ಮಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ನಾಯಕರು ಎಲ್ಲ 28 ಕ್ಷೇತ್ರಗಳನ್ನೂ ಗೆಲ್ಲುವ ಉತ್ಸಾಹದಲ್ಲಿದ್ದಾರೆ. ಆ ಕಾರಣಕ್ಕೆ ಮೈತ್ರಿ ನಿರ್ಧಾರಕ್ಕೆ ಬಂದಿದ್ದೇವೆ ಎಂದು ಕುಕ್ಕೆಸುಬ್ರಹ್ಮಣ್ಯದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹೇಳಿದರು.
ಕುಕ್ಕೆ ಸುಬ್ರಹ್ಮಣ್ಯ ದೇವಳಕ್ಕೆ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ದಂಪತಿ ಸಮೇತ ಇಂದು ಸೋಮವಾರ ಭೇಟಿ ನೀಡಿ ಬಳಿಕ ಮಾತನಾಡಿದ ಅವರು, ಈಗಾಗಲೇ ಅಮಿತ್ ಶಾ ಜೊತೆ ಕುಮಾರಸ್ವಾಮಿ ಚರ್ಚೆ ಮಾಡಿದ್ದಾರೆ. ಲೋಕಸಭಾ ಕ್ಷೇತ್ರಗಳ ಸೀಟು ಹಂಚಿಕೆ ಬಗ್ಗೆ ಚರ್ಚೆ ಇನ್ನೂ ನಡೆಯಬೇಕಷ್ಟೇ. ದಸರಾ ಬಳಿಕ ಸೀಟು ಹಂಚಿಕೆ ಚರ್ಚೆ ನಡೆಯಲಿದೆ. ಅಮಿತ್ ಶಾ ಜೊತೆ ಕುಮಾರಸ್ವಾಮಿ ಮತ್ತೆ ಚರ್ಚೆ ಮಾಡಲಿದ್ದಾರೆ. ಮೈತ್ರಿ ಚರ್ಚೆಗೂ ಮುನ್ನ ಶಾಸಕರು, ಇಬ್ರಾಹಿಂ ಜೊತೆ ಮಾತುಕತೆ ನಡೆಸುತ್ತೇವೆ. ಆ ನಂತರ ಹೆಚ್.ಡಿ.ಕುಮಾರಸ್ವಾಮಿ ಅವರು ಅಮಿತ್ ಶಾರನ್ನು ಭೇಟಿ ಮಾಡಲಿದ್ದಾರೆ. ಮಂಡ್ಯ ಸೇರಿದಂತೆ ಯಾವುದೇ ಕ್ಷೇತ್ರಗಳ ಬಗ್ಗೆ ತೀರ್ಮಾನ ಆಗಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ನಾಯಕರು ಎಲ್ಲ 28 ಕ್ಷೇತ್ರಗಳನ್ನೂ ಗೆಲ್ಲುವ ಉತ್ಸಾಹದಲ್ಲಿದ್ದಾರೆ. ಆ ಕಾರಣಕ್ಕೆ ಮೈತ್ರಿ ನಿರ್ಧಾರಕ್ಕೆ ಬಂದಿದ್ದೇವೆ ಎಂದು ಹೇಳಿದರು.