ನಾವು ಕಾಂಗ್ರೆಸ್ ತೊರೆದಿಲ್ಲ: ವಿಧಾನಸಭೆ ಕಲಾಪಕ್ಕೆ ಹಾಜರಾದ ಲೋಬೋ, ಕಾಮತ್ ಹೇಳಿಕೆ

Prasthutha|

ಪಣಜಿ: ಇಂದಿನಿಂದ ಆರಂಭವಾದ ಗೋವಾ ವಿಧಾನ ಸಭೆಯ ಮುಂಗಾರು ಅಧಿವೇಶನಕ್ಕೆ ಮಾಜಿ ಮುಖ್ಯ ಮಂತ್ರಿ ದಿಗಂಬರ ಕಾಮತ್ ಮತ್ತು ಸ್ಥಾನ ಕಳೆದುಕೊಂಡ ಪ್ರತಿ ಪಕ್ಷದ ನಾಯಕ ಮೈಕೆಲ್ ಲೋಬೋ ಹಾಜರಾದುದಲ್ಲದೆ ನಾವು ಇನ್ನೂ ಕಾಂಗ್ರೆಸ್ಸಿನಲ್ಲೇ ಇರುವುದಾಗಿ ಘೋಷಿಸಿದರು.

- Advertisement -

ಗೋವಾ ಕಾಂಗ್ರೆಸ್ ಉಸ್ತುವಾರಿ ದಿನೇಶ್ ಗುಂಡೂರಾವ್ ಅವರು ಭಾನುವಾರ ಸಂಜೆ ಕಾಮತ್ ಮತ್ತು ಲೋಬೋರು ಬಿಜೆಪಿ ಜೊತೆಗೆ ಸೇರಿಕೊಂಡು ಸಂಚು ನಡೆಸುತ್ತಿರುವುದಾಗಿ ಆಪಾದಿಸಿದ್ದರು. ಐವರು ಶಾಸಕರು ನಿನ್ನೆಯಿಂದ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಲೋಬೋ ಮತ್ತು ಕಾಮತ್ ನಮ್ಮ ಮೇಲಿನ ಆರೋಪದಿಂದ ನೋವಾಗಿದೆ ಎಂದರು. ಮೈಕೆಲ್ ಲೋಬೋ ಮತ್ತವರ ಪತ್ನಿಯ ಆಸ್ತಿಯ ಬಗ್ಗೆ ಇತ್ತೀಚೆಗೆ ಕಿರುಕುಳ ನೀಡಿ ಬಿಜೆಪಿ ಪರ ಇರುವ ಅಧಿಕಾರಿಗಳು ಲೋಬೋರನ್ನು ಪಕ್ಷಕ್ಕೆ ಎಳೆದುಕೊಳ್ಳಲು ಪ್ರಯತ್ನಿಸಿದ್ದರು ಎಂದು ಆರೋಪಿಸಲಾಗಿದೆ.

ಏಪ್ರಿಲ್ ನಲ್ಲಿ ಪಕ್ಷವನ್ನು ಮರು ಸಂಘಟಿಸಲಾಗಿತ್ತು. ದಿಗಂಬರ ಕಾಮತರನ್ನು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಖಾಯಂ ಸದಸ್ಯರನ್ನಾಗಿ ಮಾಡಲಾಗಿತ್ತು.

- Advertisement -

“ನಾನು ಕಾಂಗ್ರೆಸ್ ಬಿಡುವೆನೆಂಬುದು ಗಾಳಿ ಸುದ್ದಿ. 2017ರಿಂದ ಇಂದಿನವರೆಗೂ ಪಕ್ಷದಲ್ಲಿ ಗಟ್ಟಿಯಾಗಿ ನಿಂತಿದ್ದೇನೆ. ಲೋಬೋರ ಬಗೆಗೂ ಆಪಾದನೆ ಮಾಡಿ, ಅವರ ಸ್ಥಾನ ಪಲ್ಲಟ ಮಾಡಿ ದಿನೇಶ್ ಗುಂಡೂರಾವ್ ನಮಗೆಲ್ಲ ನೋವುಂಟು ಮಾಡಿದ್ದಾರೆ” ಎಂದು ಕಾಮತ್ ಆಪಾದಿಸಿದರು.

“ನನ್ನನ್ನು ಶಾಸಕಾಂಗ ಪಕ್ಷದ ನಾಯಕ ಸ್ಥಾನದಿಂದ ತೆಗೆದದ್ದು ನೋವಾದರೂ, ಕಾಂಗ್ರೆಸ್ ಬಿಟ್ಟು ಹೋಗುವ ಪ್ರಶ್ನೆಯೇ ಇಲ್ಲ” ಎಂದು ಮೈಕೆಲ್ ಲೋಬೋ ಹೇಳಿದರು. ನಾನು ಶನಿವಾರ, ಭಾನುವಾರದ ಶಾಸಕರ ಸಭೆಗೆ ಬಂದು ಹೋದರೂ ಅಪವಾದ ಹೊರಿಸಿರುವುದು ಸರಿಯಲ್ಲ ಎಂದೂ ಲೋಬೋ ಹೇಳಿದರು.

ಭಾರೀ ಮಳೆಗೆ ಸಿಯೋಲಿಂ ಕ್ಷೇತ್ರದಲ್ಲಿ ಆರು ಮನೆಗಳು ಬಿದ್ದಿದ್ದವು. ನಾನು ಮತ್ತು ಪತ್ನಿ ದಿಲಿಲಾ ಆ ವಿಷಯದಲ್ಲಿ ಓಡಾಡುತ್ತಿದ್ದೆವು ಎಂದೂ ಲೋಬೋ ಹೇಳಿದರು. ನಾನು ಉದ್ಯಮಿಯೂ ಆಗಿರುವುದರಿಂದ ಪಕ್ಷದ ಕೆಲವು ಜವಾಬ್ದಾರಿಗಳಿಂದ ನನ್ನನ್ನು ಮುಕ್ತ ಮಾಡಿದ್ದು ಒಳ್ಳೆಯದೇ ಆಯಿತು ಎಂದು ಲೋಬೋ ಹೇಳಿದರು.

Join Whatsapp