‘ಇಲ್ಲಿಂದ ಹೊರಡಿ’ ಎನ್ನುವವರನ್ನು ಎದುರಿಸುವ ಹಕ್ಕು ನಮಗಿದೆ: ಸ್ವಾತಂತ್ರ್ಯ ದಿನ ಗಮನ ಸೆಳೆದ ಸಿದ್ದೀಕ್ ಕಾಪ್ಪನ್ ಪುತ್ರಿಯ ಭಾಷಣ

Prasthutha|

ತಿರುವನಂತಪುರಂ: ಉತ್ತರ ಪ್ರದೇಶ ಪೊಲೀಸರಿಂದ ಬಂಧಿಸಲ್ಪಟ್ಟು ಸದ್ಯ ಜೈಲುವಾಸದಲ್ಲಿರುವ ಕೇರಳದ ಪತ್ರಕರ್ತ ಸಿದ್ದೀಕ್ ಕಾಪ್ಪನ್ ಪುತ್ರಿಯ ಸ್ವಾತಂತ್ರ್ಯ ಭಾಷಣ ಜವಾಬ್ದಾರಿಯುತ ನಾಗರಿಕರ ಹೃದಯ ತಟ್ಟತೊಡಗಿದೆ. 9 ವರ್ಷದ ಬಾಲಕಿ ಮೆಹನಾಝ್ ಕಾಪ್ಪನ್‌ಳ ವಯಸ್ಸಿಗೂ ಮೀರಿದ ಮಾತುಗಳು ಚಿಂತಿಸುವಂತೆ ಮಾಡಿದೆ. ಕೇರಳದ ನೊಟ್ಟಾಪರಮ್‌ನಲ್ಲಿ ನಡೆಸಿದ 2.12 ನಿಮಿಷದ ಮಲಯಾಳಂ ಭಾಷಣ ಇದೀಗ ವೈರಲ್ ಆಗಿದೆ.

- Advertisement -

ಸಭಿಕರಿಗೆ ವಂದನೆಗಳು. ಎಲ್ಲರಿಗೂ ನನ್ನ ಹೃದಯಾಂತರಾಳದ ಸ್ವಾತಂತ್ರ್ಯ ದಿನಾಚರಣೆಯ ಶುಭಾಷಯಗಳು. ನಾನು ಮೆಹನಾಝ್ ಕಾಪ್ಪನ್. ಒಂದು ಪ್ರಜೆಯ ಎಲ್ಲಾ ರೀತಿಯ‌ ಸ್ವಾಂತತ್ರ್ಯವನ್ನು ಕಸಿದು, ಕತ್ತಲ ಕೋಣೆಗೆ ತಳ್ಳಲ್ಪಟ್ಟ ಪತ್ರಕರ್ತ ಸಿದ್ದೀಕ್ ಕಾಪ್ಪನ್ ಪುತ್ರಿ ಎಂದು ಭಾಷಣ ಪ್ರಾರಂಭಿಸಿದ ಕಾಪ್ಪಮ್ ಮಗಳು, ಭಾರತವು 76ನೇ ಸ್ವಾತಂತ್ರ್ಯ ದಿನಕ್ಕೆ ಪಾದಾರ್ಪಣೆಗೈಯುತ್ತಿರುವ ಈ ಸಂದರ್ಭದಲ್ಲಿ, ಭಾರತೀಯ ಪ್ರಜೆ ಎಂಬ ಹೆಮ್ಮೆ ಮತ್ತು ಜವಾಬ್ದಾರಿಯಿಂದ ಹೇಳುತ್ತಿದ್ದೇನೆ ‘ಭಾರತ್ ಮಾತಾ ಕಿ ಜೈ’. ನಾವು ಇಂದು ಅನುಭವಿಸುತ್ತಿರುವ ಸ್ವಾತಂತ್ರ್ಯ ಗಾಂಧೀಜಿ, ನೆಹರು, ಭಗತ್ ಸಿಂಗ್ ಹೀಗೆ ಎಣಿಕೆಗೂ ಸಿಗದ ನಾಯಕರ, ಹೋರಾಟಗಾರರ ಬಲಿದಾನದ ಫಲವಾಗಿದೆ ಎಂದು ಹೇಳಿದಳು.

