ಉಚಿತ ವಿದ್ಯುತ್ ಬೇಡ, ಸರಿಯಾಗಿ ವಿದ್ಯುತ್ ಪೂರೈಕೆ ಮಾಡಿ: ರಾಜ್ಯ ಸರ್ಕಾರಕ್ಕೆ ಪ್ರಜ್ವಲ್‌ ರೇವಣ್ಣ ಮನವಿ

Prasthutha|

ಹಾಸನ: ಕಾಂಗ್ರೆಸ್ ಸರ್ಕಾರ ಷರತ್ತು ವಿಧಿಸಿ 200 ಯುನಿಟ್ ವರೆಗೆ ಉಚಿತವಾಗಿ ವಿದ್ಯುತ್ ನೀಡುತ್ತಿದೆ. ಆದರೇನು ಫಲ? ಸರಿಯಾಗಿ ವಿದ್ಯುತ್ ಪೂರೈಕೆ ಆಗುತ್ತಿಲ್ಲ ಎಂದು ರೈತರು ಆರೋಪಿಸಲು ಆರಂಭಿಸಿದ್ದಾರೆ. ಸರಿಯಾದ ರೀತಿಯಲ್ಲಿ, ಸರಿಯಾದ ಸಮಯದಲ್ಲಿ ಕರೆಂಟ್ ಕೊಡಲಿಲ್ಲ ಅಂದರೆ ನಿಮ್ಮ ಉಚಿತ ಕರೆಂಟ್ ಯಾಕೆ ಬೇಕು ಅಂತ ಹಾಸನದಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಸರ್ಕಾರವನ್ನು ಪ್ರಶ್ನಿಸಿದ್ದಾರೆ.

- Advertisement -

ನಿಮ್ಮ ಉಚಿತ ಕರೆಂಟ್ ನಮಗೆ ಬೇಡ. ರೈತರ ಪಂಪ್‌ಸೆಟ್‌ಗಳಿಗೆ ಸರಿಯಾಗಿ ವಿದ್ಯುತ್ ಪೂರೈಕೆ ಮಾಡಿ. ಎಲ್ಲಾ ಕಡೆಗಳಲ್ಲಿ ಸರಿಯಾಗಿ ವಿದ್ಯುತ್ ಪೂರೈಕೆ ಆಗುತ್ತಿಲ್ಲ. ಇದೊಂದು ಸಮಸ್ಯೆ ಆಗಿದೆ ಎಂದು ಪ್ರಜ್ವಲ್ ರೇವಣ್ಣ ಹೇಳಿದರು.

ಅನಧಿಕೃತವಾಗಿ ವಿದ್ಯುತ್ ಸಂಪರ್ಕ ಪಡೆದಿರುವ ರೈತರ ಮೇಲೆ ಕೇಸ್ ದಾಖಲಿಸಿ, ದಂಡ ವಿಧಿಸುತ್ತಿದ್ದಾರೆ ಎಂದು ಹೇಳಿದ ಪ್ರಜ್ವಲ್ ರೇವಣ್ಣ, ಅನಧಿಕೃತವಾಗಿ ವಿದ್ಯುತ್ ಸಂಪರ್ಕ ಪಡೆದಿರುವ ರೈತರು ಟ್ರಾನ್ಸ್‌ಫಾರ್ಮರ್ ಹಾಕಿಕೊಂಡುವಂತೆ ಹಣ ಕಟ್ಟಿದ್ದಾರೆ. ಆದರೂ ಟ್ರಾನ್ಸ್‌ಫಾರ್ಮರ್ ಆಳವಡಿಸಿಲ್ಲ. ಹೀಗಾಗಿ ರೈತರು ಅನಧಿಕೃತವಾಗಿ ವಿದ್ಯುತ್ ಸಂಪರ್ಕ ಪಡೆದಿದ್ದಾರೆ ಎಂದರು.

