ಬೆಂಗಳೂರು: ನಾವು ಗೋಹತ್ಯೆ ನಿಷೇಧ ಮಾಡಿ, ಗೋಶಾಲೆ ತೆರೆದು ಗೋಸಂಪತ್ತು ಅಭಿವೃದ್ಧಿ ಆಗಿದೆ ಎಂದಿದ್ದೀರಿ, ಎಲ್ಲಪ್ಪ ಅಭಿವೃದ್ಧಿ ಆಗಿರುವುದು ಕಡಿಮೆ ಆಗಿದೆಯಲ್ವಾ? 123 ಸರ್ಕಾರಿ, 200 ಖಾಸಗಿ ಗೋಶಾಲೆಗಳಿವೆ. ಒಂದು ಹಸು ಸಾಕಲು ದಿನಕ್ಕೆ 17 ರೂ. ನಂತೆ ಸರ್ಕಾರ ನೀಡುತ್ತದೆ, ಕನಿಷ್ಠ ಒಂದು ಹಸುವಿಗೆ ನಿತ್ಯ 60 ರೂ. ಮೇವು ಬೇಕು. ಹೀಗಾದರೆ ಹಸುವಿಗೆ ಹೊಟ್ಟೆತುಂಬ ಮೇವು ನೀಡೋಕೆ ಸಾಧ್ಯವೇ? ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮೊದಲೆಲ್ಲ ರೈತರು ಉಪಯುಕ್ತವಿಲ್ಲದ ಜಾನುವಾರುಗಳನ್ನು ಸಂತೆಗೆ ತೆಗೆದುಕೊಂಡು ಹೋಗಿ ಮಾರಾಟ ಮಾಡುತ್ತಿದ್ದರು, ಈಗ ಅದನ್ನು ನಿಷೇಧ ಮಾಡಲಾಗಿದೆ. ಸರ್ಕಾರವಾದರೂ ಈ ಜಾನುವಾರುಗಳನ್ನು ಖರೀದಿ ಮಾಡುವುದಾದರೆ ಅಡ್ಡಿಲ್ಲ, ಅದನ್ನೂ ಮಾಡುತ್ತಿಲ್ಲ. ಗೋಹತ್ಯೆ ನಿಷೇಧ ಕಾಯ್ದೆ ಇರುವುದರಿಂದ ವಯಸ್ಸಾಗಿರುವ, ರೋಗ ಬಂದಿರುವ, ಉಳುಮೆ ಮಾಡಲು ಸಾಧ್ಯವಾಗದ ಜಾನುವಾರುಗಳನ್ನು ಯಾರು ಖರೀದಿಸದೆ ಇರುವುದು ರೈತರಿಗೆ ದೊಡ್ಡ ತಲೆ ನೋವಾಗಿದೆ. ಕೋಮುವಾದಿ ಉದ್ದೇಶದೊಂದಿಗೆ ಜಾರಿಗೆ ತಂದಿರುವ ಈ ಕಾಯ್ದೆಯನ್ನು ಮೊದಲು ತೆಗೆದುಹಾಕಬೇಕು ಎಂದು ಆಗ್ರಹಿಸಿದರು.
ರಾಜ್ಯಪಾಲರು ಈ ತಿಂಗಳ 10ರಂದು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡಿದ್ದಾರೆ. ಸುಮಾರು 82 ಪ್ಯಾರಗಳಿರುವ ಅವರ ಭಾಷಣ ನೋಡಿದೆ. ಅಕ್ಕಪಕ್ಕದ ರಾಜ್ಯಗಳಲ್ಲಿನ ರಾಜಭವನಗಳು ವಿವಾದದ ಕೇಂದ್ರಗಳಾಗಿವೆ, ಆದರೆ ಕರ್ನಾಟಕದಲ್ಲಿ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಯಾವುದೇ ವಿವಾದದ ಸುಳಿಗೆ ಸಿಕ್ಕಿಹಾಕಿಕೊಳ್ಳದೆ ರಾಜಭವನದ ಗೌರವ, ಘನತೆಯನ್ನು ಕಾಪಾಡುವ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಮೊದಲಿಗೆ ರಾಜ್ಯಪಾಲರಿಗೆ ಅಭಿನಂದನೆಗಳನ್ನು ಸಲ್ಲಿಸಲು ಬಯಸುತ್ತೇನೆ ಎಂದರು.
ರಾಜ್ಯಪಾಲರ ಭಾಷಣದಲ್ಲಿ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಏನು ಹೇಳಿತ್ತು, ಅದರಲ್ಲಿ ಎಷ್ಟು ಈಡೇರಿಸಿದೆ ಎಂಬುದನ್ನು ಹೇಳಬೇಕಿತ್ತು. 2018ರಲ್ಲಿ ಬಿಜೆಪಿ ರಾಜ್ಯದ ಜನರಿಗೆ 600 ಭರವಸೆಗಳನ್ನು ನೀಡಿತ್ತು, ಅದರಲ್ಲಿ ಈ ವರೆಗೆ 50 ರಿಂದ 60 ಭರವಸೆಗಳನ್ನು ಕೂಡ ಪೂರ್ಣ ಈಡೇರಿಸಿಲ್ಲ. ರಾಜ್ಯಪಾಲರ ಭಾಷಣದಲ್ಲಿ ಬಡವರ, ರೈತರ, ಅವಕಾಶ ವಂಚಿತರ ಧ್ವನಿಯಾಗಿ ಕೆಲಸ ಮಾಡಿದೆ ಎಂದು ಹೇಳಿಸಲಾಗಿದೆ, ವಾಸ್ತವದಲ್ಲಿ ಈ ವರ್ಗದ ಜನರ ಪರವಾಗಿ ಸರ್ಕಾರ ಕೆಲಸ ಮಾಡಿಲ್ಲ ಎಂಬುದು ನನ್ನ ಅನಿಸಿಕೆ ಎಂದರು.
