ಬೆಂಗಳೂರು ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರಿಟ್ಟಿದ್ದು ನಾವು: ಸಿದ್ದರಾಮಯ್ಯ

Prasthutha|

ಬೆಂಗಳೂರು: ನಾಡಪ್ರಭು ಕೆಂಪೇಗೌಡರ ಪ್ರತಿಮೆಯನ್ನು ಉದ್ಘಾಟಿಸಲು ಬೆಂಗಳೂರಿಗೆ ಆಗಮಿಸುತ್ತಿರುವ ನರೇಂದ್ರ ಮೋದಿ ಅವರಿಗೆ ಸ್ವಾಗತ. ಆದರೆ, ಬಿಜೆಪಿ  ಮತ್ತು ರಾಜ್ಯ ಬಿಜೆಪಿ ಸರ್ಕಾರಗಳು ನಾಡಪ್ರಭು ಕೆಂಪೇಗೌಡರು ಮತ್ತು ಅವರ ಮೌಲ್ಯಗಳ ನಿಜವಾದ ಅನುಯಾಯಿಗಳೇ? ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

- Advertisement -

ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ನಮ್ಮ ಕಾಂಗ್ರೆಸ್ ಪಕ್ಷ ನಾಡಪ್ರಭು ಕೆಂಪೇಗೌಡರ ಮೌಲ್ಯಗಳ ನೈಜ ಅನುಯಾಯಿ. ಅವರ ಗೌರವಾರ್ಥ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಹೆಸರಿಟ್ಟಿದ್ದೇವೆ.  ಬೆಂಗಳೂರಿನ ಮುಖ್ಯ ಮೆಟ್ರೋ ನಿಲ್ದಾಣಕ್ಕೂ ನಾಡಪ್ರಭು ಕೆಂಪೇಗೌಡ ಮೆಟ್ರೋ ನಿಲ್ದಾಣ ಎಂದು ನಾಮಕರಣ ಮಾಡಲಾಗಿದೆ.  ಪ್ರತಿ ವರ್ಷ ಕೆಂಪೇಗೌಡ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸುವ ವೈಭವೋಪೇತ ಸಂಪ್ರದಾಯಕ್ಕೆ ಚಾಲನೆ ನೀಡಿದ್ದು ಕಾಂಗ್ರೆಸ್ ಸರ್ಕಾರ. ಬೆಂಗಳೂರಿನ ಸಂಸ್ಥಾಪಕರಿಗೆ ಸಂಬಂಧಿಸಿದ ಪಾರಂಪರಿಕ ಕಟ್ಟಡಗಳನ್ನು ಸಂರಕ್ಷಿಸಲು ನಾಡಪ್ರಭು ಕೆಂಪೇಗೌಡ ಪ್ರಾಧಿಕಾರವನ್ನು ಸ್ಥಾಪಿಸಿದ್ದೇವೆ ಎಂದು ತಿಳಿಸಿದ್ದಾರೆ.

ಆದರೆ ರಾಜ್ಯ ಬಿಜೆಪಿ ಸರ್ಕಾರ ಏಕೆ ಕೆಂಪೇಗೌಡರ ದಕ್ಷ ಆಡಳಿತ ಮತ್ತು ಸಮಾಜ ಸೇವೆಯ ಮೌಲ್ಯಗಳನ್ನು ಅನುಸರಿಸುತ್ತಿಲ್ಲ? ನಾಡಪ್ರಭು ನಿರ್ಮಿಸಿದ ಈ ಕನಸಿನ ನಗರ ಒಂದು ಕಾಲದಲ್ಲಿ ವಿಶ್ವದಾದ್ಯಂತ ಪ್ರಗತಿ ಮತ್ತು ಸೌಂದರ್ಯಕ್ಕೆ ಹೆಸರುವಾಸಿಯಾಗಿತ್ತು. ಬಿಜೆಪಿಯಿಂದ ಬೆಂಗಳೂರು 40% ಕಮಿಷನ್, ಗುಂಡಿಗಳು ಮತ್ತು ಪ್ರವಾಹಗಳಿಗೆ ಕುಖ್ಯಾತಿಯಾಗಿದೆ.

Join Whatsapp