- Advertisement -

ಜಿಲ್ಲೆಯಲ್ಲಿ ದುಡ್ಡು ಕಟ್ಟಿರುವ ಹದಿಮೂರುವರೆ ಸಾವಿರ ರೈತರಿದ್ದಾರೆ. ಬಜೆಟ್ ಇಲ್ಲಾ ಎಂದು ಪ್ರತಿ ಬಾರಿ ಐವತ್ತು, ಅರವತ್ತು ಲಕ್ಷ ಕೊಡುತ್ತೀರಾ, ಅಷ್ಟು ಹಣದಲ್ಲಿ ಎಷ್ಟು ಟ್ರಾನ್ಸ್‌ಫಾರ್ಮರ್ ಅಳವಡಿಸಲು ಆಗುತ್ತದೆ. ಹಾಸನ ತಾಲ್ಲೂಕು ಒಂದರಲ್ಲಿ 1061 ರೈತರು ಹಣ ಕಟ್ಟಿದ್ದಾರೆ. ಇದು ಹೀಗೆ ಮುಂದುವರೆದರೆ, ರೈತರ ಹಿತ ಕಾಯದಿದ್ದರೆ ನಾವೆಲ್ಲರೂ ದೊಡ್ಡಮಟ್ಟದಲ್ಲಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಸರಿಯಾದ ಸಮಯದಲ್ಲಿ ವಿದ್ಯುತ್ ನೀಡದೆ ರೈತರು ಬೆಳೆದ ಬೆಳೆಗಳು ಹಾಳಾಗುತ್ತಿವೆ. ನಾಲ್ಕು ಗಂಟೆ ಅಂತ ಹೇಳಿ ಮೂರು ಗಂಟೆ ವಿದ್ಯುತ್ ನೀಡುತ್ತಿದ್ದಾರೆ. ಜೋಳ ಎಲ್ಲಾ ಒಣಗುವ ಮಟ್ಟಕ್ಕೆ ಬಂದಿದೆ. ಈ ರೈತರ ಕ್ಷೇಮ ಕಾಯದಿದ್ದರೆ ಪ್ರತಿಭಟನೆ ಮಾಡಲಾಗುವುದು ಎಂದರು.

ನಿಮ್ಮ ಉಚಿತ ಯೋಜನೆಯನ್ನು ನಾವ್ಯಾರು ಕೇಳುತ್ತಿಲ್ಲ. ರೈತರಿಗೆ ಸರಿಯಾದ ಸಮಯಕ್ಕೆ ವಿದ್ಯುತ್, ನೀರು, ರೈತರ ಬೆಳೆಗೆ ಸರಿಯಾದ ವೈಜ್ಞಾನಿಕ ಬೆಲೆ ನೀಡಿದರೆ ಅವರೇ ಅನುದಾನ ಕೊಡುತ್ತಾರೆ ಅಂತ ದೇವೇಗೌಡ ಅವರು 2009ರಲ್ಲೇ ಹೇಳಿದ್ದರು. ಇಂತಹ ಸಮಸ್ಯೆಗಳ ಬಗ್ಗೆ ಗಮನಹರಿಸಬೇಕೇ ಹೊರತು ಸರ್ಕಾರ ಬರೀ ಯೋಜನೆಗಳ ಬಗ್ಗೆ ತಲೆಕೆಡಿಸಿಕೊಂಡರೆ ಮುಂದಿನ ದಿನಗಳಲ್ಲಿ ಈ ಸರ್ಕಾರ ದಿವಾಳಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದರು.

ಜಿಲ್ಲಾ ಉಸ್ತುವಾರಿ ಸಚಿವರು ಹಾಸನಕ್ಕೆ ಬಂದ ವೇಳೆ ವಿದ್ಯುತ್ ಸಮಸ್ಯೆ ಬಗ್ಗೆ ಗಮನಕ್ಕೆ ತರುತ್ತೇನೆ. ರಾಜಣ್ಣ ಅವರ ಮೇಲೆ ನನಗೆ ವಿಶ್ವಾಸವಿದೆ. ಅವರು ಅಧಿಕಾರಿಗಳನ್ನು ಕರೆದು ಚರ್ಚಿಸಿ ನಿರ್ದೇಶನ ನೀಡುತ್ತಾರೆ ಎಂದು ಭಾವಿಸಿದ್ದೇನೆ ಎಂದರು.

Join Whatsapp