ನಾಡಿನ ರೈತರು ನಮ್ಮ ಸಾಲದ ಹೊರೆ ಕಡಿಮೆ ಮಾಡಿ, ನಮ್ಮ ಬೆಳೆಗಳಿಗೆ ಸೂಕ್ತ ಬೆಲೆ ಸಿಗುವಂತೆ ಮಾಡಿ ಎಂದು ಕೇಳುತ್ತಿದ್ದಾರೆ. ನರೇಂದ್ರ ಮೋದಿ ಅವರು 2016ರಲ್ಲಿ ಮುಂದಿನ 6 ವರ್ಷಗಳಲ್ಲಿ ರೈತರ ಆದಾಯವನ್ನು ದುಪ್ಪಟ್ಟು ಮಾಡುತ್ತೇವೆ ಎಂದು ಹೇಳಿದ್ದರು, 2022ನೇ ಇಸವಿಗೆ ಇದು ಆಗಬೇಕಿತ್ತಲ್ವಾ? ಆಗಿದೆಯಾ? ರೈತರ ಸಾಲ ದುಪ್ಪಟ್ಟಾಗಿದೆ, ಆದಾಯವಲ್ಲ. ಈ ಬಾರಿಯ ಕೇಂದ್ರ ಬಜೆಟ್ ನಲ್ಲಿ ರಸಗೊಬ್ಬರಕ್ಕೆ ನೀಡುವ ಸಬ್ಸಿಡಿಯನ್ನು ಸುಮಾರು 50,000 ಕೋಟಿ ರೂ. ಕಡಿಮೆ ಮಾಡಿದ್ದಾರೆ. ನರೇಗಾದಲ್ಲಿ ಕಳೆದ ಬಾರಿಗೂ ಈ ಬಾರಿಗೂ ನೀಡಿರುವ ಅನುದಾನದಲ್ಲಿ 29,000 ಕೋಟಿ ರೂ. ಕಡಿತ ಮಾಡಿದ್ದಾರೆ. 2014ರಲ್ಲಿ 50 ಕೆ.ಜಿ ಡಿಎಪಿ ಚೀಲವೊಂದರ ಬೆಲೆ 450 ರೂ. ಇತ್ತು, ಇಂದು 1,350 ರಿಂದ 1400 ರೂ. ಆಗಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಬಿಜೆಪಿಯ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಅವರು ಮಂಗಳೂರಿನಲ್ಲಿ ಮಾತನಾಡುವಾಗ ಅಭಿವೃದ್ಧಿ ಬಗ್ಗೆ ಮಾತನಾಡಬೇಡಿ, ಲವ್ ಜಿಹಾದ್, ಹಿಜಾಬ್ ಬಗ್ಗೆ ಮಾತನಾಡಿ ಎಂದಿದ್ದಾರೆ. ಮೊನ್ನೆ ರಾಜ್ಯಕ್ಕೆ ಬಂದಿದ್ದ ಅಮಿತ್ ಶಾ ಅವರು ಅಭಿವೃದ್ಧಿ ಬಗ್ಗೆ ಮಾತನಾಡದೆ, ಅಬ್ಬಕ್ಕ ವರ್ಸಸ್ ಟಿಪ್ಪು ನಡುವಿನ ಚುನಾವಣೆ ಎಂದಿದ್ದಾರೆ. ಇದು ಈ ದೇಶದ ಗೃಹ ಮಂತ್ರಿ ಆಡುವ ಮಾತಾ? ಮಹಾತ್ಮಾ ಗಾಂಧಿ ವರ್ಸಸ್ ಸಾವರ್ಕರ್ ನಡುವಿನ ಚುನಾವಣೆ ಎನ್ನುತ್ತಾರೆ. ಇವೆಲ್ಲ ರಾಜ್ಯದ ಅಭಿವೃದ್ಧಿಗೆ ಸಂಬಂಧಿಸಿದೆಯಾ? ಎಂದು ಸಿದ್ದರಾಮಯ್ಯ ಟೀಕಾಪ್ರಹಾರ ನಡೆಸಿದರು.
ಗೋಹತ್ಯೆ ನಿಷೇಧದ ಬಳಿಕ ಗೋಸಂಪತ್ತು ಕಡಿಮೆಯಾಗಿದೆ, ಮೊದಲು ಕಾಯ್ದೆ ಹಿಂಪಡೆಯಿರಿ: ಸಿದ್ದರಾಮಯ್ಯ
Prasthutha|