Advertisement -

ಸಂವಿಧಾನವು ತನ್ನ ಎಲ್ಲ ಪ್ರಜೆಗಳಿಗೆ ಸಮಾನ ನ್ಯಾಯವನ್ನು ನೀಡುತ್ತಿದ್ದರೂ ಕೂಡ ವಿಕಲಚೇತನರಿಗೆ, ಸಾಮಾಜಿಕವಾಗಿ ಆರ್ಥಿಕವಾಗಿ ಹಿಂದುಳಿದ ದುರ್ಬಲ ವರ್ಗಗಳಿಗೆ ತಮ್ಮ ಹಕ್ಕುಗಳ ಬಗ್ಗೆಯಾಗಲೀ, ಸಂವಿಧಾನವು ಸಂರಕ್ಷಿಸುತ್ತಿರುವ ಇತರ ಸೌಲಭ್ಯಗಳ ಬಗ್ಗೆಯಾಗಲೀ ತಿಳಿದಿಲ್ಲ ಎಂದು ಎಸ್.ಎ. ಬೋಪಣ್ಣ ಹೇಳಿದರು‌.

ನ್ಯಾಯದ ಸುಲಭ ಲಭ್ಯತೆಯು ನಮ್ಮ ಸಮಾಜದ ಪ್ರಮುಖ ಅಗತ್ಯತೆಯಾಗಿದ್ದು ಅದನ್ನು ಸಾಧಿಸುವಲ್ಲಿ ನಾವು ಮುಂದಡಿ ಇರಿಸಬೇಕಿದೆ ಎಂದು ಅವರು ಕರೆ ನೀಡಿದರು.

ಸಾಮಾಜಿಕ- ಆರ್ಥಿಕ ಸ್ಥರಗಳ ನಡುವೆ ಯಾವುದೇ ತಾರತಮ್ಯವಿಲ್ಲದೇ ನ್ಯಾಯ ನೀಡದಾಗ ಮಾತ್ರ ನ್ಯಾಯದ ಸುಲಭ ಲಭ್ಯತೆಯನ್ನು ಸಾಧಿಸಿದಂತಾಗುತ್ತದೆ ಎಂದು ನಾನು ನಂಬುತ್ತೇ‌ನೆ. ಸಾಮಾಜಿಕ ನ್ಯಾಯವು ನಮ್ಮ ಸಂವಿಧಾನದ ಮೂಲ ರಚನೆಯಾಗಿದೆ.  ಯಾವಾಗ ಎಲ್ಲ ವರ್ಗದ ಜನರನ್ನು ಸಮಾನವಾಗಿ ಪರಿಗಣಿಸಲಾಗುತ್ತದೆಯೋ ಆಗಲೇ ನಮ್ಮ ಸಂವಿಧಾನದ ಮೌಲ್ಯಗಳನ್ನು ಎತ್ತಿಹಿಡಿದಂತಾಗುತ್ತದೆ. ವಿಶೇಷ ಚೇತನರಿಗೂ ನ್ಯಾಯ ದೊರಕಿಸುವುದು ನ್ಯಾಯದ ಸುಲಭಲಭ್ಯತೆಯ ಪ್ರಮುಖ ಅಂಶ‌. ವಿಶೇಷ ಚೇತನರ ಊನತೆಗಳಿಂದಾಗಿ ಅವರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳುವುದು, ಅವರ ನ್ಯಾಯ ಸಂರಕ್ಷಣೆಗಾಗಿ ಹೋರಾಡುವುದು ನಮ್ಮ ಕರ್ತವ್ಯವಾಗಿದೆ ಎಂದು ಅವರು ನುಡಿದರು.

ಕೆಲವರ ಕೂಗುಮಾರಿ ಮಾತುಗಳು, ಎಲ್ಲರ ಸಂವಿಧಾನಾತ್ಮಕ ಹಕ್ಕುಗಳನ್ನು ಕಾಪಾಡುವ  ಆಶಯದಿಂದ ನಮ್ಮನ್ನು ದೂರೀಕರಿಸಿ ವಿಚಲಿತರನ್ನಾಗಿಸದಿರಲಿ ಎಂದು ಎಸ್.ಎ. ಬೋಪಣ್ಣ ಎಚ್ಚರಿಸಿದರು.

ರಾಷ್ಟೀಯ ಹಾಗೂ ರಾಜ್ಯ ಮಟ್ಟದಲ್ಲಿನ ನ್ಯಾಯಾಂಗ ರಂಗದಲ್ಲಾದ ಬೃಹತ್ ಕ್ರಾಂತಿಯ ಪರಿಣಾಮವಾಗಿ ಇಂದು ವಿಕಲಚೇತನರಿಗೆ ನ್ಯಾಯ ಒದಗಿಸುವ ಬಗ್ಗೆ ತಳಮಟ್ಟದಲ್ಲಿಯೇ ತಿಳಿಸಲಾಗುತ್ತಿದೆ.  ವಿಕಲಚೇತನರ ಲಿಂಗ ಹಾಗೂ ವಯಸ್ಸಿಗೆ ತಕ್ಕಂತೆ ಪೂರಕವಾದ ವ್ಯವಸ್ಥೆಗಳನ್ನು ಕಲ್ಪಿಸಲು ಸರ್ಕಾರಗಳು ಮುಂದಡಿ ಇರಿಸಬೇಕಿದೆ. ವಿಕಲಾಂಗರು ಸೇರಿದಂತೆ ಸಮಾಜದ ಎಲ್ಲ ದುರ್ಬಲ ವರ್ಗಗಳಿಗೆ ನ್ಯಾಯ ಒದಗಿಸಿದಾಗ ಮಾತ್ರ ನ್ಯಾಯದ ನೈಜತೆಯನ್ನು ಕಾಪಾಡಿದಂತಾಗುತ್ತದೆ‌ ಎಂದು ಅವರು ಕರೆ ನೀಡಿದರು.

‘ದಿ ಅಸೋಸಿಯೇಷನ್ ಆಫ್ ಪೀಪಲ್ ವಿತ್ ಡಿಸೆಬಿಲಿಟಿ(ಎಪಿಡಿ)’ ಸಂಸ್ಥೆಯ ಪ್ರತಿನಿಧಿಗಳಾಗಿ ಗೌರವ ಕಾರ್ಯದರ್ಶಿ ಜೇಕಬ್ ಕುರಿಯನ್, ಸಿಇಓ ಡಾ. ಎನ್.ಎಸ್. ಸೆಂಥಿಲ್ ಕುಮಾರ್ ಭಾಗವಹಿಸಿದ್ದರು.

ಕಾರ್ಯಕ್ರಮದ ವೇದಿಕೆಯಲ್ಲಿ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಬಿ.ವಿ.ನಾಗರತ್ನ, ಆಂಧ್ರಪ್ರದೇಶದ ರಾಜ್ಯಪಾಲ ಎಸ್.ಅಬ್ದುಲ್ ನಜೀರ್, ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ. ವರಾಳೆ, ಹೈಕೋರ್ಟ್‌ ನ್ಯಾಯಮೂರ್ತಿ ಜಿ.ನರೇಂದ್ರ, ಗೋಕುಲ ಎಜುಕೇಶನ್ ಫೌಂಡೇಷನ್ ಉಪಾಧ್ಯಕ್ಷ ಎಂ.ಆರ್.ಸೀತಾರಾಂ ಉಪಸ್ಥಿತರಿದ್ದರು.

Join Whatsapp