ಪ್ರತಿಯೊಬ್ಬ ಭಾರತೀಯ ಪ್ರಜೆಗೂ ಮಾತನಾಡುವ, ಆಹಾರದ, ಧಾರ್ಮಿಕ ಹೀಗೇ ಎಲ್ಲದಕ್ಕೂ ಆಯ್ಕೆಯ ಸ್ವಾತಂತ್ರ್ಯವಿದೆ. ಅಭಿವ್ಯಕ್ತಿ ಸ್ವಾತಂತ್ರ್ಯವಿದೆ. ‘ಇಲ್ಲಿಂದ ಹೊರಡಿ’ ಎನ್ನುವವರನ್ನು ಎದುರಿಸುವ ಹಕ್ಕೂ ಪ್ರತೀ ಭಾರತೀಯನಿಗಿದೆ. ಭಾರತದ ಸ್ವಾತಂತ್ರ್ಯವನ್ನು ಯಾರ ಮುಂದೆಯೂ ಪಣಕ್ಕಿಟ್ಟಿಲ್ಲ. ಆದರೆ ಇಂದಿಗೂ ಅಶಾಂತಿ ಎಲ್ಲೆಲ್ಲಿ ತಾಂಡವವಾಡುತ್ತಿದೆ.

- Advertisement -

ಜಾತಿ, ಮತ, ಬಣ್ಣ ರಾಜಕೀಯ ಸಿದ್ಧಾಂತದ ಹಿನ್ನೆಲೆಯಲ್ಲಿ ಇಂದು ಗಲಭೆಗಳು ನಡೆಯುತ್ತಿದೆ. ಇವೆಲ್ಲವನ್ನೂ ನಾವು ಒಗ್ಗಟ್ಟಿನಿಂದ ಪ್ರೀತಿಪೂರ್ವಕವಾಗಿ ಕಿತ್ತೆಸೆಯಬೇಕಿದೆ. ಅಶಾಂತಿಯ ನೆರಳನ್ನೂ ನಾವು ಹತ್ತಿರ ಸುಳಿಯಲು ಬಿಡಬಾರದು. ನಾವು ಒಗ್ಗಟ್ಟಿನಿಂದ ಬಾಳಬೇಕಿದೆ. ನಾವೆಲ್ಲಾ ಸೇರಿ ಭಾರತವನ್ನು ಉತ್ತುಂಗದ ಶಿಖರಕ್ಕೆ ತಲುಪಿಸಬೇಕಿದೆ. ಭಿನ್ನತೆ, ಗಲಭೆಗಳಿಲ್ಲದ ಉತ್ತಮ ಸಮಾಜದ ಕನಸು ಕಾಣಬೇಕಿದೆ.

ಭಾರತದ ಸ್ವಾತಂತ್ರ್ಯಕ್ಕಾಗಿ‌ ಹೋರಾಡಿದ ಧೀರರನ್ನು ನೆನೆಯುವುದರೊಂದಿಗೆ, ಭಾರತದ ಸಾಮಾನ್ಯ ಜನರ ಸ್ವಾತಂತ್ರ್ಯ ಕೂಡಾ ನಿರಾಕರಿಸಲ್ಪಡಬಾರದು ಎಂಬ ಕಳಕಳಿಯೊಂದಿಗೆ ನಾನು ಮುಕ್ತಾಯಗೊಳಿಸುತ್ತಿದ್ದೇನೆ. ಜೈ ಹಿಂದ್, ಜೈ ಭಾರತ್ ಎಂದಾಗಿತ್ತು ಆ ಭಾಷಣದ ಮುಕ್ತಾಯ.

2020ರಲ್ಲಿ ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ನಡೆದ ದಲಿತ ಬಾಲಕಿಯ ಸಾಮೂಹಿಕ ಅತ್ಯಾಚಾರ ನಡೆಸಿ ಕೊಲೆಗೈದ ಕೃತ್ಯ ಮತ್ತು ಆ ಬಳಿಕದ ಘಟನೆಯ ವರದಿಗೆಂದು ತೆರಳುತ್ತಿದ್ದ ಸಿದ್ದೀಕ್ ಕಾಪ್ಪನ್‌ನನ್ನು ಬಂಧಿಸಿದ ಯುಪಿ ಪೊಲೀಸರು ಯುಎಪಿಎಯಡಿ ಪ್ರಕರಣ ದಾಖಲಿಸಿ ಜೈಲಿಗಟ್ಟಿದ್ದರು.

Join Whatsapp