ಮೈಸೂರು: ಈ ಬಾರಿ ಕನ್ನಡಿಗರ ಬಹುಮತದ ಸರ್ಕಾರ ಬೇಕು. ಯಾವ ಪಕ್ಷದ ಜೊತೆಯೂ ಹೊಂದಾಣಿಕೆ ಮಾಡುವುದಿಲ್ಲ. ಪೂರ್ಣ ಪ್ರಮಾಣದ ಸರ್ಕಾರಕ್ಕೆ ಹೋರಾಟ ಮಾಡುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿದರು.
ಜನತಾ ಜಲಧಾರೆ ಯಾತ್ರೆಗೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮದು ವಿಚಾರಾಧಾರಿತವಾದ ಹೋರಾಟ. ಧರ್ಮ -ಧರ್ಮಗಳ ನಡುವೆ ಬೆಂಕಿ ಇಟ್ಟು ಮತ ಕೇಳುತ್ತಿಲ್ಲ. ಈ ಬಾರಿ ಜೆಡಿಎಸ್‌ಗೆ ಬಹುಮತ ಕೊಡಿ. 5 ವರ್ಷದಲ್ಲಿ ರಾಜ್ಯದ ನೀರಾವರಿ ಯೋಜನೆ ಅನುಷ್ಠಾನ ಮಾಡುತ್ತೇವೆ.ಸಾಧ್ಯವಾಗದಿದ್ದರೆ ಜೆಡಿಎಸ್ ವಿಸರ್ಜನೆ ಮಾಡಲಾಗುವುದು. ರಾಜ್ಯದ ಅಭಿವೃದ್ದಿಗಾಗಿ ನಮ್ಮ ಹೋರಾಟ ಎಂದು ಹೇಳಿದರು.
ನಮ್ಮ ಪಕ್ಷ ಬಿಟ್ಟುಹೋಗುವ ಮನಸ್ಸು ಮಾಡಿದವರಿಗೆ ಈಗ ಜ್ಞಾನೋದಯವಾಗುತ್ತಿದೆ. ಜ್ಞಾನೋದಯವಾಗಿ ಅವರು ಪಕ್ಷದಲ್ಲೇ ಉಳಿದರೆ ನನಗೇನು ಸಮಸ್ಯೆ ಇಲ್ಲ. ಪಕ್ಷ ಬಿಟ್ಟವರೂ ಕೂಡಾ ಪಕ್ಷಕ್ಕೆ ಬರುವ ಮಾತಾಡುತ್ತಿದ್ದಾರೆ. ಅವರು ಬಂದರೂ ಸಂತೋಷ. ಯಾವುದೇ ಪಕ್ಷದಿಂದ ಯಾರೇ ನಮ್ಮ ಪಕ್ಷಕ್ಕೆ ಬಂದರೂ ಸ್ವಾಗತ. ಆದರೆ ಅಧಿಕಾರಕ್ಕಾಗಿ ಪಕ್ಷಕ್ಕೆ ಬಂದರೆ ಅಂತವರಿಗೆ ನಮ್ಮಲ್ಲಿ ಅವಕಾಶ ಇಲ್ಲ. ಈ ಬಾರಿ ಹೊಸ ಮುಖಗಳಿಗೆ ಅವಕಾಶ ಕೊಡಬೇಕೆಂಬುದು ನನ್ನ ಆಸೆ ಎಂದು ಎಚ್ ಡಿಕೆ ಹೇಳಿದರು.