ದೆಹಲಿ: ನಮ್ಮ ದೇಶವನ್ನು ಸರ್ವಾಧಿಕಾರದಿಂದ ರಕ್ಷಿಸಲು 140 ಕೋಟಿ ಜನರ ಬೆಂಬಲ ಬೇಕು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ಅಬಕಾರಿ ನೀತಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಜೂನ್ 1 ರವರೆಗೆ ಮಧ್ಯಂತರ ಜಾಮೀನು ನೀಡಿ ತಿಹಾರ್ ಜೈಲಿನಿಂದ ಹೊರಬಂದ ನಂತರ ಅರವಿಂದ್ ಕೇಜ್ರಿವಾಲ್ ಇಂದು(ಶನಿವಾರ) ತಮ್ಮ ಮೊದಲ ಪತ್ರಿಕಾಗೋಷ್ಠಿ ನಡೆಸಿದ್ದಾರೆ. “ನಿಮ್ಮೆಲ್ಲರ ನಡುವೆ ಮರಳಿ ಬಂದಿದ್ದು ನನಗೆ ತುಂಬಾ ಸಂತೋಷವಾಗಿದೆ. ನಾವು ಒಟ್ಟಾಗಿ ನಮ್ಮ ದೇಶವನ್ನು ಸರ್ವಾಧಿಕಾರದಿಂದ ರಕ್ಷಿಸಬೇಕು, ನಾನು ನನ್ನ ಎಲ್ಲಾ ಶಕ್ತಿಯಿಂದ ಹೋರಾಡುತ್ತೇನೆ, ನನಗೆ ದೇಶದ 140 ಕೋಟಿ ಜನರ ಬೆಂಬಲ ಬೇಕು ಎಂದು ಹೇಳಿದ್ದಾರೆ. “ಅವರು (ಬಿಜೆಪಿ) ನನ್ನನ್ನು ಜೈಲಿಗೆ ಕಳುಹಿಸಿದ್ದಾರೆ. ಅವರು ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿದ್ದಾರೆಂದು ಪ್ರಧಾನಿ ಹೇಳುತ್ತಾರೆ. ಆದರೆ ಬಿಜೆಪಿ ತಮ್ಮ ಪಕ್ಷದಲ್ಲಿರುವ ಎಲ್ಲಾ ಭ್ರಷ್ಟರನ್ನು ಸ್ವಾಗತಿಸಿದ್ದಾರೆ ಎಂದರು.
ನಾನು ದಣಿವಿಲ್ಲದೆ ಕೆಲಸ ಮಾಡುತ್ತೇನೆ, ಮುಂದಿನ 21 ದಿನಗಳಲ್ಲಿ ‘ಸರ್ವಾಧಿಕಾರ’ವನ್ನು ಕೊನೆಗೊಳಿಸಲು ಮತ್ತು ಭಾರತವನ್ನು ಉಳಿಸಲು ದೇಶಾದ್ಯಂತ ಪ್ರಚಾರ ಮಾಡುತ್ತೇನೆ ಎಂದರು.
ಪಕ್ಷ ವಿಭಜನೆಯಾಗುತ್ತದೆ ಎಂದು ಭಾವಿಸಿ ಅವರು (ಬಿಜೆಪಿ) ನಾಲ್ವರು ಎಎಪಿ ನಾಯಕರನ್ನು ಜೈಲಿಗೆ ಕಳುಹಿಸಿದ್ದಾರೆ. ಆದಾಗ್ಯೂ, ಇದು (ಎಎಪಿ) ಒಂದು ಪಕ್ಷವಲ್ಲ, ಇದು ಒಂದು ಚಿಂತನೆ. ಅವರು ಮುಗಿಸಲು ಬಯಸಿದ್ದರೆ ಇದು ಹೆಚ್ಚು ವಿಸ್ತರಿಸುತ್ತದೆ. ಪ್ರಧಾನಿಯವರು ಆಮ್ ಆದ್ಮಿ ಪಕ್ಷವನ್ನು ಹತ್ತಿಕ್ಕಲು ಬಯಸುತ್ತಿದ್ದಾರೆ ಎಂದರು.