ಉಡುಪಿ: ನೇಜಾರುವಿನಲ್ಲಿ ಗಗನಸಖಿ ಸಹಿತ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವಾರು ಆಯಾಮದಲ್ಲಿ ತನಿಖೆ ಮಾಡುತ್ತಿದ್ದೇವೆ. ಪ್ರವೀಣ್ ಅರುಣ್ ಚೌಗಲೆಯನ್ನು ವಶಕ್ಕೆ ಪಡೆದಿದ್ದು ಸಂಜೆಯೊಳಗೆ ತನಿಖೆ ಮಾಡಿ ಪೂರ್ಣ ಚಿತ್ರಣ ಸಿಗಲಿದೆ ಎಂದು ಉಡುಪಿ ಎಸ್ ಪಿ ಡಾ. ಅರುಣ್ ತಿಳಿಸಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಪ್ರವೀಣ್ ಅರುಣ್ ಚೌಗಲೆಯನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದೇವೆ, ಟೆಕ್ನಿಕಲ್ ಮತ್ತು ಹ್ಯೂಮನ್ ಇಂಟೆಲಿಜೆನ್ಸ್ ಮೇರೆಗೆ ಕರೆದುಕೊಂಡು ಬಂದು ವಿಚಾರಣೆ ನಡೆಸುತ್ತಿದ್ದೇವೆ ಸಂಜೆಯೊಳಗೆ ತನಿಖೆ ಮಾಡಿ ಪೂರ್ಣ ಚಿತ್ರಣ ಸಿಗಲಿದೆ ಎಂದರು.
ಪ್ರಕರಣಕ್ಕೆ ಸಂಬಂಧಿಸಿ ಐದು ತಂಡಗಳನ್ನು ರಚನೆ ಮಾಡಿ ವಿವಿಧ ಆಯಮಗಳಲ್ಲಿ ತನಿಖೆ ನಡೆಸಲಾಗಿತ್ತು. ಮಾಹಿತಿಯಂತೆ ಆರೋಪಿಯನ್ನು ಕುಡುಚಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಶಕ್ಕೆ ಪಡೆದು ಉಡುಪಿಗೆ ಕರೆದುಕೊಂಡು ಬರಲಾಗಿದೆ. ಇದೀಗ ಆತನನ್ನು ವಿಚಾರಣೆಗೊಳಪಡಿಸಿದ್ದು ಇನ್ನಷ್ಟೇ ಹೆಚ್ಚಿನ ಮಾಹಿತಿ ತಿಳಿದು ಬರಬೇಕಾಗಿದೆ ಎಂದರು. ನಮ್ಮ ಮಾಹಿತಿ ಪ್ರಕಾರ ಆತ ಸಿ.ಐ.ಎಸ್.ಎಫ್. ಹಾಗೂ ಸಿ.ಆರ್.ಪಿ.ಎಫ್.ನಲ್ಲಿ ಇರಲಿಲ್ಲ ಎಂಬುದು ತಿಳಿದು ಬಂದಿದೆ. ಆತ ಸಿವಿಲ್ ಪೊಲೀಸ್ ನಲ್ಲಿ ಕರ್ತವ್ಯ ನಿರ್ವಹಿಸಿರಬಹುದು ಎಂಬ ಮಾಹಿತಿ ದೊರೆತಿದೆ ಎಂದರು.